ಬಿಹಾರ ಚುನಾವಣೆ | 35 ವರ್ಷಗಳಲ್ಲಿ ಲಾಲೂ-ನಿತೀಶ್‌ ದೋಸ್ತಿ-ಕುಸ್ತಿಯದ್ದೇ ಆಡಳಿತ

Date:

Advertisements
35 ವರ್ಷಗಳ ಹಿಂದೆ, ಬಿಹಾರದಲ್ಲಿ ಕಾಂಗ್ರೆಸ್‌ನ ಅಧಿಪತ್ಯ ಕೊನೆಗೊಂಡಿತು. ಅಂದಿನಿಂದ ಇಂದಿನವರೆಗಿನ ದೀರ್ಘಾವಧಿಯ ಬಿಹಾರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯವಿದೆ.

ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 6ರಿಂದ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ಬಿಹಾರದ ಗದ್ದುಗೆ ಯಾರದ್ದಾಗಲಿದೆ ಎಂಬುದು ನವೆಂಬರ್ 14ರಂದು ಗೊತ್ತಾಗಲಿದೆ. 18ನೇ ವಿಧಾನಸಭೆಯ ಮುಖ್ಯಮಂತ್ರಿ ಗದ್ದುಗೆ ಯಾರ ಪಾಲಾಗಲಿದೆ ಎಂಬುದನ್ನು ಸ್ಪಷ್ಟ ಚಿತ್ರಣ ಸಿಗಲಿದೆ. ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಸತತ 6ನೇ ಬಾರಿಗೆ (ಒಟ್ಟು 9 ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರೇ? ಅಥವಾ 20 ವರ್ಷಗಳ ಬಳಿಕ ಆರ್‌ಜೆಡಿ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ದೊರೆಯುವುದೇ ಮತ್ತು ಕಳೆದ 35 ವರ್ಷಗಳ ಬಳಿಕ, ಕಾಂಗ್ರೆಸ್‌ ತನ್ನ ನೆಲೆಯನ್ನು ಮರಳಿ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುವುದೇ? ಎಂಬುದನ್ನು ದೇಶದ ಜನರು ಎದುರು ನೋಡುತ್ತಿದ್ದಾರೆ. ಸದ್ಯ, ಭಾರತದ ಚಿತ್ತ ಬಿಹಾರದತ್ತ ತಿರುಗಿದೆ.

35 ವರ್ಷಗಳ ಹಿಂದೆ, ಬಿಹಾರದಲ್ಲಿ ಕಾಂಗ್ರೆಸ್‌ನ ಅಧಿಪತ್ಯ ಕೊನೆಗೊಂಡಿತು. ಅಂದಿನಿಂದ ಇಂದಿನವರೆಗಿನ ದೀರ್ಘಾವಧಿಯ ಬಿಹಾರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯವಿದೆ. ಬಿಹಾರದಲ್ಲಿ, 1990ರ ನಂತರದಲ್ಲಿ 15 ವರ್ಷಗಳ ಕಾಲ ಲಾಲೂ ಪ್ರಸಾದ್ ಮತ್ತವರ ಆರ್‌ಜೆಡಿ ಆಡಳಿತ ನಡೆಸಿದ್ದಾರೆ. ಕಳೆದ 20 ವರ್ಷಗಳಿಂದ ನಿತೀಶ್‌ ಕುಮಾರ್ ಅಧಿಕಾರದ ಗದ್ದುಗೆಯಲ್ಲಿ ಮೆರೆಯುತ್ತಿದ್ದಾರೆ. ಪದೇ-ಪದೇ ಮೈತ್ರಿಯನ್ನು ಬದಲಿಸುತ್ತಿರುವ ನಿತೀಶ್, ಮುಖ್ಯಮಂತ್ರಿ ಹುದ್ದೆಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದಾರೆ.

ಬಿಹಾರ ರಾಜಕೀಯವು ಆರ್‌ಜೆಡಿ ಮತ್ತು ಜೆಡಿಯು ನಡುವಿನ ಪ್ರಮುಖ ಜಿದ್ದಾಜಿದ್ದಿಗೆ ನೆಲೆಯಾಗಿದ್ದರೂ, ಉಭಯ ಪಕ್ಷಗಳು ಆಗಾಗ್ಗೆ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿರುವ ಉದಾಹರಣೆಗಳೂ ಇವೆ. ಈ ಪಕ್ಷಗಳ ಭುಜದ ಮೇಲೆ ಕುಳಿತು, ಚುನಾವಣೆ ಎದುರಿಸುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿವೆ.

