ಸತ್ಯದರ್ಶನದ ದ್ರಷ್ಟಾರರು- ಬೀರ್ಬಲ್, ತೆನಾಲಿ ಮತ್ತು ಕುನಾಲ್ ಕಾಮ್ರಾ

Date:

Advertisements
ದಾಬೋಲ್ಕರ್, ಗೌರಿ, ಪನೆಸರ್, ಕಲಬುರ್ಗಿಯವರು ಕಂಡ ಅಂತ್ಯವನ್ನು ಕುನಾಲ್ ಕಾಣದಿರಲಿ. ಇದು ಕುನಾಲ್‌ರವರ ಸುರಕ್ಷತೆಯ ಕುರಿತಾದ ಭೀತಿಯಲ್ಲ, ಆರೋಗ್ಯಕರ ಸಮಾಜ, ಪ್ರಜಾಪ್ರಭತ್ವದ ಅಳಿವಿನ ಭೀತಿ… criticism is the soul of democracy.

ನನ್ನ ಬಾಲ್ಯದಲ್ಲಿ ಅಕ್ಬರ್-ಬೀರ್ಬಲ್ ಮತ್ತು ಶ್ರೀ ಕೃಷ್ಣದೇವರಾಯ-ತೆನಾಲಿರಾಮನ ಕಥೆಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ಒಗಟು, ಗಾಢ ಪ್ರಶ್ನೆಗಳನ್ನು ಕೇಳುತ್ತಾ ರಾಜನ ದ್ವಂದ್ವ ನೀತಿಗಳನ್ನು, ಕಪಟ ನೀತಿಗಳನ್ನು ಅತ್ಯಂತ ತೀಕ್ಷ್ಣ ವಾಗಿ ಟೀಕಿಸುತ್ತಿದ್ದವರು ಬೀರ್ಬಲ್ ಮತ್ತು ತೆನಾಲಿ. ರಾಜನನ್ನು ಗೇಲಿ ಮಾಡುತ್ತಾ ಅವರು ಹೇಳುತ್ತಿದ್ದ ಕಥೆಗಳು, ಘಟನಾ ವಿವರಗಳು ಹಾಸ್ಯಭರಿತ ಜಾಣ್ನುಡಿಗಳಲ್ಲಿ ಸಾಮಾಜಿಕ ಕಾಳಜಿ, ನೈತಿಕ ಪ್ರಜ್ಞೆಯಿದ್ದರೂ ನನಗೆ ಅವರ ನಿರ್ಭೀತಿ, ನೇರ ನುಡಿ ನಡೆ ಇಷ್ಟವಾಗುತ್ತಿದ್ದವು. ಯಾವುದೇ ಅಳುಕಿಲ್ಲದೆ ರಾಜನ ಮೂರ್ಖತನವನ್ನು ಎಲ್ಲರ ಸಮೂಹದಲ್ಲೇ ಅವರು ತೆರೆದಿಡುತ್ತಿದ್ದರು.

