ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ಕಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ-ಜೆಡಿಯು ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ತಂತ್ರಗಳನ್ನು ಹೆಣೆಯುತ್ತಿದೆ. ಆಡಳಿತರಾಢ ಸರ್ಕಾರದಿಂದ ಅಧಿಕಾರ ಕಿತ್ತುಕೊಳ್ಳಲು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿ ಕೂಟ ಎದುರು ನೋಡುತ್ತಿದೆ. ಈ ನಡುವೆ, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ‘ಜನ ಸುರಾಜ್‘ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್‌ಜೆಪಿ ಕೂಡ ಭಾಗವಾಗಿದೆ. ಆದರೆ, ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ-ಜೆಡಿಯು ಜೊತೆ ಎಲ್‌ಜೆಪಿ ಜಟಾಪಟಿ ನಡೆಸುತ್ತಿದೆ. ಚಿರಾಗ್ ಪಾಸ್ವಾನ್ ಅವರು ಕೇಳುತ್ತಿರುವ 40 ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಸಿದ್ದವಾಗಿಲ್ಲ. ಹೀಗಾಗಿ, ಎನ್‌ಡಿಎಯಿಂದ ಎಲ್‌ಜೆಪಿ ಹೊರಬರಲಿದೆ ಎಂದು ವರದಿಯಾಗಿದೆ.
ಒಂದು ವೇಳೆ, ಎನ್‌ಡಿಎಯಿಂದ ಎಲ್‌ಜೆಪಿ ಹೊರಬಂದರೆ, ಪ್ರಶಾಂತ್ ಕಿಶೋರ್ ಅವರೊಂದಿಗೆ ಚಿರಾಗ್ ಪಾಸ್ವಾನ್ ಮಾತುಕತೆ ನಡೆಸಬಹುದು. ಎಲ್‌ಜೆಪಿ ಮತ್ತು ಜನ ಸುರಾಜ್ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | 35 ವರ್ಷಗಳಲ್ಲಿ ಲಾಲೂ-ನಿತೀಶ್ ದೋಸ್ತಿ-ಕುಸ್ತಿಯದ್ದೇ ಆಡಳಿತ
ಮೂಲಗಳ ಪ್ರಕಾರ, ಎನ್‌ಡಿಎಯಲ್ಲಿ ಸೀಟು ಹಂಚಿಕೆ ಅಂತಿಮ ಹಂತದಲ್ಲಿದ್ದು, ಒಟ್ಟು 243 ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಎನ್‌ಡಿಎ ತಲಾ 100 ಸ್ಥಾನ ಹಂಚಿಕೊಳ್ಳಲು ನಿರ್ಧರಿಸಿವೆ. ಉಳಿದ ಸ್ಥಾನಗಳನ್ನು ಇತರ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲು ಯೋಜಿಸಿವೆ ಎಂದು ಹೇಳಲಾಗುತ್ತಿದೆ.
ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ, ಹಿಂದುಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಹಾಗೂ ರಾಷ್ಟ್ರೀಯ ಲೋಕ್ ಮೋರ್ಚಾ (ಆರ್‌ಎಲ್‌ಎಂ) ಭಾಗವಾಗಿವೆ.