ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಬಾಂಧವ್ಯದ ಬಗ್ಗೆ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ, ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ನಾಲಿಗೆ ಹರಿಬಿಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿ, ವಿರೋಧಕ್ಕೆ ಗುರಿಯಾಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ನಾವು ಹಳೆಯ ಸಂಸ್ಕೃತಿಯ ಜನರು. ನಮ್ಮ ಸಹೋದರಿಯರ ಹಳ್ಳಿಯಲ್ಲಿ, ನಾವು ನೀರನ್ನು ಕೂಡ ಕುಡಿಯುವುದಿಲ್ಲ. ನನ್ನ ಚಿಕ್ಕಮ್ಮ ವಾಸಿಸುತ್ತಿದ್ದ ಜಿರಾಪುರಕ್ಕೆ, ನನ್ನ ತಂದೆ ತನ್ನ ಮನೆಯಿಂದ ಒಂದು ಪಾತ್ರೆಯಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು. ಇಂದಿನ ನಮ್ಮ ವಿರೋಧ ಪಕ್ಷದ ನಾಯಕರು ತಮ್ಮ ತಂಗಿಯನ್ನು ರಸ್ತೆಯಲ್ಲಿ ಚುಂಬಿಸುತ್ತಾರೆ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ನಿಮ್ಮಲ್ಲಿ ಯಾರು ನಿಮ್ಮ ಕಿರಿಯ ಸಹೋದರಿಯರನ್ನು ಅಥವಾ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಚುಂಬಿಸುತ್ತೀರಿ?” ಎಂದು ದ್ವೇಷಪೂರಿತ ಭಾಷಣ ಮಾಡಿದ್ದಾರೆ.
“ರಸ್ತೆಯಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಚುಂಬಿಸುವುದು ಮೌಲ್ಯಗಳ ಕೊರತೆ. ಇವು ವಿದೇಶದಲ್ಲಿ ಬೆಳೆದ ವಿದೇಶಿ ಮೌಲ್ಯಗಳು. ಆದಾಗ್ಯೂ, ಅವರು ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.
“ಇದು ರಾಹುಲ್ ಗಾಂಧಿಯವರ ತಪ್ಪಲ್ಲ. ವಿರೋಧ ಪಕ್ಷದ ನಾಯಕ ವಿದೇಶದಲ್ಲಿ ಅಧ್ಯಯನ ಮಾಡಿ ಆ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಅವರಿಗೆ ಭಾರತೀಯ ಸಂಪ್ರದಾಯಗಳು ಅರ್ಥವಾಗುವುದಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಜಿಎಸ್‌ಟಿ ಕಡಿತ | ಬಿಜೆಪಿ ಸಂಭ್ರಮಿಸುವಂಥಾದ್ದು ಏನಿದೆ?
ವಿಜಯವರ್ಗೀಯ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. “ಕೈಲಾಶ್ ವಿಜಯವರ್ಗೀಯವರು ಪವಿತ್ರ ಸಹೋದರ-ಸಹೋದರಿಯರ ಬಾಂಧವ್ಯವನ್ನು ಅವಮಾನಿಸಿದ್ದಾರೆ. ಅವರ ಭಾಷೆ ಎಲ್ಲರಿಗೂ ತಿಳಿದಿದೆ. ಅವರು ಮಹಿಳೆಯರನ್ನು ಪದೇ ಪದೇ ಅವಮಾನಿಸಿದ್ದಾರೆ. ಕೆಲವೊಮ್ಮೆ ಮಹಿಳೆಯರ ಬಟ್ಟೆ, ಕೆಲವೊಮ್ಮೆ ಅವರ ಶಿಕ್ಷಣ, ಕೆಲವೊಮ್ಮೆ ಅವರ ಮಾತಿನ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದು ಸಹೋದರಿಯರು ಮತ್ತು ಹೆಣ್ಣುಮಕ್ಕಳ ಬಗ್ಗೆ ಅವರ ಚಿಂತನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಂತಹ ನಾಚಿಕೆಯಿಲ್ಲದ ಹೇಳಿಕೆಗೆ ಪ್ರತಿಕ್ರಿಯಿಸಲು ನಮಗೆ ನಾಚಿಕೆಯಾಗುತ್ತದೆ” ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಕಿಡಿಕಾರಿದ್ದಾರೆ.