ಆ ದಿನಗಳಲ್ಲಿ ಇಷ್ಟೊಂದು ನಿರ್ಭೀತಿಯಿಂದ ರಾಜನಿಗೆ ಅವನ ತಪ್ಪಿನ ದರ್ಶನ ಮಾಡಿಸುತ್ತಿದ್ದ ಇವರ ಕೆಲಸ ಸುಲಭದ್ದೇನು ಆಗಿರಲಿಲ್ಲ. ರಾಜಾಡಳಿತದ ಆ ದಿನಗಳಲ್ಲಿ ರಾಜನ ಮಾತೆ ಕಾನೂನು. ಅವ ನಿಂತಲ್ಲೇ ಅಪರಿಮಿತ ಕೊಡುಗೆಗಳನ್ನು ಘೋಷಿಸುತ್ತಿದ್ದ, ಅಷ್ಟೇ ನಿರ್ದಯಿಯಾಗಿ ಮರಣ ದಂಡನೆಯನ್ನು ವಿಧಿಸಿಬಿಡುತ್ತಿದ್ದ. ರಾಜನ ಸುತ್ತಲೂ ಇದ್ದವರು ಹೊಗಳುಭಟ್ಟರಾಗಿರುವುದೇ ಲೇಸೆಂಬ ನಿರ್ಧಾರಕ್ಕೆ ಬಂದು ಹಣ ಸಂಪತ್ತು ಮಾಡಿಕೊಂಡಿದ್ದರು. ನಿಜ ಹೇಳಿ ರಾಜನ ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ಹೊಗಳಿ ಹಣ ಮಾಡಿಕೊಳ್ಳುವುದು ಸುಲಭ ಮಾರ್ಗವಲ್ಲವೇ? ಹೀಗಿರುವಾಗ ಬೀರ್ಬಲ್, ತೆನಾಲಿರಾಮ ಮಾಡುತ್ತಿದ್ದ ಕೆಲಸ ಎಂತದ್ದು! ಅಕ್ಬರ್, ಕೃಷ್ಣದೇವರಾಯರು ಕೂಡ ಸದಾ ಸತ್ಯದರ್ಶನ ಮಾಡಿಸುವ, ಮುಖಕ್ಕೆ ಕನ್ನಡಿ ಹಿಡಿಯುವ ಬೀರ್ಬಲ್ ತೆನಾಲಿರಾಮರನ್ನು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿದ್ದರು. ಅಂತಹ ರಾಜಧಿರಾಜರಿಗೂ ತಮ್ಮ ಭ್ರಮಾಲೋಕದಿಂದ, ದಂತಗೋಪುರಗಳಿಂದ ಕೆಳಗಿಳಿದು ವಾಸ್ತವ ಅರಿಯುವ ಹಂಬಲವಿತ್ತು… ಅವರಿಗೆ ಈ ಹಂಬಲವಿದ್ದುದ್ದರಿಂದಲೇ ನಾವಿಂದು ಅಕ್ಬರ್ ಮತ್ತು ದೇವರಾಯರನ್ನು ನೆನೆಯುತ್ತೇವೆ.

ಹೀಗೊಂದು ಕಥೆಯಿದೆ. ಗಾಳಿಯಲ್ಲಿ ತೇಲುತ್ತಿರುವ ಬೃಹತ್ ಅರಮನೆಯನ್ನು ಕನಸಿನಲ್ಲಿ ಕೃಷ್ಣದೇವರಾಯ ಕಂಡನಂತೆ. ಅದು ಚಿನ್ನದಿಂದ ಮಾಡಿದ್ದಾಗಿತ್ತಂತೆ. ಕನಸು ಮುಗಿದು ರಾಜ ಎದ್ದಮೇಲು ಆ ಅರಮನೆಯ ಕುರಿತೇ ಯೋಚಿಸುತ್ತಿದ್ದನಂತೆ. ತನ್ನ ಕನಸನ್ನು ಆಸ್ಥಾನದ ಮಂತ್ರಿಗಳೊಡನೆ ಹಂಚಿಕೊಂಡನಂತೆ. ಹಲವರು ಕನಸನ್ನು ಶುಭಶಕುನವೆಂದು ರಾಜನನ್ನು ಹುರಿದುಂಬಿಸಿದರಂತೆ. ಹರ್ಷಿತನಾದ ರಾಜ ಗಾಳಿಯಲ್ಲಿ ತೇಲುವ ಅರಮನೆಯನ್ನು ಕಟ್ಟಿಯೇ ಬಿಡಬೇಕೆಂದು ತೀರ್ಮಾನಿಸಿದ್ದನಂತೆ. ಇದು ಮೂರ್ಖತನದ ಪರಮಾವಧಿ ಎಂದು ರಾಜನಿಗೆ ಅರಿವು ಮೂಡಿಸುವ ಕಾಯಕ ತೆನಾಲಿ ರಾಮನ ಕೊರಳಿಗೆ ತಗಲಾಕಿಕೊಂಡಿತಂತೆ.

