ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ವೈದ್ಯೆ ಚಿಕಿತ್ಸೆ ನಿರಾಕರಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ವಿಡಿಯೋ ಹರಿದಾಡುತ್ತಿದ್ದು ವೈದ್ಯೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗರ್ಭಿಣಿ ಶಾಮಾ ಪರ್ವೀನಾ ಎಂಬ ಮಹಿಳೆಯನ್ನು ಸೆಪ್ಟೆಂಬರ್ 30ರಂದು ರಾತ್ರಿ ಜೌನ್‌ಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಪರ್ವೀನಾ ಪತಿ ಮೊಹಮ್ಮದ್ ನವಾಝ್ ಆರೋಪಿಸಿದ್ದಾರೆ. “ಆಕೆಯನ್ನು ಆಪರೇಷನ್ ಥಿಯೇಟರ್‌ಗೆ ಕರೆತರಬೇಡಿ. ಆಕೆ ಮುಸ್ಲಿಂ, ಆಕೆಗೆ ನಾನು ಚಿಕಿತ್ಸೆ ನೀಡುವುದಿಲ್ಲ” ಎಂದು ವೈದ್ಯೆ ತಿಳಿಸಿರುವುದಾಗಿ ವರದಿಯಾಗಿದೆ. ಈ ಸಂಬಂಧ ಮಹಿಳೆ ಮಾತನಾಡಿರುವ ವಿಡಿಯೋ ಕೂಡಾ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ
ಆದರೆ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಂದ್ರ ಗುಪ್ತಾ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಮಹಿಳೆಗೆ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ ಪೊಲೀಸರು ಮಹಿಳೆಯ ವಿಡಿಯೋವನ್ನು ಹಂಚಿಕೊಂಡ ಇಬ್ಬರು ಸ್ಥಳೀಯ ಪತ್ರಕರ್ತರಾದ ಮಯಾಂಕ್ ಶ್ರೀವಾಸ್ತವ ಮತ್ತು ಮೊಹಮ್ಮದ್ ಉಸ್ಮಾನ್ ವಿರುದ್ಧ ವೈದ್ಯಾಧಿಕಾರಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಆಸ್ಪತ್ರೆಗೆ ನುಗ್ಗಿ ಮಹಿಳೆಯಿಂದ ಬಲವಂತವಾಗಿ ವಿಡಿಯೋ ಹೇಳಿಕೆ ಪಡೆದಿದ್ದಾರೆ ಎಂದು ದೂರಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ದ್ವೇಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವೈದ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. “ಇವೆಲ್ಲವೂ ಕೇಂದ್ರ ಸರ್ಕಾರ, ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಬಿತ್ತುತ್ತಿರುವ ಮುಸ್ಲಿಂ ದ್ವೇಷದ ಪ್ರತಿಫಲ” ಎಂದು ನೆಟ್ಟಿಗರು ಹೇಳಿದ್ದಾರೆ. “ಸರ್ಕಾರ ತೆರಿಗೆ ಹಾಕುವಾಗ ಯಾವುದೇ ಧರ್ಮವನ್ನು ನೋಡಲ್ಲ ಎಂಬುದನ್ನು ಈ ವೈದ್ಯರಿಗೆ ಯಾರಾದರೂ ತಿಳಿಸಿ” ಎಂದು ಇನ್ನೋರ್ವ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
“ಇಂತಹ ದ್ವೇಷ ಮನಸ್ಥಿತಿ ಹೊಂದಿರುವ ವೈದ್ಯರಿಗೆ ಎಲ್ಲಿಯೂ ಅವಕಾಶ ನೀಡಬಾರದು. ಅವರು ವೈದ್ಯರೆಂದು ಕರೆಸಿಕೊಳ್ಳುವ ಅರ್ಹತೆಯನ್ನೂ ಹೊಂದಿಲ್ಲ. ಇಂತಹ ವೈದ್ಯರುಗಳ ಪರವಾನಗಿಯನ್ನು ರದ್ಧುಗೊಳಿಸಬೇಕು” ಎಂದು ಕೆಲ ನೆಟ್ಟಿಗರು ಆಗ್ರಹಿಸಿದರು.
A pregnant woman from the Muslim community was allegedly denied admission for delivery at a hospital in Jaunpur, Uttar Pradesh.
— Dr. Shama Mohamed (@drshamamohd) October 4, 2025
“You are a Muslim, we will not give you treatment.”
An FIR must be filed against this doctor, and strict action must be taken. This is the result of… pic.twitter.com/9LrWRoC1je
ಇವೆಲ್ಲವುದರ ನಡುವೆ ವಿರೋಧ ಪಕ್ಷಗಳು ಕೋಮುವಾದವನ್ನು ನಿರಂತರವಾಗಿ ಹಬ್ಬಿಸುತ್ತಿರುವ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷದ ಶಾಸಕಿ ರಾಗಿಣಿ ಸೋಂಕರ್, “ಇದು ನಾಚಿಕೆಗೇಡು. ರಾಜ್ಯದಲ್ಲಿ ಕೋಮು ದ್ವೇಷ ಹಬ್ಬಿಸಿರುವುದರ ಫಲ ಇದಾಗಿದೆ. ನೋವಿನಲ್ಲಿರುವ ಯಾವ ಗರ್ಭಿಣಿಯೂ ಸುಳ್ಳು ಹೇಳಲು ಸಾಧ್ಯವಿಲ್ಲ. ವೈದ್ಯರ ವಿರುದ್ಧ ಕ್ರಮಕೈಗೊಳ್ಳುವ ಬದಲು ಸುದ್ದಿಯನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಸರ್ಕಾರ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ” ಎಂದು ದೂರಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕ ವಿಕೇಶ್ ಉಪಾಧ್ಯಾಯ ವಿಕ್ಕಿ, “ಎಲ್ಲರಿಗೂ ಚಿಕಿತ್ಸೆ ನೀಡುವ ಪ್ರಮಾಣ ಮಾಡಿ ಈಗ ಧರ್ಮದ ಆಧಾರದಲ್ಲಿ ರೋಗಿಗಳನ್ನು ದೂರ ಮಾಡುವುದು ನಾಚಿಕೆಗೇಡಿನ ಸಂಗತಿ. ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಆದರೆ ಬಿಜೆಪಿ ವಕ್ತಾರ ಅವ್ನೀತ್ ತ್ಯಾಗಿ ಮಾತ್ರ, “ಇದು ಸುಳ್ಳು ಆರೋಪ” ಎಂದಿದ್ದಾರೆ.