Advertisements

1970ರ ದಶಕದಲ್ಲಿ ಕರ್ಪೂರಿ ಠಾಕೂರ್ ನೇತೃತ್ವದ ಸಮಾಜವಾದಿ ಚಳವಳಿ, ಅದೇ ಅವಧಿಯ ಜಯಪ್ರಕಾಶ್ ನಾರಾಯಣ ನೇತೃತ್ವದ ಜೆಪಿ ಚಳವಳಿ ಹಾಗೂ ಜನತಾದಳದ ಉದಯವು ಬಿಹಾರದಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾಯಿತು. 1990ರ ವೇಳೆಗೆ ಕಾಂಗ್ರೆಸ್‌ ಬಿಹಾರ ರಾಜಕಾರಣದಲ್ಲಿ ನಗಣ್ಯವಾಯಿತು.

ಇದೇ ಅವಧಿಯಲ್ಲಿ, ಬಿಹಾರ ರಾಜಕೀಯದ ಇಬ್ಬರು ಪ್ರಬಲ ರಾಜಕೀಯ ನಾಯಕರಾದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್‌ ಕುಮಾರ್ ಏಕಕಾಲದಲ್ಲಿ ರಾಜಕಾರಣಕ್ಕೆ ಬಂದರು. ಸ್ನೇಹಿತರಾಗಿ ಬೆಳೆದರು. 1975ರಲ್ಲಿ ಆರಂಭವಾದ ಜೆಪಿ ಚಳವಳಿಯ ಮೂಲಕ ಇಬ್ಬರೂ ರಾಜಕೀಯಕ್ಕೆ ಹೆಜ್ಜೆ ಇಟ್ಟವರು. ಇಬ್ಬರೂ ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದರು. ಲಾಲೂ ಸ್ವಲ್ಪ ಹಿರಿಯರು ಮತ್ತು ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1977ರಲ್ಲಿ ಲಾಲೂ ಛಾಪ್ರಾದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. ಆ ಸಮಯದಲ್ಲಿ ಅವರು ಸದನದ ಕಿರಿಯ ಶಾಸಕರಾಗಿದ್ದರು. 1980ರಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 1985ರಲ್ಲಿ ಮತ್ತೊಮ್ಮೆ ಗೆದ್ದರು. ಅದೇ ಚುನಾವಣೆಯಲ್ಲಿ, ನಿತೀಶ್ ಅವರು ಹರನೌತ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ವಿಧಾನಸಭೆಯಲ್ಲಿ ಇಬ್ಬರೂ ಕಾಣಿಸಿಕೊಂಡರು. 1989ರಲ್ಲಿ ನಿತೀಶ್‌ರ ಬೆಂಬಲದೊಂದಿಗೆ ಲಾಲೂ ಅವರು ವಿರೋಧ ಪಕ್ಷದ ನಾಯಕರಾದರು.

1990ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಅಭೂತಪೂರ್ವ ಗೆಲುವನ್ನು ಸಾಧಿಸಿತು. ಲಾಲೂ ಪ್ರಸಾದ್ ಯಾದವ್ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯೂ ಆದರು. ಲಾಲೂ ಮುಖ್ಯಮಂತ್ರಿ ಗದ್ದುಗೆ ಏರುವಲ್ಲಿ ನಿತೀಶ್‌ ಕುಮಾರ್ ಅವರ ಪಾತ್ರ ಬಹುಮುಖ್ಯವಾಗಿತ್ತು. ಅವರು ಜನತಾದಳದ ಚಾಣಾಕ್ಷರಾಗಿದ್ದರು ಎಂದು ಹೇಳಲಾಗಿದೆ.

