ಭಾರತೀಯ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದ್ದು ಈ ವಿಚಾರದಲ್ಲಿ ಮಂಗಳವಾರ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಮಧ್ಯಮ ವರ್ಗದ ಹೂಡಿಕೆಗಳು ನಾಶವಾಗಿವೆ” ಎಂದು ಅಖಿಲೇಶ್ ಹೇಳಿದ್ದಾರೆ. ” ಸರ್ಕಾರವು ದೇಶೀಯ ಹೂಡಿಕೆದಾರರನ್ನು ರಕ್ಷಿಸುವಲ್ಲಿ ವಿಫಲವಾಗಿ ಜನರನ್ನು ದಾರಿ ತಪ್ಪಿಸುತ್ತಿದೆ” ಎಂದು ಕನ್ನೌಜ್ ಸಂಸದ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ವಿಫಲರಾದವರು ಗುರಿಯ ‘ಸಮಯ ಮಿತಿ’ ಬದಲಾಯಿಸುತ್ತಾರೆ: ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅಖಿಲೇಶ್ ಯಾದವ್, “ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಕುಸಿತವು ಮಧ್ಯಮ ವರ್ಗದ ಹೂಡಿಕೆಗಳನ್ನು ಕಬಳಿಸಿದೆ. ಪ್ರಪಂಚದಾದ್ಯಂತದ ಹೂಡಿಕೆದಾರರನ್ನು ಆಹ್ವಾನಿಸುವ ಸ್ಪರ್ಧೆಯಲ್ಲಿರುವ ‘ಡಬಲ್-ಎಂಜಿನ್’ ಸರ್ಕಾರಗಳು, ಇತರರಿಗೆ ಧೈರ್ಯ ತುಂಬಲು ‘ಮೋಸಗೊಳಿಸುವ ಕಾರ್ಯಕ್ರಮಗಳನ್ನು’ ಆಯೋಜಿಸುವ ಮೊದಲು ತಮ್ಮದೇ ಆದ ಹೂಡಿಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದಿದ್ದಾರೆ.
भारतीय शेयर बाज़ार में जारी गिरावट मध्य वर्ग के निवेश को लील गयी है। दुनिया भर से निवेशकों को आमंत्रण देने की होड़ में लगीं ‘डबल इंजन’ की सरकारें पहले अपने निवेशकों को तो सुरक्षित कर लें फिर किसी और को आश्वस्त करने के ‘ढोंगी इवेंट’ करें। कुछ महीनों से निफ़्टी के लगातार ख़राब…
— Akhilesh Yadav (@yadavakhilesh) February 25, 2025
“ಕಳೆದ ಕೆಲವು ತಿಂಗಳುಗಳಿಂದ ನಿಫ್ಟಿ ನಿರಂತರವಾಗಿ ಕುಸಿಯುತ್ತಿದೆ. ಈ ವರ್ಷದಲ್ಲಿ ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ ನಂತರ ಭಾರತೀಯ ಷೇರು ಮಾರುಕಟ್ಟೆಯು ಮೂರನೇ ಅತ್ಯಂತ ದುರ್ಬಲ ಮಾರುಕಟ್ಟೆಯಾಗಿದೆ” ಎಂದು ಎಸ್ಪಿ ನಾಯಕ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ ಬಜೆಟ್ಗೂ ಬಿಜೆಪಿ ಪ್ರಣಾಳಿಕೆಗೂ ಸಂಬಂಧವೇ ಇಲ್ಲ: ಅಖಿಲೇಶ್ ಯಾದವ್
“ಒಂದೆಡೆ 80 ಕೋಟಿ ಜನರು ಸರ್ಕಾರ ನೀಡುವ ಪಡಿತರದ ಆಧಾರದಲ್ಲಿಯೇ ಬದುಕುಳಿಯಬೇಕಾಗಿದೆ. ಇನ್ನೊಂದೆಡೆ ತಮ್ಮ ಉಳಿತಾಯವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದವರು ದಿವಾಳಿಯಾಗಿದ್ದಾರೆ. ಇಂತಹ ಭೀಕರ ಪರಿಸ್ಥಿತಿಗಳಲ್ಲಿಯೂ ಕೂಡಾ ಬಿಜೆಪಿ ಸರ್ಕಾರ ಸುಳ್ಳು ಹೇಳಿಕೊಂಡು ಜನರ ದಾರಿ ತಪ್ಪಿಸುತ್ತಿದೆ. ಈ ಆರ್ಥಿಕ ವಂಚನೆ ನಿಲ್ಲಬೇಕು” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಹೂಡಿಕೆದಾರರು ಇನ್ನು ಬಿಜೆಪಿ ಇಲ್ಲ ಎಂದು ಹೇಳುತ್ತಿರುವುದಾಗಿ ಅಖಿಲೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಭಾರತೀಯ ಷೇರುಪೇಟೆಯು ಭಾರೀ ಕುಸಿತ ಕಾಣುತ್ತಿದೆ. ಮಾರುಕಟ್ಟೆಯ ಕಾರ್ಯಕ್ಷಮತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ನಡುವೆ ಯಾದವ್ ಈ ಹೇಳಿಕೆಯನ್ನು ನೀಡಿದ್ದಾರೆ.
ಸೆನ್ಸೆಕ್ಸ್ ಸೋಮವಾರ ಶೇ. 1.14 ರಷ್ಟು ಕುಸಿದು 74,454.41 ಕ್ಕೆ ತಲುಪಿದರೆ, ನಿಫ್ಟಿ ಶೇ. 1.06 ರಷ್ಟು ಕುಸಿದು 22,553.35 ಕ್ಕೆ ತಲುಪಿದೆ. ಕಳೆದ ಐದು ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಆದರೆ ಮಂಗಳವಾರ ಕೊಂಚ ಚೇತರಿಸಿಕೊಂಡಿದೆ.
