ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊದಲ ಆದೇಶದ ಎರಡು ದಿನಗಳ ನಂತರ, ಜಾರಿ ನಿರ್ದೇಶನಾಲಯದ ಜೈಲಿನಿಂದಲೇ ತಮ್ಮ ಎರಡನೇ ಆದೇಶವನ್ನು ಹೊರಡಿಸಿದ್ದಾರೆ.
ದೆಹಲಿ ಸಚಿವ ಸೌರಭ್ ಭಾರದ್ವಾಜ್ ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಸರ್ಕಾರಿ ಮೊಹಲ್ಲಾ ಕ್ಲಿನಿಕ್ಗಳಲ್ಲಿ ಉಚಿತ ಔಷಧಿಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎರಡನೇ ಆದೇಶ ಹೊರಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಮುಖ್ಯಮಂತ್ರಿಯವರು ಜೈಲಿನಲ್ಲಿದ್ದರೂ ಕೂಡ ದೆಹಲಿಯ ನಿವಾಸಿಗಳು ಯಾವುದೇ ರೀತಿಯ ತೊಂದರೆ ಎದುರಿಸದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಭಾರದ್ವಾಜ್ ಹೇಳಿದರು.
“ದುರ್ಬಲ ವರ್ಗದವರು, ದಲಿತ ಸಮುದಾಯದವರು ಔಷಧಿಗಳನ್ನು ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋದಾಗ, ಅವರಿಗೆ ಔಷಧಿಗಳು ದೊರೆಯಬೇಕು. ಮಧ್ಯಮ ವರ್ಗದವರು ಔಷಧಿಗಳನ್ನು ಖರೀದಿಸಬಹುದು. ಆದರೆ ದೆಹಲಿಯ ಲಕ್ಷಾಂತರ ದೀನದಲಿತ ಕುಟುಂಬಗಳು ಔಷಧಿಗಳಿಗಾಗಿ ಸರ್ಕಾರಿ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ” ಎಂದು ಆರೋಗ್ಯ ಖಾತೆಯ ಉಸ್ತುವಾರಿ ಭಾರದ್ವಾಜ್ ಹೇಳಿದರು.
“ನಿಯಮಿತ ರಕ್ತ ಪರೀಕ್ಷೆಗಳಿಗಾಗಿ ಅನೇಕ ಜನರು ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ಗಳನ್ನು ಅವಲಂಬಿಸಿದ್ದಾರೆ. ಕೆಲವು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಉಚಿತ ಪರೀಕ್ಷಾ ಸೌಲಭ್ಯದಲ್ಲಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ಬಂದಿದೆ. ಆದ್ದರಿಂದ, ಎಲ್ಲ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳು ಉಚಿತವಾಗಿ ಪರೀಕ್ಷೆಗಳು ಹಾಗೂ ಔಷಧಿಗಳನ್ನು ಒದಗಿಸುತ್ತಿರುವ ಕುರಿತು ಮಾಹಿತಿ ನೀಡುವಂತೆ ನನಗೆ ತಿಳಿಸಿದ್ದಾರೆ. ನಮಗೆ, ಅವರ ನಿರ್ದೇಶನವು ದೇವರ ಆಜ್ಞೆಯಂತಿದೆ. ನಾವೂ ಕೂಡ ಈ ಬಗ್ಗೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ಬಂಧನ ಖಂಡಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಎಎಪಿ ಸಜ್ಜು; ಹೆಚ್ಚಿದ ಭದ್ರತೆ
“ಕೇಜ್ರಿವಾಲ್ ಜೈಲಿನಲ್ಲಿದ್ದರೂ ಪ್ರತಿ ಕ್ಷಣವೂ ದೆಹಲಿ ನಿವಾಸಿಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಯಾವುದೇ ಸೇವೆಗೆ ತೊಂದರೆಯಾಗಬಾರದೆಂಬುದು ಅವರ ಏಕೈಕ ಕಾಳಜಿಯಾಗಿದೆ. ಅವರ ಹೋರಾಟದಲ್ಲಿ ನಾವು ಅವರ ಸೈನಿಕರಿದ್ದಂತೆ. ಹಾಗಾಗಿ ನಾವೂ ಕೂಡಾ ಹಗಲಿರುಳು ಕೆಲಸ ಮಾಡಿ, ದೆಹಲಿ ಜನತೆಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.