ಈ ಜೋಡಿಯು ಮಂಡಲ್ ಆಯೋಗದ ಶಿಫಾರಸುಗಳನ್ನು ಬಿಹಾರದಲ್ಲಿ ಜಾರಿಗೆ ತಂದು, ಒಬಿಸಿಗಳಿಗೆ ಮೀಸಲಾತಿ ನೀಡಿತು. ಇದು, ಬಿಹಾರದ ರಾಜಕೀಯ ನೆಲೆಯನ್ನು ಬದಲಿಸಿತು. ಆದಾಗ್ಯೂ, ಕೆಲವೇ ವರ್ಷಗಳಲ್ಲಿ ಲಾಲೂ ಮತ್ತು ನಿತೀಶ್ ಅವರ ಸಂಬಂಧ ಹಳಸಿತು. ಲಾಲೂ ನೇತೃತ್ವದ ಆಡಳಿತದಲ್ಲಿ ಯಾದವ ಸಮುದಾಯಕ್ಕೆ ಹೆಚ್ಚು ಅಧಿಕಾರ/ಆಡಳಿತದ ಅವಕಾಶಗಳು ದೊರೆಯುತ್ತಿವೆ. ಯಾದವೇತರ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಭುಗಿಲೆದ್ದವು. ವಿಶೇಷವಾಗಿ, ಕುರ್ಮಿ ಸಮುದಾಯವು ಬೃಹತ್ ಪ್ರತಿಭಟನೆಗಳನ್ನು ನಡೆಸಿತು. 1994ರ ಫೆಬ್ರವರಿಯಲ್ಲಿ ಪಾಟ್ನಾದಲ್ಲಿ ನಡೆದ ಪ್ರತಿರೋಧ ಸಮಾವೇಶದಲ್ಲಿ ಕುರ್ಮಿ ಸಮುದಾಯಕ್ಕೆ ಸೇರಿದ ನಿತೀಶ್‌ ಭಾಗವಹಿಸಿದರು. ಅದು, ಲಾಲೂ-ನಿತೀಶ್‌ ನಡುವಿನ ಒಡಕನ್ನು ಬಹಿರಂಗಗೊಳಿಸಿತು. 1994ರಲ್ಲಿ ನಿತೀಶ್‌ ಮತ್ತು ಜಾರ್ಜ್‌ ಫರ್ನಾಂಡಿಸ್‌ ಜೊತೆಗೂ ಸಮತಾ ಪಕ್ಷವನ್ನು ಆರಂಭಿಸಿದರು. ಅದಾದ 10 ವರ್ಷಗಳಲ್ಲಿ ಲಾಲೂ ಆಡಳಿತಕ್ಕೆ ಅಂತ್ಯಹಾಡುವ ಮೂಲಕ ನಿತೀಶ್‌ ಮುಖ್ಯಮಂತ್ರಿ ಗದ್ದುಗೆ ಏರಿದರು.

Nitish Kumar Lalu Prasad Yadav

ನಿತೀಶ್ ಅವರು 1989ರಿಂದ 1999ರವರೆಗೆ ಹೆಚ್ಚಾಗಿ ರಾಷ್ಟ್ರ ರಾಜಕಾರಣದಲ್ಲಿ ಗಮನ ಹರಿಸಿದ್ದರು. 1989, 1991, 1996, 1998 ಹಾಗೂ 1999ರ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆದ್ದು ಲೋಕಸಭೆಯಲ್ಲಿದ್ದರು. ಆದರೂ, 1997ರಲ್ಲಿ ಲಾಲೂ ಪ್ರಸಾದ್ ಯಾದವ್ ವಿರುದ್ದ ‘ಮೇವು ಹಗರಣ’ದ ಆರೋಪ ಕೇಳಿಬಂದು, ಲಾಲೂ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಗದ್ದುಗೆ ಕಳೆದುಕೊಂಡ ಲಾಲೂ, ತಮ್ಮ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪತ್ನಿ ರಾಬ್ರಿ ದೇವಿ ಅವರನ್ನು ಪ್ರತಿಷ್ಠಾಪಿಸಿದರು. ರಾಬ್ರಿ ದೇವಿ ಅವರು 1997 ರಿಂದ 2005 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಇದೇ ಅವಧಿಯಲ್ಲಿ, 1996ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ನಿತೀಶ್‌ ಅವರ ಸಮತಾ ಪಕ್ಷವು ಬಿಜೆಪಿ ಜೊತೆ ಮೊದಲ ಬಾರಿಗೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿ 2,000ದ ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರೆಯಿತು. ಆ ಚುನಾವಣೆ ಬಳಿಕ, ನಿತೀಶ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಸಂಖ್ಯಾಬಲ ಸಾಬೀತುಪಡಿಸಲಾಗದೆ ಏಳು ದಿನಗಳಲ್ಲಿ ರಾಜೀನಾಮೆ ನೀಡಬೇಕಾಯಿತು.

