ವಿದ್ಯಾನಗರಿ, ಪೇಡಾನಗರಿ, ಟ್ಯುಟೋರಿಯಲ್‌ಗಳ ಕಾಶಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಹಲವು ಕಲೆ ಮತ್ತು ಸಾಹಿತ್ಯ, ಸಾಹಿತಿಗಳ, ಕಲಾವಿದರ, ವಿವಿಧ ರಂಗಗಳ ಸಾಧಕರಿಗೆ ಜನ್ಮನೀಡಿದ ಪುಣ್ಯಭೂಮಿ. ಧಾರವಾಡ ಪೇಡೆಯಿಂದ ಪೇಡಾನಗರಿ ಎಂದು ಹೆಸರುವಾಸಿಯಾಗಿದೆ. ಬೆಳಗಾವಿ ಕುಂದಾ, ಗೋಕಾಕ್ ಕರದಂಟು, ಧಾರವಾಡ ಪೇಡೆ ರುಚಿ ರುಚಿಯಾಗಿರಲು ಕಾರಣ; ಧಾರವಾಡ ಎಮ್ಮೆಯ ಹಾಲು.
ಹೀಗೆ ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಾಣುವ ಧಾರವಾಡ ಕ್ಷೇತ್ರದ ರಾಜಕೀಯ ಇತಿಹಾಸದ ಬಗ್ಗೆಯೂ ನಾವು ಮೆಲಕು ಹಾಕಬೇಕಿದಾಗ; 1962 ರಲ್ಲಿ ಧಾರವಾಡ ಉತ್ತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಡಾ. ಸರೋಜಿನಿ ಮಹಿಷಿ ಮೊದಲ ಬಾರಿಗೆ ಆಯ್ಕೆಯಾಗುತ್ತಾರೆ. ಅಲ್ಲಿಂದ ಹಿಡಿದು ಹಲವಾರು ಘಟಾನುಘಟಿಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ. 2004, 2009, 2014, 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಲ್ಹಾದ್ ಜೋಶಿ ಲೋಕಸಭೆಗೆ ಆಯ್ಕೆಯಾಗುತ್ತಾರೆ. ಈಗ ಪುನಃ ಐದನೆ ಬಾರಿ 2024ರ ಚುನಾವಣೆಗೆ ಬಿಜೆಪಿಯಿಂದ ಅವರಿಗೇ ಟಿಕೆಟ್ ಘೋಷಣೆಯಾಗಿದೆ.
ಇನ್ನು 2019 ಕ್ಕೂ 2024 ಕ್ಕೂ ಲಿಂಗಾಯತರ ಸಂಖ್ಯೆಯನ್ನು ಹೋಲಿಸಿದರೆ 1 ಲಕ್ಷ 20 ಸಾವಿರದವರೆಗೆ ಹೆಚ್ಚಾಗಿದೆ. ಈ ಲೆಕ್ಕಾಚಾರದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 2009 ರಿಂದ ಬಿಜೆಪಿ ಅಂಕೆಯಲ್ಲಿದ್ದ ಧಾರವಾಡ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಲಿಂಗಾಯತ ಅಭ್ಯರ್ಥಿ ಕಡೆಗೆ ಹೆಚ್ಚು ಗಮನಹರಿಸಿದೆ. ಈ ನಿಟ್ಟಿನಲ್ಲಿ ರಜತ್ ಉಳ್ಳಾಗಡ್ಡಿಮಠ, ಲಿಂಗಾಯತ ಹಿರಿಯ ನಾಯಕ ಮೋಹನ ಲಿಂಬಿಕಾಯಿ, ಶಾಸಕ ವಿನಯ ಕುಲಕರ್ಣಿ ಪತ್ನಿ ಲಿಂಗಾಯತ ಸಾಲಿನಲ್ಲಿ ನಿಲ್ಲುತ್ತಾರೆ. ಇದರಲ್ಲಿ ಕೆಲವರ ಹೆಸರು ಪಟ್ಟಿಯಿಂದ ತೆಗೆಯಲಾಗಿದೆ. ಕುರುಬ ಕೋಟಾದಲ್ಲಿ ವಿನೋದ್ ಅಸೂಟಿ ಇದ್ದರು. ಸಂತೋಷ್ ಲಾಡ್ ಹೆಸರೂ ಪಟ್ಟಿಯಲ್ಲಿದೆ. ಒಟ್ಟು ಅಂತಿಮ ಪಟ್ಟಿಯಲ್ಲಿ 2 ಜನರ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ, ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದರು.