ಇದನ್ನು ಓದಿದ್ದೀರಾ?: ಅಸ್ಸಾಂ ಬ್ಯಾಂಕ್ ಸಂಬಂಧಿತ‌ ಹಗರಣದಲ್ಲಿ ಸಿಎಂ ಹೆಸರು: ವರದಿ ಮಾಡಿದ್ದ ಪತ್ರಕರ್ತನ ಬಂಧನ

ಮಾರನೇ ದಿನ ಆಸ್ಥಾನಕೊಬ್ಬ ಮುದುಕ ಬಂದ. “ಸ್ವಾಮಿ, ನನ್ನ ಜೀವಮಾನದ ಉಳಿತಾಯವನ್ನೆಲ್ಲಾ ಕಳ್ಳನೊಬ್ಬ ಕದ್ದಿದ್ದಾನೆ” ಎಂದನಂತೆ . “ಯಾರಾ ಕಳ್ಳ… ಆತನನ್ನು ಈಗಲೇ ಬಂಧಿಸಿ ಶಿಕ್ಷಿಸುವೆ” ಎಂದು ರಾಜ ಅಬ್ಬರಿಸತೊಡಗಿದನಂತೆ. “ಸ್ವಾಮಿ, ಆತನ ವಿವರ ನೀಡುವೆ. ಆದರೆ ವಿವರ ತಿಳಿದೊಡನೆ ನೀವು ನನ್ನನ್ನು ಶಿಕ್ಷಿಸಬಾರದು” ಎಂಬ ಷರತ್ತನ್ನು ಮುದುಕ ಹಾಕಿದನಂತೆ. ರಾಜ ಷರತ್ತಿಗೆ ಒಪ್ಪಿದ ಕೂಡಲೇ ಮುದುಕ ಮುಂದುವರೆದು “ರಾಜ, ನಿನ್ನೆ ನನ್ನ ಕನಸಲ್ಲಿ ನೀವು ಸೈನ್ಯ ಸಮೇತವಾಗಿ ಬಂದು ನಮ್ಮ ಮನೆ ಲೂಟಿ ಮಾಡಿದಿರಿ” ಎಂದನಂತೆ! ಉಗ್ರ ರೂಪ ತಾಳಿದ ರಾಜ “ಎಲವೋ ಮೂರ್ಖ ಕನಸಲ್ಲಿ ಕಂಡದ್ದು ವಾಸ್ತವವಾದೀತೆ. ನಿನಗೆಷ್ಟು ಅಹಂಕಾರವೇಳು ಇಂತಹ ದೂರನ್ನು ನನ್ನ ಬಳಿ ತರುವುದಕ್ಕೆ?” ಎಂದು ಗದರಿಸತೊಡಗುವ ಹೊತ್ತಿಗೆ ಮುದುಕನ ಮಾರುವೇಷದಿಂದ ತೆನಾಲಿ ಪ್ರತ್ಯಕ್ಷನಾದ. ಅಧಿಕಾರ, ಸಂಪತ್ತನ್ನು ದುರ್ಬಳಕೆ ಮಾಡ ಹೊರಟ ರಾಜನಿಗೆ ಎಂತಹ ಪಾಠ ಕಲಿಸಿದ್ದ ತೆನಾಲಿ! ಇಂತಹ ಕಥೆಗಳನ್ನು ನಿಜವಾಗಿ ಘಟಿಸಿದ್ದರ ಕುರಿತು ನನಗೆ ನನ್ನದೇ ಅನುಮಾನಗಳಿವೆ. ಆದರೆ ಸತ್ಯದ ದರ್ಶನ ಮಾಡಿಸುತ್ತಿದ್ದ ತೆನಾಲಿ, ಬೀರ್ಬಲ್‌ನಂತಹವರ ಮೇಲೆ ಎಫ್ಐಆರ್ ಅಂತು ದಾಖಲಿಸುತ್ತಿರಲಿಲ್ಲ ಅಥವಾ ತನ್ನ ಸಮರ್ಥಕರನ್ನು ಛೂ ಬಿಡುತ್ತಿರಲಿಲ್ಲ ಎಂಬುದರ ಬಗ್ಗೆ ಖಾತರಿಯಿದೆ.