2005ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಎನ್‌ಡಿಎ 88 ಸ್ಥಾನಗಳನ್ನು ಗೆದ್ದುಕೊಂಡಿತು. ನಿತೀಶ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಲಾಲೂ-ರಾಬ್ರಿ ಆಡಳಿತದ 15 ವರ್ಷಗಳ ಆಡಳಿತ ಅಂತ್ಯಗೊಂಡಿತು. ನಿತೀಶ್‌ ಪರ್ವ ಆರಂಭವಾಯಿತು. ಕಳೆದ 20 ವರ್ಷಗಳಲ್ಲಿ ಒಂದು ವರ್ಷವನ್ನು ಹೊರತು ಪಡಿಸಿ, ಉಳಿದೆಲ್ಲ ಸಮಯದಲ್ಲೂ ನಿತೀಶ್ ನಿರಂತರ ಅಧಿಕಾರದಲ್ಲಿದ್ದಾರೆ.

ಈ ಲೇಖನ ಓದಿದ್ದೀರಾ?: ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

35 ವರ್ಷಗಳ ಬಿಹಾರ ರಾಜಕಾರಣದಲ್ಲಿ ಮುನ್ನಲೆಯಲ್ಲಿರುವ ಈ ಇಬ್ಬರೂ, ರಾಷ್ಟ್ರೀಯ ರಾಜಕೀಯದ ಮೇಲೂ ಪ್ರಭಾವ ಬೀರಿದ್ದಾರೆ. ಕೇಂದ್ರದಲ್ಲಿ ಸರ್ಕಾರ ರಚನೆಯಾದ ಹಲವಾರು ಒಕ್ಕೂಟಗಳಿಗೆ ನಿರ್ಣಾಯಕ ಬೆಂಬಲ ನೀಡಿ, ಸರ್ಕಾರಗಳಿಗೆ ಸಾಥ್ ಕೊಟ್ಟಿದ್ದಾರೆ.

ಮಾತ್ರವಲ್ಲದೆ, ಬಿಹಾರದಲ್ಲಿ ಸಾಮಾಜಿಕ ನ್ಯಾಯ ಆಧಾರಿತ ರಾಜಕೀಯದ ಎರಡು ವಿಭಿನ್ನ ಮಾದರಿಗಳನ್ನು ಅನುಸರಿಸಿದ್ದಾರೆ. ಇಬ್ಬರೂ ಒಬಿಸಿ ಸಮುದಾಯಗಳನ್ನು ತಮ್ಮ ರಾಜಕೀಯದ ಬುನಾದಿ ಮಾಡಿಕೊಂಡಿದ್ದರು. ಒಬಿಸಿ ಸಮುದಾಯಗಳ ವಿಭಿನ್ನ ವರ್ಗಗಳಿಗಾಗಿ ಹೆಚ್ಚು ಒತ್ತುಕೊಟ್ಟಿದ್ದರು. ಲಾಲೂ ಮಂಡಲ್ ವರದಿ ನಂತರದ ಸಾಮಾಜಿಕ-ರಾಜಕೀಯ ವಾತಾವರಣದಲ್ಲಿ ತನ್ನನ್ನು ಜನಸಾಮಾನ್ಯರ ವೀರ ಮತ್ತು ಸಾಮಾಜಿಕ ನ್ಯಾಯದ ಮಸೀಹನಾಗಿ ಚಿತ್ರಿಸಿಕೊಂಡಿದ್ದರು. ಬಿಹಾರದ ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚಿನ ಸವಲತ್ತುಗಳನ್ನು ಪಡೆದಿದ್ದ ಪ್ರಮುಖ ಜಾತಿಗಳ ಪ್ರಾಬಲ್ಯವನ್ನು ಅಂತ್ಯಗೊಳಿಸಿದ ಕೀರ್ತಿಯು ಲಾಲೂ ಅವರದ್ದೇ ಆಗಿದೆ. ಲಾಲೂ ಯಾದವರು ಮತ್ತು ಮುಸ್ಲಿಮರನ್ನು ತಮ್ಮ ರಾಜಕೀಯದ ತಳಹದಿ ಮಾಡಿಕೊಂಡಿದ್ದರು.

