ಧರ್ಮಸ್ಥಳದಲ್ಲಿ ನೂರಾರು ಹತ್ಯೆಗಳು, ಅತ್ಯಾಚಾರಗಳು ನಡೆದಿದ್ದು, ಮೃತದೇಹಗಳನ್ನು ಗೌಪ್ಯವಾಗಿ ಹೂತು ಹಾಕಲಾಗಿದೆ ಎಂಬ ಆರೋಪದ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರ ನೇತೃತ್ವದಲ್ಲಿ SIT ರಚನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಎಸ್‌ಐಟಿ ರಚಿಸಿ ಆದೇಶಿಸಿರುವ ಸರ್ಕಾರ, “ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಲಾಗಿದೆ. ಪ್ರಕರಣ ತನಿಖೆಯನ್ನು ಶೀಘ್ರವೇ ಎಸ್‌ಐಟಿ ಕೈಗೆತ್ತಿಕೊಳ್ಳಲಿದೆ. ಧರ್ಮಸ್ಥಳದಲ್ಲಿನ ಹತ್ಯೆಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದೆ.
“ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಹೂತುಹಾಕಲಾಗಿದ್ದ ವ್ಯಕ್ತಿಯೊಬ್ಬರ ತಲೆಬುರುಡೆಯೊಂದನ್ನು ಆತ ಹೊರತೆಗೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ನಾಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದ ಹೇಳಿಕೆಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳಲ್ಲಿ ಹಲವು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಬಲಿಯಾಗಿರುವುದಾಗಿ ತಿಳಿಸಲಾಗಿದೆ. ಹೀಗಾಗಿ, ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ” ಎಂದು ಸರ್ಕಾರ ಹೇಳಿದೆ.
ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ ಕುಮಾರ್ ಮೊಹಂತಿ ಅವರನ್ನು ನೇಮಿಸಲಾಗಿದೆ. ತಂಡವು IPS ಅಧಿಕಾರಿಗಳಾದ ಎಂ.ಎನ್ ಅನುಚೇತ್, ಸೌಮ್ಯಲತಾ ಹಾಗೂ ಜಿತೇಂದ್ರ ಕುಮಾರ್ ಅವರನ್ನು ಒಳಗೊಂಡಿದೆ.