ಇವತ್ತಿನ ವರುಣ್ ಗ್ರೋವರ್, ಕುನಾಲ್ ಕಾಮ್ರಾ, ಮುನಾವರ್ ಫಾರೂಖೀ ಅಥವಾ ತುರ್ತು ಪರಿಸ್ಥಿತಿ ದಿನಗಳ ಆರ್ ಕೆ ಲಕ್ಷ್ಮಣ್ ಬೀರ್ಬಲ್ ಮತ್ತು ತೆನಾಲಿರಾಮ ಮಾಡಿದ ಕೆಲಸವನ್ನೇ ಇಂದು ಮಾಡುತ್ತಿದ್ದಾರೆ. ಆದರೆ ಇಂದು ನಕ್ಕು ಸುಮ್ಮನಾಗುವ ಅಥವಾ ಆತ್ಮಾವಲೋಕನ ಮಾಡಿಕೊಳ್ಳುವ ನಾಯಕರಿಲ್ಲ. ಈ ಅಸಹನೆ ಬರೀ ದೇಶವನ್ನಾಳುವ ನಾಯಕರಲ್ಲಿದೆ ಅಂತ ಅಂದುಕೊಳ್ಳಬೇಡಿ. ಈ ಅಸಹನೆ ಎಲ್ಲಾ ಹಂತಗಳಿಗೂ ಟ್ರಿಕಲ್ ಆಗಿದೆ. ಎಲ್ಲರಿಗೂ ಸುತ್ತಲೂ ಹೊಗಳುಭಟ್ಟರೇ ಬೇಕು!

images 54 1

ಕೆಲ ವರುಷಗಳ ಕೆಳಗೆ ಅಕಾಡೆಮಿಯೊಂದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಿತು. ಪಟ್ಟಿಯಲ್ಲಿದ್ದ ಹೆಸರುಗಳ ಬಗ್ಗೆ ಹಲವರಿಗೆ ತಕರಾರುಗಳಿದ್ದವು. ಈ ತಕರಾರುಗಳ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು ಕೆಂಡಾಮಂಡಲವಾದರು. ತಕರಾರು ತೆಗೆದವ ನೀಚ, ದುರುಳ ಎಂದು ಅಬ್ಬರಿಸಿದರು. ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ಸುತ್ತಲಿದ್ದ ಹೊಗಳುಭಟ್ಟರು “ಹೂ ಸಾ ನೀವೇಳಿದ್ದೆ ಸರಿ, ಅವ ದುರುಳನೇ” ಎಂದರು. ಅಚ್ಚರಿಯ ವಿಷಯವೆಂದರೆ ತಕರಾರು ತೆಗೆದ ವ್ಯಕ್ತಿಯನ್ನು ಒಮ್ಮೆಯೂ ಭೇಟಿಯಾಗಿರದ ಅಧ್ಯಕ್ಷರು ಆತ ತೆಗೆದ ತಕರಾರುಗಳ ಆಧಾರದ ಮೇಲೆಯೇ ಆತ ದುರುಳನೆಂಬ ನಿರ್ಧಾರಕ್ಕೆ ಬಂದಿದ್ದರು. ತಕರಾರಿನ validity ಕುರಿತು ಅಧ್ಯಕ್ಷರು ಒಂದು ಕ್ಷಣವೂ ಯೋಚಿಸಲಿಲ್ಲ! ಡಿಸೆಂಟ್ ಕುರಿತು ಆ ಅಧ್ಯಕ್ಷರು ಈಗಲೂ ಭಾಷಣ ಕೊಡುತ್ತಲೇ ಇರುತ್ತಾರೆ. ಅಸಹನೆ ಎಲ್ಲಾ ವಲಯಗಳಿಗೂ ಹರಡಿರುವುದು ನನಗೆ ಆತಂಕಕಾರಿ ವಿಷಯ.