ಮತ್ತೊಂದೆಡೆ, ನಿತೀಶ್ ಅವರು ಬಿಹಾರದ ಜನಸಂಖ್ಯೆಯ ಕೇವಲ 3% ರಷ್ಟಿರುವ ತಮ್ಮ ಕುರ್ಮಿ ಜಾತಿಯನ್ನು ಮೀರಿ, ವಿವಿಧ ವರ್ಗಗಳಲ್ಲಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಂಡರು. ಕುರ್ಮಿ, ಕೊಯಿರಿ ಮತ್ತು ಅತೀ ಹಿಂದುಳಿದ ವರ್ಗಗಳು (ಇಬಿಸಿ) ಹಾಗೂ ದಲಿತರು ಸೇರಿದಂತೆ ವಿಭಿನ್ನ ಸಮುದಾಯಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಹೆಚ್ಚು ಸದ್ದು ಮಾಡದ ನಿತೀಶ್‌, ತಮ್ಮನ್ನು ತಾವು ‘ಸುಶಾಸನ ಬಾಬು’ (ಒಳ್ಳೆಯ ಆಡಳಿತಗಾರ) ಎಂದು ಬಿಂಬಿಸಿಕೊಂಡಿದ್ದಾರೆ. ಬಿಹಾರಕ್ಕೆ ಉತ್ತಮ ಯೋಜನೆಯನ್ನು ತಂದಿದ್ದೇನೆಂದು ಹೇಳಿಕೊಳ್ಳುತ್ತಾರೆ.

ಈ 35 ವರ್ಷಗಳಲ್ಲಿ ಲಾಲೂ ಮತ್ತು ನಿತೀಶ್‌ ದೊಸ್ತಿಗಳಾಗಿಯೂ, ಬದ್ಧ ಎದುರಾಳಿಗಳಾಗಿಯೂ ಚುನಾವಣೆಗಳನ್ನು ಎದುರಿಸಿದ್ದಾರೆ. 1994ರಲ್ಲಿ ಜನತಾದಳ ಒಡೆದು, ಆರ್‌ಜೆಡಿ ಮತ್ತು ಸಮತಾ ಪಕ್ಷ ಉದಯಿಸಿದ 20 ವರ್ಷಗಳ ನಂತರ, 2014ರ ಆಗಸ್ಟ್‌ನಲ್ಲಿ ಲಾಲೂ ಮತ್ತು ನಿತೀಶ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. 2014ರಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿ, ಕೇಂದ್ರದಲ್ಲಿ ಅಧಿಕಾರ ಹಿಡಿದ ಸಮಯದಲ್ಲಿಯೇ ನಿತೀಶ್‌ ಬಿಜೆಪಿಯ ಸಖ್ಯ ತೊರೆದಿದ್ದರು.

ಅಂದು, ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಪ್ರಚಾರ ಸಮಯದಲ್ಲಿ ಹಾಜಿಪುರದಲ್ಲಿ ಲಾಲೂ-ನಿತೀಶ್‌ ಇಬ್ಬರೂ ಜಂಟಿ ಪ್ರಚಾರ ನಡೆಸಿದ್ದರು. ಪರಸ್ಪರರನ್ನು ಆಲಿಂಗಿಸಿಕೊಂಡಿದ್ದರು. ನಿತೀಶ್ ತಮಗೆ ಸಹೋದರನಂತೆ ಎಂದು ಲಾಲೂ ಹೇಳಿದರೆ, ಭೂತಕಾಲವನ್ನು ಮರೆತು ದೊಡ್ಡ ಶತ್ರುವಿನ (ಬಿಜೆಪಿ) ವಿರುದ್ಧ ಲಾಲೂ ಜೊತೆ ಕೈಜೋಡಿಸಲು ನಿರ್ಧರಿಸಿದ್ದೇನೆ ಎಂದು ನಿತೀಶ್ ಹೇಳಿದ್ದರು.

