ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಕಾಂಗ್ರೆಸ್ ‘ದೇಶದ ಶತ್ರು’ ಎಂದು ಹೇಳಿದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ಇಂದು(ಜುಲೈ 7) ಈ ಅರ್ಜಿಯನ್ನು ಆಲಿಸಿದರು. ಭಾರತ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿದ್ದಾಗ ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಗೋಸ್ವಾಮಿ ಮಾನನಷ್ಟಕರ ಹೇಳಿಕೆ ನೀಡಿದ್ದಾರೆ ಎಂದು ಪವನ್ ಖೇರಾ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ವಿರುದ್ಧ ಸುಳ್ಳು ಮಾಹಿತಿ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು
ಟಿವಿ ಕಾರ್ಯಕ್ರಮವನ್ನು ನಡೆಸುತ್ತಿದ್ದ ಅರ್ನಬ್ ಗೋಸ್ವಾಮಿ, “ಈಗ ಕಾಂಗ್ರೆಸ್ ದೇಶದ ಶತ್ರುವಿನ ಜೊತೆಗಿದೆ. ನೀವು ಕಾಂಗ್ರೆಸ್ ಮತದಾರರಾಗಿದ್ದರೆ, ನೀವು ಕೂಡ ದೇಶದ ಶತ್ರುವೇ ಆಗುತ್ತೀರಿ” ಎಂದು ಹೇಳಿದ್ದರು.
ಈ ಹೇಳಿಕೆ ವಿರುದ್ಧವಾಗಿ ಖೇರಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಆದರೆ ಈ ಹೇಳಿಕೆಯು ಒಂದು ರಾಜಕೀಯ ಪಕ್ಷದ ವಿರುದ್ಧವಾಗಿದೆ, ಇದು ವೈಯಕ್ತಿಕವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ. ಹಾಗೆಯೇ ದೂರಿನಲ್ಲಿ ಕೊಂಚ ತಿದ್ದುಪಡಿ ಮಾಡುವಂತೆ ಹೈಕೋರ್ಟ್ ಸೂಚಿಸಿದೆ.
ಖೇರಾ ಅವರ ವಕೀಲರು ಅರ್ಜಿಯನ್ನು ತಿದ್ದುಪಡಿ ಮಾಡಿ, ಕಾಂಗ್ರೆಸ್‌ನ ಮೆಮೊವನ್ನೂ ಸಲ್ಲಿಸುವುದಾಗಿ ಹೇಳಿದ್ದಾರೆ. ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು ಗೋಸ್ವಾಮಿ ಪರವಾಗಿ ಹಾಜರಾಗಿದ್ದು ತಮಗೆ ಮೊಕದ್ದಮೆಯ ಪ್ರತಿಯನ್ನು ನೀಡಲಾಗಿಲ್ಲ ಎಂದು ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೌರವ್ “ನಾವು ನಿಮಗೆ ಸಮನ್ಸ್ ಜಾರಿ ಮಾಡಿಲ್ಲ. ನಿಮಗೆ ಸಮನ್ಸ್ ಜಾರಿಯಾದ ನಂತರ ವಿಚಾರಣೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ. ಖೇರಾ ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ವಿಚಾರಣೆಯ ದಿನಾಂಕವನ್ನು ನೀಡಲಾಗುವುದು ಎಂದೂ ದೆಹಲಿ ಹೈಕೋರ್ಟ್ ಹೇಳಿದೆ.