ಕಳೆದ ವಾರ ಪೋಸ್ಟ್ ಮಾಡಿದ “ನಯಾ ಭಾರತ್” ಎಂಬ ವಿಡಿಯೋದಲ್ಲಿ ಕುನಾಲ್ ಕೇವಲ ರಾಜಕಾರಣಿಗಳನ್ನಷ್ಟೇ ಟೀಕೆ ಮಾಡದೆ ಉದ್ಯಮಿಗಳನ್ನೂ ಟೀಕೆ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಿರಬಹುದು. ಕಡಲಲ್ಲಿ ತೇಲುವ ಮಂಜುಗಡ್ಡೆ ಕಾಲು ಭಾಗದಷ್ಟು ಮಾತ್ರ ನಮಗೆ ಕಾಣುತ್ತದೆ, ಉಳಿದ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿರುತ್ತದೆ ಎಂಬ ಮಾತಿದೆ. ಹಾಗೆಯೇ ರಾಜಕಾರಣ ಅನ್ನುವುದನ್ನು ಇಂದು ಬಹುಪಾಲು ನಿಯಂತ್ರಿಸಿ, ನಡೆಸುತ್ತಿರುವುದು ಉದ್ಯಮಿಗಳು. ಈ ಕಹಿ ಸತ್ಯವನ್ನು ಬಲು ಸರಳವಾಗಿ ಜನರ ಮುಂದಿಟ್ಟರು. ಉದ್ಯಮಿಗಳ ಕುರಿತು ಕುನಾಲ್ ಮಾಡಿದ ಹಾಸ್ಯ ಅರಗಿಸಿಕೊಳ್ಳಲು ಬಹಳಷ್ಟು ಮಂದಿಗೆ ಆಗಿರಲಾರದು. ಈ ದೇಶದ ಉದ್ಯಮಿ- ರಾಜಕಾರಣಿ – ಸಂತರ ಅಪವಿತ್ರ ಮೈತ್ರಿ, ಮೂವರು ಸೇರಿ ಹೆಣೆವ ಜೇಡರ ಬಲೆಯ ಕುರಿತು ಜನಸಾಮಾನ್ಯರಿಗೆ ತಿಳಿದೇ ಇಲ್ಲ. ಕುನಾಲ್ ಮಾಡಿದ ಎಕ್ಸ್ ಪೋಸೇ ಅವನನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ತಪ್ಪಲ್ಲ.

ನಾನಾಗ ಎಂಟು ವರ್ಷದ ಬಾಲಕ. ನಮ್ಮ ಮನೆಗೊಂದು ಕನ್ನಡ ಮ್ಯಾಗಝೀನ್ ಬರೋದು. ಅದರಲ್ಲಿ ಹಿರಿಯ ಮಹಿಳೆಯೊಬ್ಬರ ಹಿತವಚನ ಪಬ್ಲಿಶ್ ಆಗೋದು. ಆ ಮಹಿಳೆ ಪವಿತ್ರ ಸ್ಥಳವೊಂದರ ಅಧಿಕಾರಿಗಳ ತಾಯಿಯಾಗಿದ್ದರು. ಅವರ ಹಿತವಚನಗಳನ್ನು ತಪ್ಪದೆ ನಮ್ಮಮ್ಮ ಓದಿ ನನಗೇಳುತ್ತಿದ್ದರು. ಬೆಳೆದು ಇಷ್ಟು ವರ್ಷಗಳಾದ ಮೇಲೆ ನನಗೆ ತಿಳಿದ ವಿಷಯವೇನೆಂದರೆ, ಆ ಮಹಾತಾಯಿ ಈ ಹಿತವಚನಗಳನ್ನು ಬರೆಯುವ ದಿನಗಳಲ್ಲೇ ಆ ಪವಿತ್ರಸ್ಥಳದಲ್ಲಿ ಅತ್ಯಾಚಾರ, ಕೊಲೆ, ಭೂಕಬಳಿಕೆಯಾಗುತ್ತಿತ್ತು ಎಂಬುದು! ಮತ್ತೊಬ್ಬ ಉದ್ಯಮಿಯ ಪುಸ್ತಕಗಳು ಎಲ್ಲೆಡೆ ಕಾಣಸಿಗುತ್ತವೆ, ಅವರ ಕಥೆಗಳು ಎಲ್ಲಾ ಪಠ್ಯ ಪುಸ್ತಕಗಳ ಒಳಗೆಯು ನುಸುಳಿಬಿಟ್ಟಿವೆ. ಕಾಫ್ಕ, ಸಾಕಿ, ಓ ಹೆನ್ರಿ, ಕಮೂ, ವೂಲ್ಫ್, ಮಾರ್ಕ್ವೆಜ್, ಬೋರ್ಗೆಸ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ಅವರದ್ದೇ ವಿಶೇಷ ಸೆಕ್ಷನ್ ಅನ್ನು ಪ್ರತಿ ಪುಸ್ತಕದಂಗಡಿಯಲ್ಲೂ ಇವರು ಪಡೆಯುತ್ತಾರೆ. ಸಾಹಿತ್ಯವನ್ನು ನಿಜರೂಪ ಮರೆಮಾಚಲು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದನ್ನು ಕುನಾಲ್ ಸೂಕ್ಷ್ಮವಾಗಿ ನಮ್ಮ ಮುಂದಿಟ್ಟಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವ್ಯಂಗ್ಯ ವಿನೋದಗಳ ಮೇಲೆ ಬುಲ್ಡೋಝರ್ ಹರಿಸುವ ಊಸರವಳ್ಳಿಗಳು!

