“‘ಇಂಡಿಯಾ’ ಒಂದಾದರೆ ಬಿಜೆಪಿಯನ್ನು ಸೋಲಿಸಬಹುದು,” ಇದು ಚಂಡೀಗಢ ಪಾಲಿಕೆಯ ನೂತನ ಮೇಯರ್, ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರ ಮೊದಲ ಹೇಳಿಕೆ.
ಫೆಬ್ರವರಿ 1 ರಂದು ಚಂಡೀಗಢ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್‌ಗಳು ಕುಲದೀಪ್ ಕುಮಾರ್ ಅವರಿಗೆ ಎಂಟು ಮತಗಳನ್ನು ಚಲಾಯಿಸಿದ್ದರು. ಆದರೆ, ಆ ಮತಗಳನ್ನು ತಿರಸ್ಕರಿಸಿ, ಬಿಜೆಪಿ ಗೆದ್ದಿದೆಯೆಂದು ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಹೇಳಿದ್ದರು. ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಫೆಬ್ರವರಿ 20 ರಂದು ಕುಲದೀಪ್ ಕುಮಾರ್ ಅಂತಿಮವಾಗಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಸುಪ್ರೀಂ ಕೋರ್ಟ್ ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಎಎಪಿ-ಕಾಂಗ್ರೆಸ್‌ನ ಗೆಲುವನ್ನು ಎತ್ತಿಹಿಡಿಯಿತು. ಇದು ಎಎಪಿ ಮತ್ತು ಕಾಂಗ್ರೆಸ್‌ಗೆ ಮಹತ್ವದ ಗೆಲುವಾಗಿದೆ. ಇದೇ ಹೊತ್ತಿನಲ್ಲಿ ಎರಡೂ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಸೀಟು ಹಂಚಿಕೆಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ದೆಹಲಿಯಲ್ಲಿನ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವಿನ ಮಾತುಕತೆ ಈಗಾಗಲೇ ನಡೆಯುತ್ತಿದೆ. ಅಂತಿಮ ಘೋಷಣೆಯನ್ನು ಯಾವಾಗ ಬೇಕಾದರೂ ಮಾಡಬಹುದೆಂದು ಎಎಪಿ ಮತ್ತು ಕಾಂಗ್ರೆಸ್ ಎರಡೂ ಮೂಲಗಳು ಖಚಿತಪಡಿಸಿವೆ. ದೆಹಲಿಯಲ್ಲಿ ಎರಡೂ ಪಕ್ಷಗಳ (ಎಎಪಿ-ಕಾಂಗ್ರೆಸ್) ನಡುವೆ 4:3 ಅಥವಾ 5:2 ರೀತಿಯಲ್ಲಿ ಹಂಚಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
“ಚರ್ಚೆಗಳು ರಚನಾತ್ಮಕವಾಗಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಿ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಜಿ ಅವರು ನಿರ್ವಹಿಸಿದ ಪಾತ್ರವನ್ನು ಪಕ್ಷವು ಪ್ರಶಂಸಿಸುತ್ತದೆ” ಎಂದು ಎಎಪಿ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಎಎಪಿ ನಾಯಕರೊಂದಿಗೆ ಖರ್ಗೆ ಅವರು ಸತತವಾಗಿ ಮಾತುಕತೆ ನಡೆಸುತ್ತಿದ್ದಾರೆ. ಖರ್ಗೆ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಆಯ್ಕೆ ಮಾಡುವ ವಿಚಾರದಲ್ಲಿ ಖರ್ಗೆ ಪರವಾಗಿ ಕೇಜ್ರಿವಾಲ್ ಕೂಡ ಬಹಿರಂಗವಾಗಿ ಮಾಡತನಾಡಿದ್ದರು.
2013ರಲ್ಲಿ ಮೊದಲ ಕೇಜ್ರಿವಾಲ್ ಸರ್ಕಾರವನ್ನು ಹೊರಗಿನಿಂದ ಕಾಂಗ್ರೆಸ್ ಬೆಂಬಲಿಸಿದಾಗ ಲವ್ಲಿ ಅವರು ದೆಹಲಿ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಲವ್ಲಿ ಅವರು ಕೇಜ್ರಿವಾಲ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬುದು ಸ್ಪಷ್ಟ.
ಪಂಜಾಬ್‌ನಲ್ಲಿ ಮೈತ್ರಿ ಇಲ್ಲ; ಉಭಯ ಪಕ್ಷಗಳ ನಿರ್ಧಾರ
ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದು ಬೇಡವೆಂದು ಪರಸ್ಪರ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ರಾಜ್ಯದಲ್ಲಿ ಪಕ್ಷಗಳ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕೇಜ್ರಿವಾಲ್ ಫೆಬ್ರವರಿ 18 ರಂದು ಹೇಳಿದ್ದಾರೆ.
ಪಂಜಾಬ್‌ನ ನೆಲದ ವಾಸ್ತವತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎರಡೂ ಪಕ್ಷದವರು ಹೇಳುತ್ತಾರೆ. ಅಲ್ಲಿ ಬಿಜೆಪಿಗೆ ನೆಲೆಯಿಲ್ಲ. ಅಂತಹ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಮುಕ್ತ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ಭಾವನೆ ಎರಡೂ ಪಕ್ಷಗಳಲ್ಲಿದೆ.
ಕಳೆದ ವಾರ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳದ ನಡುವಿನ ಮಾತುಕತೆ ಮುರಿದುಬಿದ್ದ ನಂತರ, ಪಂಜಾಬ್‌ನಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಸಾಧ್ಯತೆ ಯಾವ ಕಾರಣಕ್ಕೂ ಇಲ್ಲ ಎಂಬ ಮಾತುಗಳು ವ್ಯಕ್ತವಾಗಿವೆ.
ಇದೀಗ ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಂದೋಲನ ಚುರುಕುಗೊಂಡಿದೆ. ಹೀಗಾಗಿ, ಬಿಜೆಪಿಗೆ ಕೊಂಚಲು ಅವಕಾಶ ಕೊಡಬಾರದು ಎನ್ನುತ್ತಿರುವ ಪಕ್ಷಗಳು ಮೈತ್ರಿಗೆ ಮುಂದಾಗದಿರಲು ನಿರ್ಧರಿಸಿವೆ.
ಒಂದು ವೇಳೆ, ಬಿಜೆಪಿ ಮತ್ತು ಅಕಾಲಿದಳ ಒಗ್ಗೂಡಿದರೆ ಪಂಜಾಬ್‌ನಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಪಕ್ಷಗಳು ಮುಕ್ತವಾಗಿವೆ ಎಂದು ಎಎಪಿ ಮತ್ತು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.