ಆನ್‌ಲೈನ್ ಗೇಮ್ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಮತ್ತು ಆನ್‌ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಯಕ (ಇಡಿ) ಬಂಧಿಸಿದ್ದಾರೆ. ಪಪ್ಪಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ. ಆದಾಗ್ಯೂ, ಇಡಿ ಅಧಿಕಾರಿಗಳನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಚಿತ್ರದುರ್ಗದ ಶಾಸಕರಾಗಿರುವ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ನಾಲ್ಕು ದಿನಗಳ ಹಿಂದೆ ಬಂಧಿಸಿದ್ದರು. ಅವರನ್ನು ಗುರುವಾರ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ. ಈ ವೇಳೆ, ವೀರೇಂದ್ರ ಪಪ್ಪಿ ಅವರಿಗೆ ಇಡಿ ಅಧಿಕಾರಿಗಳು ತೀವ್ರ ತೊಂದರೆ ಕೊಡುತ್ತಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ಒದಗಿಸುತ್ತಿಲ್ಲ ಎಂದು ಪಪ್ಪಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಇದೇ ಕಾರಣಕ್ಕೆ, ಪಪ್ಪಿ ಅವರಿಗೆ ಜಾಮೀನು ನೀಡಬೇಕೆಂದು ವಾದಿಸಿದ್ದಾರೆ.
ಈ ವಿಚಾರವಾಗಿ ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಗಜಾನನ ಭಟ್, “ಆರೋಪಿ ವಿರೇಂದ್ರ ಪಪ್ಪಿ ಅವರಿಗೆ ನಿದ್ದೆಗೆ ಸಮಯ ನೀಡಬೇಕು, ಶುದ್ಧ ಕುಡಿಯುವ ನೀರು ಒದಗಿಸಬೇಕು, ಔಷಧಗಳನ್ನು ಪೂರೈಕೆ ಮಾಡಬೇಕು, ವಿಶ್ರಾಂತಿಗೆ ಅವಕಾಶ ಕೊಡಬೇಕು. ಪ್ರತಿದಿನ 30 ನಿಮಿಷ ತಮ್ಮ ವಕೀಲರನ್ನು ಭೇಟಿ ಮಾಡಲು ಅನುವು ಮಾಡಿಕೊಡಬೇಕು” ಎಂದು ಸೂಚಿಸಿದ್ದಾರೆ.
ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಲಾಗಿದೆ. ಆದರೆ, ಯಾವ ಪ್ರಕರಣ ಆದರಿಸಿ ತನಿಖೆ ಆರಂಭಿಸಲಾಗಿದೆ ಎಂಬುದನ್ನು ಇಡಿ ಅಧಿಕಾರಿಗಳು ತಿಳಿಸಿಲ್ಲ. ಈ ವಿಚಾರದಲ್ಲಿ, ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳನ್ನು ಇಡಿ ಅಧಿಕಾರಿಗಳು ಅನುಸರಿಸಿಲ್ಲ. ಅಲ್ಲದೆ, 2016ರಲ್ಲಿ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಬಂಧನದಲ್ಲಿ ಉಲ್ಲೇಖಿಸಲಾಗಿದೆ ಎಂದು ಪಪ್ಪಿ ಪರ ವಕೀಲರು ವಾದಿಸಿದ್ದಾರೆ.
ಸಿಬಿಐ ದಾಖಲಿಸಿದ್ದ ಪ್ರಕರಣ ಮುಕ್ತಾಯಗೊಂಡಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯವು ಇಡಿ ವಿರುದ್ಧ ಛಾಟಿ ಬೀಸಿದೆ. “ಪಪ್ಪಿ ವಿರುದ್ಧ 2011ರ ಕೇಸ್ ರದ್ದಾಗಿದೆ. 2016ರ ಸಿಬಿಐ ಪ್ರಕರಣವೂ ಮುಕ್ತಾಯಗೊಂಡಿದೆ. ಹೀಗಿರುವಾಗ, ಬಂಧನದ ಸಮಯದಲ್ಲಿ ಯಾವುದೋ ಪ್ರಕರಣವನ್ನು ಉಲ್ಲೇಖಿಸಿದ್ದೀರಿ. ಯಾವ ಪ್ರಕರಣ ಆಧರಿಸಿ ಇಸಿಐಆರ್ ದಾಖಲಿಸಿದ್ದೀರಿ? ನ್ಯಾಯಾಲಯವನ್ನು ಯಾಕೆ ದಾರಿ ತಪ್ಪಿಸುತ್ತಿದ್ದೀರಿ. ಸರಿಯಾದ ಮಾಹಿತಿ/ದಾಖಲೆಗಳನ್ನು ಒದಗಿಸಿ” ಎಂದು ತಾಕೀತು ಮಾಡಿದೆ.