ಭಾರತದ ಜನ ಎಲ್ಲಿಯವರೆಗೆ netflix ಸರಣಿಗಳನ್ನು, ಐಪಿಎಲ್ ಮ್ಯಾಚ್‌ಗಳನ್ನು, ಇನ್‌ಸ್ಟಾ ರೀಲ್ಸ್‌ಗಳನ್ನು ನೋಡುತ್ತಾ ಕುಳಿತಿರುತ್ತದೋ ಆಲ್ಲಿಯವರೆಗೆ ಉದ್ಯಮ – ರಾಜಕಾರಣ – ಧರ್ಮದ ತ್ರಿವಳಿಗಳು ಸರಾಗವಾಗಿ ಸುರಕ್ಷಿತವಾಗಿ ಎಲ್ಲವನ್ನೂ ನಿಯಂತ್ರಿಸಬಹುದು; ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಲೇ ಸಾಗಬಹುದು. ಸಾಮಾನ್ಯವಾಗಿ ಭಾರತದ ಜನ ಎಲ್ಲದಕ್ಕೂ ರಾಜಕಾರಣಿಗಳನ್ನು ದೂಷಿಸುತ್ತಾರೆ. ಈ ವ್ಯವಸ್ಥಿತ ಲೂಟಿ, ಭ್ರಷ್ಟಾಚಾರವೆಲ್ಲಕ್ಕೂ ರಾಜಕಾರಣಿಗಳು ಮಾತ್ರ ಕಾರಣವೆಂಬ ಭ್ರಮೆಯಲ್ಲಿದ್ದಾರೆ. ಇಂತಹ ಸರಳೀಕೃತ ನಿರ್ಧಾರಕ್ಕೆ ಬರುವುದು ಬಲು ಸುಲಭ ಕೂಡ. ಚಲನಚಿತ್ರಗಳು, ಮುಖ್ಯವಾಹಿನಿಗಳು ನಮ್ಮಲ್ಲಿ ಇಂತಹದೊಂದು ನಂಬಿಕೆಯನ್ನು ಆಳವಾಗಿ ಬೇರೂರುವಂತೆ ಮಾಡಿವೆ. ಆದರೆ ಕುನಾಲ್‌ನಂತಹ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳು ತೆರೆಯ ಮರೆಯಿಂದ ಇಡೀ ವ್ಯವಸ್ಥೆಯನ್ನು ರೂಪಿಸುವ, ನಿಯಂತ್ರಿಸುವ ಉದ್ಯಮಿಗಳನ್ನು, ಧರ್ಮಗುರುಗಳನ್ನು ಬಯಲಿಗೆಳೆಯುವುದು ತ್ರಿವಳಿಗಳಿಗೆ ರುಚಿಸದ ವಿಷಯ. ದಾಬೋಲ್ಕರ್, ಗೌರಿ, ಪನೆಸರ್, ಕಲಬುರ್ಗಿಯವರು ಕಂಡ ಅಂತ್ಯವನ್ನು ಕುನಾಲ್ ಕಾಣದಿರಲಿ. ಇದು ಕುನಾಲ್‌ರವರ ಸುರಕ್ಷತೆಯ ಕುರಿತಾದ ನನ್ನ ಭೀತಿಯಲ್ಲ, ಆರೋಗ್ಯಕರ ಸಮಾಜ, ಪ್ರಜಾಪ್ರಭತ್ವದ ಅಳಿವಿನ ಭೀತಿ… criticism is the soul of democracy.

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

Download Eedina App Android / iOS

X