“ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ ಸರ್ಕಾರ ಕಾಲಹರಣ ಮಾಡುವ ಕ್ರಮವನ್ನು ಖಂಡಿಸಿ ಆ. 18ಕ್ಕೆ ಉಪವಿಭಾಗಾಧಿಕಾರಿಗಳ (ಎಸಿ ಕಛೇರಿ) ಕಛೇರಿಗೆ ಬೀಗ ಹಾಕಿ ಹೋರಾಟ ನಡೆಸಲಾಗುವುದು” ಎಂದು ದಾವಣಗೆರೆಯಲ್ಲಿ ಮಾದಿಗ ಸಮುದಾಯ ಒಕ್ಕೂಟ ಹಾಗೂ ಎಲ್ಲಾ ದಲಿತ ಸಂಘಟನೆಯ ಮುಖ್ಯಸ್ಥರು ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಚರ್ಚೆ ನಡೆಸಿದ ಮುಖಂಡರು “ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯವು ಮೀಸಲಾತಿಯ ಲಾಭ ಪಡೆಯುವುದರಲ್ಲಿ ಹಿಂದುಳಿದಿದೆ. ಈ ಅನ್ಯಾಯವಾಗುತ್ತಿರುವ ಬಗ್ಗೆ ಕಳೆದ 40 ವರ್ಷಗಳಿಂದ ಹೋರಾಟ ನಡೆಸಿದ್ದರಿಂದ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿದ ಸರ್ಕಾರಕ್ಕೆ ಮಾದಿಗ ಸಮುದಾಯಕ್ಕೆ ಶೇಕಡಾವಾರು ಹೆಚ್ಚಿನ ಒಳಮೀಸಲಾತಿ ಕೊಡಬೇಕೆಂದು ವರದಿ ಸಲ್ಲಿಸಿದೆ” ಎಂದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಹಳೆಯ ವರದಿಗಳನ್ನು ಬದಿಗಿಟ್ಟು ನ್ಯಾ. ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಮತ್ತೊಂದು ಆಯೋಗವನ್ನು ರಚಿಸಿದ್ದು, ನ್ಯಾ. ನಾಗಮೋಹನದಾಸ್ ಆಯೋಗವು ಕೂಡ ಶೇ.6ರಷ್ಟು ಮಾದಿಗ, ಹಾಗೂ ಹೊಲೆಯ ಶೇ.5ರಂತೆ ಮತ್ತು ಇತರರಿಗೆ ಕೆಲವು ಶೇಕಡವಾರು ವಿಂಗಡಿಸಿ ವರದಿ ಕೊಟ್ಟಿದೆ. ಆದರೂ ಅದನ್ನು ಜಾರಿಗೆ ತರಲು ಸರ್ಕಾರ ಮತ್ತೆ ಮತ್ತೆ ಕುಂಟು ನೆಪಗಳನ್ನು ಹೇಳಿ ಕಾಲಹರಣ ಮಾಡುತ್ತಿದೆ. ಸರಕಾರವು ವರದಿಯನ್ನು ಯಥಾವತ್ತಾಗಿ ಯಾರ ಒತ್ತಡಕ್ಕೂ ಮಣಿಯದೇ ಈ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
“ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ, ಒಳಮೀಸಲಾತಿ ವರ್ಗೀಕರಣ ಜಾರಿಗೆ ತರಲು ಒತ್ತಾಯಿಸಿ ಮಾದಿಗ ಸಮುದಾಯ ಒಕ್ಕೂಟ ಹಾಗೂ ಎಲ್ಲಾ ದಲಿತ ಸಂಘಟನೆಗಳ ನೇತೃತ್ವದಲ್ಲಿ 2025, ಆಗಸ್ಟ್ 18ರಂದು ಸೋಮವಾರ ಬೃಹತ್ ಪ್ರತಿಭಟನೆ ಮೂಲಕ ಎ ಸಿ ಕಛೇರಿ ಮತ್ತು ಮಹಾನಗರ ಪಾಲಿಕೆ ಮುತ್ತಿಗೆ ಕಾರ್ಯಕ್ರಮ ಹಾಗೂ ಕಚೇರಿಗೆ ಬೀಗ ಹಾಕುವುದರ ಮೂಲಕ ಹೋರಾಟ ನಡೆಸಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಹೋರಾಟದಲ್ಲಿ ದಲಿತ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಗಳ ನೌಕರರು, ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ವಾತಂತ್ರ್ಯೋತ್ಸವ ದಿನ ಒಳಮೀಸಲಾತಿ ವಿಳಂಬ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ಆಕ್ರೋಶ; ದಲಿತ ಮುಖಂಡರ ಬಂಧನ
ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಮಲ್ಲೇಶ್, ಆಲೂರು ನಿಂಗರಾಜು, ನಿ. ಡಿವೈಎಸ್ಪಿ ರವಿನಾರಾಯಣ್, ಮಂಜುನಾಥ್ ಕುಂದುವಾಡ, ಹಾಲೇಶ್, ಗುಡ್ಡಪ್ಪ ಎಚ್ ಸಿ., ಮಲ್ಲಿಕಾರ್ಜುನ್, ಗೋವಿಂದರಾಜು, ನಿರಂಜನ್, ನಿಂಗಪ್ಪ ಚಿಕ್ಕನಹಳ್ಳಿ, ಮಲ್ಲಪ್ಪ, ಸೋಮಲಾಪುರ ಹನುಮಂತಪ್ಪ , ವೀರಭದ್ರಪ್ಪ, ನೀಲಗಿರಿಯಪ್ಪ, ಎಲ್ ಡಿ ಗೋಣೆಪ್ಪ, ಹರಿಹರ ಮಹಾಂತೇಶ್, ಕೃಷ್ಣಪ್ಪ, ರಾಘವೇಂದ್ರ, ಲಿಂಗರಾಜು ಗಾಂಧಿನಗರ, ಮಂಜುನಾಥ್ ಶಾಂತಿನಗರ, ಪ್ರದೀಪ್, ಶಿವಶಂಕರ್ ಸೇರಿದಂತೆ ಮಾದಿಗ ಸಂಘಟನೆಗಳ ಒಕ್ಕೂಟ, ದಲಿತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.