ಚುನಾವಣಾ ಆಯೋಗವು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೈಯಲ್ಲಿ ‘ಕೈಗೊಂಬೆ’ಯಾಗಿದೆ ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಬಿಹಾರದಲ್ಲಿ ಚುನಾವಣಾ ಸಂಸ್ಥೆಯ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಬಹುಮತದ ಸರ್ಕಾರಗಳು ಅಧಿಕಾರದಲ್ಲಿ ಉಳಿಯುವಂತೆ ನೋಡಿಕೊಳ್ಳುವ ಸಂವಿಧಾನಬಾಹಿರ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ಸಿಬಲ್, “ಪ್ರತಿಯೊಬ್ಬ ಚುನಾವಣಾ ಆಯುಕ್ತರು ಸರ್ಕಾರದೊಂದಿಗೆ ಹೊಂದಾಣಿಕೆ ವಿಚಾರದಲ್ಲಿ ಈ ಹಿಂದಿನ ಚುನಾವಣಾ ಆಯುಕ್ತರನ್ನು ಮೀರಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಇದನ್ನು ಓದಿದ್ದೀರಾ? ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
ಈ ಸಂದರ್ಭದಲ್ಲೇ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಟೀಕಿಸಿದ ಮಾಜಿ ಕಾನೂನು ಸಚಿವ ಸಿಬಲ್, “ಚುನಾವಣಾ ಆಯೋಗವು ಪೌರತ್ವದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ” ಎಂದು ಹೇಳಿದರು. ಈ ಹಿಂದೆ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಕೂಡಾ ಈ ರೀತಿಯ ಹೇಳಿಕೆ ನೀಡಿದ್ದರು. “ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ” ಎಂದಿದ್ದರು.
ಎಸ್ಐಆರ್ ವಿಚಾರದಲ್ಲಿ ಚುನಾವಣಾ ಆಯೋಗದ ಮೇಲೆ ದಾಳಿ ನಡೆಸಿದ ಸಿಬಲ್, “ಸದ್ಯ ಇರುವ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ. ಚುನಾವಣಾ ಆಯೋಗದ ನಡವಳಿಕೆ, ಅದರ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಉತ್ತಮ” ಎಂದರು.
“ಬಡವರು, ಅಂಚಿನಲ್ಲಿರುವವರು, ಆದಿವಾಸಿಗಳ ಹೆಸರುಗಳನ್ನು ಅಳಿಸಿದರೆ, ಬಹುಸಂಖ್ಯಾತ ಪಕ್ಷ ಯಾವಾಗಲೂ ಗೆಲ್ಲುತ್ತದೆ ಎಂಬುದು ಈ ಪರಿಷ್ಕರಣೆ ಹಿಂದಿರುವ ಉದ್ದೇಶ. ಆದ್ದರಿಂದ ಇದು ತುಂಬಾ ಕಳವಳಕಾರಿ” ಎಂದು ಹೇಳಿದರು.
