ಸರ್ಕಾರದ ಅಧಿಕೃತ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪತಿ, ಉದ್ಯಮಿ ಮಹೇಶ್ ಗುಪ್ತಾ ಕಾಣಿಸಿಕೊಂಡಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಭಾನುವಾರ ನಡೆಸಿದ ಸಭೆಯ ವೇಳೆ ರೇಖಾ ಗುಪ್ತಾ ಅವರ ಪತಿಯೂ ಕಾಣಿಸಿಕೊಂಡಿದ್ದಾರೆ.
ಈ ಸಭೆಯಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ನಿರ್ಣಯಿಸಲು ಮತ್ತು ನಿಗದಿತ ಸಮಯದೊಳಗೆ ವಿವರವಾದ ಸ್ಥಿತಿ ವರದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆದರೆ ಚಿತ್ರದಲ್ಲಿ ಸಿಎಂ ಪಕ್ಕದಲ್ಲೇ ಪತಿ ಇರುವುದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿಪಕ್ಷಗಳು ನಿಜವಾದ ಮುಖ್ಯಮಂತ್ರಿ ಯಾರು ರೇಖಾ ಅವರೇ ಅಥವಾ ರೇಖಾ ಪತಿ ಮಹೇಶ್ ಅವರೇ ಎಂದು ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ದೆಹಲಿ ಸಿಎಂ ರೇಖಾ ಗುಪ್ತಾ ಸೇರಿ ಐವರು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಮ್ ಆದ್ಮಿ ಪಕ್ಷ(ಎಎಪಿ) ಉಸ್ತುವಾರಿ ಸೌರಭ್ ಭಾರದ್ವಾಜ್, “ದೆಹಲಿ ಸರ್ಕಾರವು ಫುಲೇರಾ ಪಂಚಾಯತ್ ಆಗುತ್ತದೆ. ಫುಲೇರಾ ಪಂಚಾಯತ್‌ನಲ್ಲಿ ಮಹಿಳಾ ಸರಪಂಚ್ ಅವರ ಪತಿ ಸರಪಂಚ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅದರಂದತೆಯೇ ದೆಹಲಿಯಲ್ಲಿ, ಮುಖ್ಯಮಂತ್ರಿಯ ಪತಿ ಅಧಿಕೃತ ಸಭೆಗಳಲ್ಲಿ ಕುಳಿತಿದ್ದಾರೆ. ಇದು ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿದೆ. ರಾಷ್ಟ್ರದ ರಾಜಧಾನಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಈ ರೀತಿ ಅಪಹಾಸ್ಯ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
Who is running the Government of Delhi? Is it Madame Rekha Gupta or her husband? pic.twitter.com/zMh1lHAmyZ
— Congress Kerala (@INCKerala) September 7, 2025
“ಕಾಂಗ್ರೆಸ್ ಪಕ್ಷವನ್ನು ಪರಿವಾರ ರಾಜಕಾರಣಕ್ಕಾಗಿ ನಿಂದಿಸುತ್ತಿರುವ ಬಿಜೆಪಿ ಈಗ ವಿವರ ನೀಡಬೇಕು. ಇದು ಪರಿವಾರ ರಾಜಕಾರಣ ಅಲ್ಲದೆ ಮತ್ತೆ ಇನ್ನೇನು? ವಿಶ್ವದ ಅತಿದೊಡ್ಡ ಪಕ್ಷದ ಮುಖ್ಯಮಂತ್ರಿಗೆ ಅವರು ನಂಬಬಹುದಾದ ಯಾವುದೇ ಕಾರ್ಯಕರ್ತ ಉಳಿದಿಲ್ಲವೇ? ಕುಟುಂಬದ ಸದಸ್ಯರು ಮಾತ್ರ ಮಾಡಬಹುದಾದ ಕೆಲಸ ಯಾವುದು? ಮುಖ್ಯಮಂತ್ರಿ ತನ್ನ ಪತಿಯ ಅಧಿಕಾರವನ್ನು ಸ್ಥಾಪಿಸಲು ಬಯಸುವ ಕಾರಣಗಳೇನು” ಎಂದು ಪ್ರಶ್ನಿಸಿದ್ದಾರೆ.
“ಸಿಎಂ ಪತಿಯನ್ನು ಈ ರೀತಿ ಸರ್ಕಾರಿ ಆಡಳಿತ ವ್ಯವಸ್ಥೆಯ ಭಾಗವಾಗಿ ಏಕೆ ಮಾಡಲಾಗುತ್ತಿದೆ? ಈ ಫೋಟೋವನ್ನು ಸಿಎಂ ರೇಖಾ ಗುಪ್ತಾ ಅವರ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಕೊಳ್ಳಲಾಗಿದೆ. ಅದೇ ಫೋಟೋವನ್ನು ಸಿಎಂಒ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.
दिल्ली सरकार बनी फुलेरा पंचायत
— Saurabh Bharadwaj (@Saurabh_MLAgk) September 7, 2025
जैसे फुलेरा की पंचायत में महिला प्रधान के पति प्रधान की तरह काम करते थे , आज दिल्ली में CM के पति आधिकारिक मीटिंग में बैठ रहे हैं ।
हमने पहले भी बताया था कि CM आले पति आधिकारिक मीटिंग में बैठते हैं , अधिकारियों के साथ मीटिंग और इंस्पेक्शन करते… pic.twitter.com/40D3kz5OXU
ಪ್ರಧಾನಿ ಮೋದಿ ದೆಹಲಿಯಲ್ಲಿ “ಇಬ್ಬರು ಮುಖ್ಯಮಂತ್ರಿಗಳನ್ನು” ನೇಮಿಸಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ರೇಖಾ ಗುಪ್ತಾ ಅವರನ್ನು ಟೀಕಿಸಿದ್ದಾರೆ. “ಫುಲೇರಾ ಪಂಚಾಯತ್‌ಗೆ ಸ್ವಾಗತ. ಪ್ರಧಾನಿ ಮೋದಿ ದೆಹಲಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ರೇಖಾ ಗುಪ್ತಾ ಮುಖ್ಯಮಂತ್ರಿ, ಅವರ ಪತಿ ಸೂಪರ್ ಮುಖ್ಯಮಂತ್ರಿ. ಬಿಜೆಪಿ 6 ತಿಂಗಳಲ್ಲಿ ದೆಹಲಿಯನ್ನು ಧ್ವಂಸ ಮಾಡಿದೆ” ಎಂದು ದೂರಿದ್ದಾರೆ.
ಇನ್ನು “ರೇಖಾ ಗುಪ್ತಾ ದೆಹಲಿ ಸರ್ಕಾರವನ್ನು ನಡೆಸುತ್ತಿದ್ದಾರೋ ಅಥವಾ ಅವರ ಪತಿಯೋ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆದರೆ ಬಿಜೆಪಿ ಮಾತ್ರ ಸಿಎಂ ಪತಿ ಅಧಿಕೃತ ಸಭೆಯಲ್ಲಿ ಭಾಗಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದೆ.