ಇಸ್ವಿ 1951-52 ನೆ ಸಾಲಿನಲ್ಲಿ 1 ನೆ ಲೋಕಸಭಾ ಚುನಾವಣೆ ಪ್ರಾರಂಭವಾಗಿ 2024 ನೇ ಸಾರ್ವತ್ರಿಕ ಚುನಾವಣೆಗೆ ಅಂದರೆ, 18 ನೇ ಲೋಕಸಭಾ ಚುನಾವಣೆಗೆ ನಾವು ಕಾಲಿಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಾರಂಭದ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಧಾರವಾಡ ಇತ್ತೀಚೆಗೆ ಬಿಜೆಪಿ ತೆಕ್ಕೆಗೆ ಒಳಪಡುತ್ತದೆ. ಈಗ ಮತ್ತೆ ಧಾರವಾಡ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಅಧಿಕಾರಕ್ಕೆ ಒಳಪಡುತ್ತದೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳು ಅಭ್ಯರ್ಥಿಯ ಕೈಹಿಡಿಯಲಿವೆ ಎಂದು ಸಂತೋಷ್ ಲಾಡ್ ಹೇಳುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ನಮಗೆ ಅನುಕೂಲವಾಗಿದೆ. ಬಡವರು ಬದುಕುವಂತಾಗಿದೆ. ಬಿಜೆಪಿ ಜನರ ಮದ್ಯೆ ಕೋಮುಧ್ವೇಷ ಎಬ್ಬಿಸುತ್ತಲೇ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಧಾರವಾಡ ಕ್ಷೇತ್ರದ ಜನತೆ ಹೇಳುತ್ತಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ನಿರ್ಣಾಯಕರಾಗಲಿದ್ದಾರೆಂಬ ಲೆಕ್ಕಾಚಾರದಲ್ಲಿರುವ ಹೈಕಮಾಂಡ್ ಲಿಂಗಾಯತ ಮತಗಳಿಂದ ಜೋಶಿಯನ್ನು ಮಣಿಸಲು ಯೋಚನೆ ಮಾಡಿದೆ. ಚುನಾಯಿತನಾದರೆ, ಮಹದಾಯಿ ಯೋಜನೆಯನ್ನು ಜಾರಿತರಿಸುವ ಕಾರ್ಯಕ್ಕೆ ಮುಂದಾಗುತ್ತೇನೆ ಎಂದು ಮೋಹನ್ ಲಿಂಬಿಕಾಯಿ, ವಿನೋದ್ ಅಸೂಟಿ ಹೇಳುತ್ತಾರೆ. ಸಂತೋಷ್ ಲಾಡ್ ಟಿಕೆಟ್ ಆಕಾಂಕ್ಷಿ ಅಲ್ಲದಿದ್ದರೂ ಬಹುತೇಕ ಅವರಿಗೇ ಟಿಕೆಟ್ ಫೈನಲ್ ಆಗುವ ಸಾಧ್ಯತೆಯಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮತ್ತು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈಗಾಗಲೆ ಮುಂಬರುವ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ. ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಲ್ಹಾದ್ ಜೋಶಿಯವರಿಗೆ ಟಿಕೆಟ್ ದೊರಕಿದೆ. ಟಿಕೆಟ್ ನೀಡಲು ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿರುವ ಕಾಂಗ್ರೆಸ್‌ನಲ್ಲಿ ವಿನೋದ್ ಅಸೂಟಿ ಹೆಸರು ಅಂತಿಮವಾಗಿದೆ ಎಂದು ಪ್ರಚಾರವಾಗುತ್ತಿದ್ದರೂ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಕೇಳುತ್ತಿದೆ. ರಜತ್ ಉಳ್ಳಾಗಡ್ಡಿಮಠ ಹೆಸರು ಪಟ್ಟಿಯಿಂದ ಹೊರ ಹಾಕಲಾಗಿದೆ ಎಂಬುದು ಕೇಳಿಬರುತ್ತಿದೆ. ವಿನಯ ಕುಲಕರ್ಣಿ ಪತ್ನಿ ಮತ್ತು ಸಂತೋಷ್ ಲಾಡ್ ಹೆಸರು ಅಂತಿಮ ಪಟ್ಟಿಯಲ್ಲಿವೆ. ಅಧಿಕೃತವಾಗಿ ಯಾರ ಹೆಸರು ಘೋಷಣೆ ಆಗುವುದೆಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ.
ಇನ್ನು ಭಾರತದ ರಾಜಕಾರಣದಲ್ಲಿ ಧಾರವಾಡ ಲೋಕಸಭಾ ಅತ್ಯಂತ ರಾಜಕೀಯ ಶಕ್ತಿ ಹೊಂದಿರುವ ಕ್ಷೇತ್ರ ಮತ್ತು ಹೆಚ್ಚು ಗಮನ ಸೆಳೆವ ಕ್ಷೇತ್ರವೆಂದು ಹೆಸರುವಾಸಿಯಾಗಿದೆ. ಮತ್ತು ಕರ್ನಾಟಕದ ನಿರ್ಣಾಯಕ ಕ್ಷೇತ್ರವಾಗಿ ಎದ್ದು ಕಾಣುತ್ತದೆ. ಧಾರವಾಡ ಕ್ಷೇತ್ರವು ಹಲವು ವೈವಿದ್ಯಮಯ ಸಂಸ್ಕೃತಿ, ಸಂಪ್ರದಾಯ, ಜನ ಸಮುದಾಯಗಳನ್ನು ಹೊಂದಿದೆ. ಮುಂಬರುವ ಚುನಾವಣೆಗೆ ರೆಡಿಯಾಗಿರುವ ಮತದಾರರಲ್ಲಿ ಮತಹಾಕುವ ಉತ್ಸುಕತೆ ಹೆಚ್ಚಾಗಿದ್ದು, ಈ ಬಾರಿಯು ಧಾರವಾಡ ಲೋಕಸಭಾ ಚುನಾವಣೆ ಅತ್ಯಂತ ಪೈಪೋಟಿಯ ವಾತವರಣ ಸೃಷ್ಟಿಸುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
