ಅಸ್ಸಾಂನಲ್ಲಿ ನಡೆದ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಪ್ರಾದೇಶಿಕ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಹಗ್ರಾಮಾ ಮೊಹಿಲರಿ ನೇತೃತ್ವದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಭರ್ಜರಿ ಗೆಲುವು ಸಾಧಿಸಿದೆದ. ಒಟ್ಟು 40 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಬಿಪಿಎಫ್ ಗೆದ್ದಿದ್ದರೆ, ಬಿಜೆಪಿ ಕೇವಲ 5 ಸ್ಥಾನಗಳನ್ನು ಮಾತ್ರವೇ ಗೆದ್ದಿದೆ.
ಬಿಟಿಸಿ – ಅಸ್ಸಾಂ ರಾಜ್ಯದಲ್ಲಿ ಬೋಡೋ ಜನರಿಗಾಗಿ ಸ್ಥಾಪಿತ ಸ್ವಾಯತ್ತ ಆಡಳಿತ ಸಂಸ್ಥೆಯಾಗಿದೆ. ಈ ಸಂಸ್ಥೆಯು ಅಸ್ಸಾಂನ ಕೊಕರಾಝಾರ್, ಚಿರಾಂಗ್, ಬಕ್ಸಾ ಹಾಗೂ ಉದಾಲ್ಗುರಿ ಜಿಲ್ಲೆಗಳಲ್ಲಿ ಬೋಟೋ ಜನರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ.ಬಿಟಿಸಿ ಒಟ್ಟು 46 ಸ್ಥಾನಗಳನ್ನು ಹೊಂದಿದ್ದು, 40 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉಳಿದ 6 ಸದಸ್ಯರನ್ನು ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡುತ್ತದೆ.
ಈ ಬಾರಿಯ ಚುನಾವಣೆಯಲ್ಲಿ, ಬಿಟಿಸಿ ಆಡಳಿತದಲ್ಲಿದ್ದ ಬಿಜೆಪಿ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮೈತ್ರಿಕೂಟವು ಹೀನಾಯ ಸೋಲು ಕಂಡಿದೆ. ಯುಪಿಪಿಎಲ್ ಪಕ್ಷವು 7 ಸ್ಥಾನಗಳು ಮತ್ತು ಬಿಜೆಪಿ 5 ಸ್ಥಾನಗಳನ್ನು ಮಾತ್ರವೇ ಗೆದ್ದಿವೆ. ಬಿಪಿಎಫ್ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಚುನಾವಣೆಯಲ್ಲಿ ನಿರ್ಗಮಿತ ಬಿಟಿಸಿ ಮುಖ್ಯಸ್ಥ ಪ್ರಮೋದ್ ಬೊರೊ ಅವರು ಗೋಯಿಮರಿ ಮತ್ತು ಡೋಟ್ಮಾ – ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ, ಗೋಯಿಮರಿ ಕ್ಷೇತ್ರದಲ್ಲಿ ಗೆದ್ದಿರುವ ಅವರು, ಡೋಡ್ಮಾದಲ್ಲಿ ಸೋಲು ಕಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರದ ಭೂಮಿ ಲೂಟಿ: ಅದಾನಿ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮೋದಿ ಸರ್ಕಾರದ ನೇರ ಪಾತ್ರ
2020ರ ಚುನಾವಣೆಯಲ್ಲಿ ಬಿಪಿಎಫ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಯುಪಿಪಿಎಲ್ 12 ಸ್ಥಾನಗಳನ್ನು ಗೆದ್ದಿತು, ಬಿಜೆಪಿ 9 ಮತ್ತು ಗಣ ಸುರಕ್ಷಾ ಪಕ್ಷ (ಜಿಎಸ್‌ಪಿ) 1 ಹಾಗೂ ಕಾಂಗ್ರೆಸ್ 1 ಸ್ಥಾನಗಳನ್ನು ಗೆದ್ದಿತು. ಆದಾಗ್ಯೂ ಯುಪಿಪಿಎಲ್, ಬಿಜೆಪಿ ಹಾಗೂ ಜಿಎಸ್‌ಪಿ ಮೈತ್ರಿ ಮಾಡಿಕೊಂಡು ಮಂಡಳಿಯಲ್ಲಿ ಆಡಳಿತ ಸ್ಥಾಪಿಸಿದ್ದವು. ಕಾಂಗ್ರೆಸ್‌ನ ಏಕೈಕ ಸದಸ್ಯ ಕೂಡ ಬಿಜೆಪಿ ಸೇರಿಕೊಂಡಿದ್ದರು.
ಬಿಪಿಎಫ್ ಕೂಡ ಕೇಂದ್ರ ಸರ್ಕಾರದಲ್ಲಿ ಎನ್‌ಡಿಎಯ ಭಾಗವಾಗಿದೆ. ಆದರೆ, ಅಸ್ಸಾಂ ಪ್ರಾದೇಶಿಕ ಚುನಾವಣೆಗಳಲ್ಲಿ ಬಿಜೆಪಿಯ ಸಖ್ಯದಿಂದ ಹೊರಗುಳಿದಿದೆ.
ಬಿಟಿಸಿಗೆ ಸೆಪ್ಟೆಂಬರ್ 22ರಂದು ಚುನಾವಣೆ ನಡೆದಿತ್ತು. 13,34,600 ಮಹಿಳೆಯರು, 13,23,536 ಪುರುಷರು ಹಾಗೂ 17 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 26,58,153 ಮತದಾರರಲ್ಲಿ 78% ಜನರು ಮತ ಚಲಾಯಿಸಿದ್ದರು.