image 62 5

ಲಾಲೂ-ನಿತೀಶ್‌ ಒಗ್ಗೂಡುವಿಕೆಯು ಕಾಂಗ್ರೆಸ್‌ ಮತ್ತು ಎಡಪಕ್ಷಗಳನ್ನು ಒಳಗೊಂಡ ‘ಮಹಾಘಟಬಂಧನ್’ ಎಂಬ ಹೊಸ ಒಕ್ಕೂಟದ ರಚನೆಗೂ ಕಾರಣವಾಯಿತು. ಈ ಒಕ್ಕೂಟವು 2015ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ, ಭಾರೀ ಗೆಲುವು ದಾಖಲಿಸಿತು. ಆದರೆ, 2017ರಲ್ಲಿ ನಿತೀಶ್‌ ಅವರು ಮಹಾಘಟಬಂಧನ್ ತೊರೆದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಒಗ್ಗಟ್ಟಿನಿಂದ ಸ್ಪರ್ಧಿಸಿ, ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ, 39 ಸ್ಥಾನಗಳನ್ನು ಗೆದ್ದವು.

ಆದರೆ, 2020ರ ವಿಧಾನಸಭಾ ಚುನಾವಣೆಯು ಜೆಡಿಯು ಪಾಲಿಗೆ ಮುಳುವಾಯಿತು. ಎನ್‌ಡಿಎ ಭಾಗವೇ ಆಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ವು ನಿತೀಶ್‌ ವಿರುದ್ಧ ಸಿಡಿದೆದ್ದಿತು. ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಎಲ್‌ಜೆಪಿ ನಿತೀಶ್‌ ಅವರನ್ನು ತೀವ್ರವಾಗಿ ಟೀಕಿಸಿತು. ಮಾತ್ರವಲ್ಲದೆ, ಜೆಡಿಯು ಅಭ್ಯರ್ಥಿಗಳ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಆದಾಗ್ಯೂ, ಬಿಜೆಪಿ ಸ್ಪರ್ಧಿಸಿದ್ದ ಕ್ಷೇತ್ರಗಳ ಪೈಕಿ, 6 ಕ್ಷೇತ್ರಗಳಲ್ಲಿ ಮಾತ್ರವೇ ಎಲ್‌ಜೆಪಿ ಅಭ್ಯರ್ಥಿಗಳಿದ್ದರು. ಎಲ್‌ಜೆಪಿಯ ಏಕಾಂಗಿ ಸ್ಪರ್ಧೆಯಿಂದ ಜೆಡಿಯು ಹೆಚ್ಚು ಸ್ಥಾನಗಳಲ್ಲಿ ಸೋಲುಂಡಿತು. ಕೇವಲ 43 ಸ್ಥಾನಗಳಲ್ಲಿ ಮಾತ್ರವೇ ಗೆದ್ದಿತು. ಆದರೂ, ಎನ್‌ಡಿಎಯಲ್ಲಿ ಮುಖ್ಯಮಂತ್ರಿಯಾದರು. ಆದರೆ, ಬಿಜೆಪಿ ಜೊತೆಗಿನ ತಿಕ್ಕಾಟದಿಂದ 2022ರಲ್ಲಿ ಎನ್‌ಡಿಎ ತೊರೆದ ನಿತೀಶ್‌ ಮತ್ತೆ ಮಹಾಘಟಬಂಧನ್‌ ಸೇರಿದರು. ಆದಾಗ್ಯೂ, 2024ರ ಲೋಕಸಭಾ ಚುನಾವಣೆಗೂ ಮುನ್ನ ಮತ್ತೆ ಎನ್‌ಡಿಎಗೆ ಮರಳಿದರು.

ಈ ಲೇಖನ ಓದಿದ್ದೀರಾ?: ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ಸ್ಥಿತಿಯಲ್ಲಿ RSS; ದೇವನೂರರ ಮನೋಜ್ಞ ವಿಶ್ಲೇಷಣೆ

