“”ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ ಜಾತಿಗಳನ್ನು ಬಲಾಢ್ಯ ಸಮುದಾಯದ ಗುಂಪಿನಲ್ಲಿ ಸೇರಿಸಿರುವುದರಿಂದ ಅಲೆಮಾರಿ ಜಾತಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಅಲೆಮಾರಿ ಜನಾಂಗದವರಿಗೆ ಶಿಕ್ಷಣ ಮತ್ತು ಉದ್ಯೋಗಗಳು ಮರೀಚಿಕೆಯಾಗಿದೆ, ಕರ್ನಾಟಕ
ರಾಜ್ಯ ಸರ್ಕಾರವು ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪುನರ್ ಪರಿಶೀಲನೆ ಮಾಡಿ ನ್ಯಾ. ನಾಗಮೋಹನ್ ದಾಸ್ ಅವರ ಆಯೋಗದ ವರದಿಯಲ್ಲಿ ತಿಳಿಸಿರುವಂತೆ ಅಲೆಮಾರಿ ಜನಾಂಗದವರಿಗೆ ಮತ್ತು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ನೀಡಿ ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಲೆಮಾರಿ ಜಾತಿಗಳ ಜನಾಂಗದವರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾಧಿಕಾರಿ ಜಿಎಂ ಗಂಗಾಧರ ಸ್ವಾಮಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸರ್ಕಾರವು ಒಳಮೀಸಲಾತಿ ವರ್ಗೀಕರಣ ಜಾರಿಯಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಜನಾಂಗದವರಿಗೆ ಆಗಿರುವ ಅನ್ಯಾಯ ವಿರೋಧಿಸಿ ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಅಲೆಮಾರಿಗಳಾದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಮಹಾ ಒಕ್ಕೂಟದ ಕಾರ್ಯಕರ್ತರು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಪರಿಶಿಷ್ಟ ಜಾತಿ ಅಲೆಮಾರಿಗಳಾದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49 ಜಾತಿಗಳ ಮಹಾ ಒಕ್ಕೂಟದ ಮುಖಂಡರಾದ, ಡಿ.ತಿಪ್ಪಣ್ಣ, ರಮೇಶ್ ಸಿ ದಾಸರ್, ತಿಪ್ಪೇಶಪ್ಪ ಗುರುರಾಜಪುರ ಮಾತನಾಡಿ “ಒಳ ಮೀಸಲಾತಿಯ ಹೋರಾಟಗಾರರಲ್ಲಿ ಬಹಳಷ್ಟು ಜನ ಪರಿಶಿಷ್ಟ ಜಾತಿಗಳ ಬಲಿಷ್ಠ ಮುಖಂಡರು ಅಲೆಮಾರಿಯ ಸೂಕ್ಷ್ಮ ಸಮುದಾಯಗಳನ್ನು ತೋರಿಸಿ, ಅಲೆಮಾರಿಗಳ ಗೋಳನ್ನು ತೋರಿಸಿ, ಅಲೆಮಾರಿಗಳು ಇನ್ನೆಷ್ಟು ದಿನ ಬೀದಿಗಳಲ್ಲಿ ದಿಕ್ಕಿಲ್ಲದ ಹಾಗೆ ಬದುಕಬೇಕು, ಅವರಿಗೆ ಅವರ ಪಾಲು ದಕ್ಕ ಬೇಡವೇ, ಅಲೆಮಾರಿಗಳು ಮುಖ್ಯ ವಾಹಿನಿಗೆ ಬರಬೇಕೆಂದು ಹೇಳುತ್ತಿದ್ದರು. ಇಲ್ಲಿಯವರೆಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಬಲಾಢ್ಯರೇ ಎಲ್ಲಾ ಸೌಲಭ್ಯಗಳನ್ನು ಪಡೆದಿದ್ದಾರೆ, ಒಳ ಮೀಸಲಾತಿಯಿಂದ ಸಣ್ಣ ಸಮುದಾಯಗಳಿಗೆ ಮತ್ತು ಅಲೆಮಾರಿಗಳಿಗೆ ನ್ಯಾಯ ದೊರಕುತ್ತದೆ ಎಂದು ಹೇಳುತ್ತಾ ಬರಲಾಯಿತು, ಆದರೆ ಅಲೆಮಾರಿ ಸಂಘಟನೆಗಳ ಮುಖಂಡರು ಒಳ ಮೀಸಲಾತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದಾರೆ” ಎಂದು ತಿಳಿಸಿದರು.

“ಆದರೆ ಇಂದು ಒಳಮೀಸಲಾತಿ ಜಾರಿಗೆ ತರುವಲ್ಲಿ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿ ಅನ್ಯಾಯ ಮಾಡಲಾಗಿದೆ. ಪರಿಶಿಷ್ಟ ಜಾತಿಗಳ ಬಲಿಷ್ಠ ಮುಖಂಡರು, ಸಹೋದರರು ನಮಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡುವರು ಎಂದು ಭಾವಿಸಿದ್ದೆವು. ಅಲೆಮಾರಿಗಳಿಗೆ ಶೇ.1 ಮೀಸಲಾತಿ ಪ್ರತ್ಯೇಕ ಒದಗಿಸುವ ಮೂಲಕ ದಿಕ್ಕಿಲ್ಲದ ಸಮುದಾಯಕ್ಕೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಅಲೆಮಾರಿಗಳಾದ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳ ಮಹಾ ಒಕ್ಕೂಟದ ದಾವಣಗೆರೆ ಜಿಲ್ಲಾ ಮುಖಂಡರುಗಳಾದ ತಿಪ್ಪಣ್ಣ ಡಿ, ರಮೇಶ್ ಸಿ ದಾಸರ್, ತಿಪ್ಪೇಶಪ್ಪ ಗುರುರಾಜಪುರ, ಮಂಜುನಾಥ ಗ್ರಾಮ ಪಂಚಾಯಿತಿ ಸದಸ್ಯರು,ಗುರುರಾಜಪುರ, ಹರೀಶ್ ಗುರುರಾಜಪುರ, ಮಂಜುನಾಥ ದಾಸರ್, ದಾವಣಗೆರೆ, ಗರುಳಾಧರ ಜರೇಕಟ್ಟೆ, ಆಂಜನೇಯ ಜರೇಕಟ್ಟೆ, ಸಿದ್ದಪ್ಪ ಹೊನ್ನಾಳಿ, ಹನುಮಂತಪ್ಪ ದಾವಣಗೆರೆ, ವೆಂಕಟೇಶ್ ಜೆ, ಅನಿಲ, ಪ್ರದೀಪ್ ಜರೇಕಟ್ಟೆ, ಮಂಜಪ್ಪ ಬಡಗಿ ಚಿಕ್ಕ ಕೋಗಲೂರು, ಮಹಾಂತೇಶ್ ಚಿಕ್ಕ ಕೋಗಲೂರು ಮತ್ತು ಇತರ ಉಪಸ್ಥಿತರಿದ್ದರು.