ಛತ್ತೀಸ್‌ಗಢದ ರಾಯ್‌ಪುರದಲ್ಲಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಭಾನುವಾರ ಬಿಜೆಪಿಯನ್ನು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಮೂರ್ಖರಿಗೆ ನುಡಿಗಟ್ಟುಗಳು ಅರ್ಥವಾಗಲ್ಲ” ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಪತ್ರಕರ್ತರು ಸಂಸದೆ ಮೊಯಿತ್ರಾಗೆ ರಾಜ್ಯದಲ್ಲಿ ಅಕ್ರಮ ಒಳನುಸುಳುವಿಕೆಯ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ್ದ ಮೊಯಿತ್ರಾ, “ಬಾಂಗ್ಲಾದೇಶದಿಂದ ನುಸುಳುವಿಕೆಯನ್ನು ತಡೆಯುವಲ್ಲಿ ಅಮಿತ್ ಶಾ ವಿಫಲರಾಗಿದ್ದು, ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು” ಎಂದು ಬಂಗಾಳಿ ಭಾಷೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್ಐಆರ್
ಈ ಹಿನ್ನೆಲೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಶನಿವಾರ ರಾಯ್‌ಪುರದ ಮಾನಾ ಪೊಲೀಸ್ ಠಾಣೆಯಲ್ಲಿ ಮೊಯಿತ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 196(ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 197 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Hello @RaipurPoliceCG this one’s for you. Be careful with filing fake cases. Courts see through them & then heads will roll. pic.twitter.com/ibLjPD5bGl
— Mahua Moitra (@MahuaMoitra) August 31, 2025
ಈ ಬಗ್ಗೆ ವಿಡಿಯೋ ಹೇಳಿಕೆಯನ್ನು ನೀಡಿರುವ ಮೊಯಿತ್ರಾ, “ಮೂರ್ಖರಿಗೆ ನುಡಿಗಟ್ಟುಗಳು ಅರ್ಥವಾಗಲ್ಲ, ‘ತಲೆಗಳು ಉರುಳುತ್ತವೆ’ ಎಂದು ಹೇಳುವುದರಿಂದ ನಿಜವಾಗಿಯೂ ಯಾರೊಬ್ಬರ ತಲೆಯನ್ನು ಕತ್ತರಿಸುವುದು ಎಂದು ಅರ್ಥವಲ್ಲ. ಇದು ರೂಪಕ. ಅಕ್ಷರಶಃ ಅನ್ವಯಿಸುವುದಿಲ್ಲ. ಒಬ್ಬರ ಜವಾಬ್ದಾರಿಯ ಮೇಲೆ ಹೊಣೆಗಾರಿಕೆಯನ್ನು ನಾವು ಬಯಸುವುದಾಗಿ ಹೇಳುವ ನುಡಿಗಟ್ಟಿದು. ನೀವು (ರಾಯ್‌ಪುರ ಪೊಲೀಸರು) ಗೂಗಲ್ ಅನುವಾದವನ್ನು ಬಳಸಿಕೊಂಡು ನಕಲಿ ಎಫ್‌ಐಆರ್ ದಾಖಲಿಸಿದ್ದೀರಿ” ಎಂದು ಆರೋಪಿಸಿದ್ದಾರೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