ಸದ್ಯ ಎನ್‌ಡಿಎಯಲ್ಲಿಯೇ ಇದ್ದಾರೆ. ಎನ್‌ಡಿಎ ಜೊತೆಗೆ ಈಗಿನ ಚುನಾವಣೆ ಎದುರಿಸುತ್ತಿದ್ದಾರೆ. 20 ವರ್ಷಗಳ ನಿತೀಶ್‌ ಆಡಳಿತದಲ್ಲಿ ಬಿಹಾರವು ಸಾಕಷ್ಟು ಬಿಕ್ಕಟ್ಟುಗಳಿಗೆ ಗುರಿಯಾಗಿದೆ. ಬಿಹಾರವು ಭಾರತದ ಅತ್ಯಂತ ಬಡ ರಾಜ್ಯ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ರಾಜ್ಯದ ತಲಾ ಆದಾಯವು (82,000 ರೂ.) ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆ ಇದೆ. ಬಿಹಾರದ ಬಹುಸಂಖ್ಯಾತರು ಬಡತನ ರೇಖೆಗಿಂತ ಕೆಳಗಿದ್ದಾರೆ. ಬಡತನ ವ್ಯಾಪಕವಾಗಿ ಹೆಚ್ಚಾಗಿದೆ.

ನಿರುದ್ಯೋಗವು ಯುವಜನರನ್ನು ಕಾಡುತ್ತಿದೆ. ಬಿಹಾರದ ಯುವಜನರು ಬದುಕು ಕಟ್ಟಿಕೊಳ್ಳಲು ಉದ್ಯೋಗ ಹರಸಿ, ದೇಶದ ನಾನಾ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗುವವರಲ್ಲಿ ಬಿಹಾರವೂ ಪ್ರಮುಖ ರಾಜ್ಯವಾಗಿದೆ. ಶೈಕ್ಷಣಿಕ ಗುಣಮಟ್ಟವೂ ಕಳಪೆಯಾಗಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ರಸ್ತೆಗಳು, ವಿದ್ಯುತ್ ಹಾಗೂ ನೀರು ಸೇರಿದಂತೆ ಮೌಲಭೂತ ಸೌಲಭ್ಯಗಳ ಕೊರತೆ ಹೇರಳವಾಗಿದೆ.

ಭ್ರಷ್ಟಾಚಾರದ ಆರೋಪಗಳೂ ಗಂಭೀರವಾಗಿ ಕೇಳಿಬರುತ್ತಿವೆ. ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಬಿಹಾರದ ಹತ್ತಾರು ಸೇತುವೆಗಳು ಕುಸಿದು ಬೀಳುತ್ತಿವೆ. ಇದಕ್ಕೆ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯೇ ಕಾರಣವೆಂದು ಹೇಳಲಾಗುತ್ತಿದೆ. ಈ ಎಲ್ಲ ಸಮಸ್ಯೆ-ಸವಾಲುಗಳು ಬಿಹಾರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಹುಟ್ಟುಹಾಕಿದೆ. ಎನ್‌ಡಿಎ ಅಧಿಕಾರ ಕಳೆದುಕೊಳ್ಳಬಹುದು ಎಂಬ ಅಭಿಪ್ರಾಯಗಳು ದಟ್ಟವಾಗಿವೆ.

ಆದರೆ, ಅಧಿಕಾರ ಉಳಿಸಿಕೊಳ್ಳಲು ಜೆಡಿಯು ಮಿತ್ರಪಕ್ಷ ಬಿಜೆಪಿ ಚುನಾವಣಾ ಆಯೋಗವನ್ನೇ ಬಳಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಇತ್ತೀಚೆಗೆ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಬಿಜೆಪಿ ವಿರೋಧಿ ಮತಗಳನ್ನು ಕಿತ್ತುಹಾಕುವ ಹುನ್ನಾರದ ಭಾಗವೆಂದು ಆರೋಪಿಸಲಾಗಿದೆ.

ಲಾಲು (77) ಮತ್ತು ನಿತೀಶ್ (74) ಈಗ ತಮ್ಮ ರಾಜಕೀಯ ವೃತ್ತಿಯ ಕೊನೆಯ ಹಂತದಲ್ಲಿದ್ದಾರೆ. ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳಿಂದ ಇಬ್ಬರೂ ಕುಗ್ಗಿದ್ದಾರೆ. ಬಹುಶಃ ಇಬ್ಬರಿಗೂ ಈ ಬಾರಿಯ ಚುನಾವಣೆ ಕೊನೆಯ ಚುನಾವಣೆ ಎನ್ನಲಾಗಿದೆ. ಈ ಚುನಾವಣೆಯಲ್ಲಿಯೂ ಈ ಇಬ್ಬರು ಮಿತ್ರರು ಬದ್ಧ ವಿರೋಧಿಗಳಾಗಿ ಚುನಾವಣಾ ಕಣದಲ್ಲಿದ್ದಾರೆ.

ನಿತೀಶ್‌ ಅವರ ಬುದ್ಧಿವಂತಿಕೆಯು ಕೆಲಸಕ್ಕೆ ಬಾರದಂತಾಗಿದೆ. ಅವರ ಸರ್ಕಾರವನ್ನು ಗುಮಾಸ್ತರು ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ದೂರುತ್ತಿವೆ. ಆದಾಗ್ಯೂ, ಎನ್‌ಡಿಎಯ ಮುಂಚೂಣಿ ನಾಯಕನಾಗಿ ನಿತೀಶ್ ಕುಮಾರ್ ಅವರೇ ಚುನಾವಣಾ ಕಣದಲ್ಲಿದ್ದಾರೆ. ಒಂದು ವೇಳೆ, ಚುನಾವಣೆಯಲ್ಲಿ ಎನ್‌ಡಿಎ ಗೆದ್ದರೂ ನಿತೀಶ್‌ ಮತ್ತೆ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆದ್ದರೆ, ಮಹಾರಾಷ್ಟ್ರದಂತೆ ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್‌ ಅವರಿಂದ ಕಸಿದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇತ್ತ, ಅವರ ಎದುರಾಳಿ ಮಹಾಘಟಬಂಧನ್ ಮೈತ್ರಿಕೂಟವನ್ನು ಲಾಲೂ ಅವರು ಮುನ್ನಡೆಸುವ ಸ್ಥಿತಿಯಲ್ಲಿಲ್ಲ. ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ಪುತ್ರ ತೇಜಸ್ವಿ ಯಾದವ್ ಅವರು ಮಹಾಘಟಬಂಧನ್‌ಅನ್ನು ಮುನ್ನಡೆಸುತ್ತಿದ್ದಾರೆ. ಎರಡು ಬಾರಿ ಉಪಮುಖ್ಯಮಂತ್ರಿ ಆಗಿದ್ದ ತೇಜಸ್ವಿ ಅವರೇ ಮೈತ್ರಿಕೂಟದ ಮುಖ್ಯಮಂತ್ರಿ ಮುಖವೂ ಆಗಿದ್ದಾರೆ. ತೇಜಸ್ವಿಗೆ ರಾಹುಲ್‌ ಗಾಂಧಿ ಸಾಥ್ ನೀಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ | ಬೆಂಗಳೂರಿಗೆ 12, ಮಂಗಳೂರಿಗೆ 5, 11 ಜಿಲ್ಲೆಗೆ ಪ್ರಾತಿನಿಧ್ಯವೇ ಇಲ್ಲ!

ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ ವಿಚಾರವಾಗಿ ಪಕ್ಷದ ಕಚೇರಿಗಿಂತಲೂ ನಾಯಕರ ಮನೆ ಸುತ್ತಿರುವ...

ರಾಜಸ್ಥಾನ ಸರ್ಕಾರಿ ಕಟ್ಟಡಗಳಿಗೆ ಏನಾಗುತ್ತಿದೆ?: ಕೆಲವು ಕುಸಿಯುತ್ತಿವೆ – ಕೆಲವಕ್ಕೆ ಬೆಂಕಿ ಬೀಳುತ್ತಿದೆ

ರಾಜಸ್ಥಾನದಲ್ಲಿ ಕೆಲವು ಸರ್ಕಾರಿ ಕಟ್ಟಡಗಳು ಕುಸಿದು ಬೀಳುತ್ತಿವೆ. ಇನ್ನೂ ಕೆಲ ಕಟ್ಟಡಗಳಿಗೆ...

ಉತ್ತರ ಪ್ರದೇಶ | ಮುಸ್ಲಿಂ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯೆ

ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ವೈದ್ಯೆ ಚಿಕಿತ್ಸೆ ನಿರಾಕರಿಸಿದ ಆಘಾತಕಾರಿ ಘಟನೆ...

ಸಿಜೆಐ ಗವಾಯಿ ಪ್ರಕರಣ; ನ್ಯಾಯಾಧೀಶರ ಮೇಲಾದ ಹಲ್ಲೆಗಳು ಮುನ್ನಲೆಗೆ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ 2009ರಲ್ಲಿ...

Download Eedina App Android / iOS

X