ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ ಗಯಾ ಜಿಲ್ಲೆಯ ಇಡೀ ಹಳ್ಳಿಯೊಂದು ಒಂದೇ ಮನೆಯಲ್ಲಿ ವಾಸಿಸುತ್ತಿರುವಂತೆ ತೋರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದಲ್ಲಿ ‘ಮತದಾರ ಅಧಿಕಾರ ಯಾತ್ರೆ’ ನಡೆಸುತ್ತಿರುವ ರಾಹುಲ್ ಗಾಂಧಿ, “ಚುನಾವಣಾ ಆಯೋಗದ ಮ್ಯಾಜಿಕ್ ನೋಡಿ. ಇಡೀ ಹಳ್ಳಿಯು ಒಂದೇ ಮನೆಯಲ್ಲಿ ನೆಲೆಸಿದೆ” ಎಂಬ ಹೇಳಿಕೆಯೊಂದಿಗೆ ತಮ್ಮ ಕಾಂಗ್ರೆಸ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರದಲ್ಲಿ ರಾಹುಲ್ ಗಾಂಧಿ ‘ಮತದಾರರ ಅಧಿಕಾರ ಯಾತ್ರೆ’
“ಬರಾಚಟ್ಟಿ ವಿಧಾನಸಭಾ ಕ್ಷೇತ್ರದ ಗಯಾ ಜಿಲ್ಲೆಯ ನಿಡಾನಿ ಗ್ರಾಮದಲ್ಲಿ, ಒಂದು ಬೂತ್ನ ಎಲ್ಲಾ 947 ಮತದಾರರು ಮನೆ ಸಂಖ್ಯೆ ಆರರ ನಿವಾಸಿಗಳು ಎಂದು ತೋರಿಸಲಾಗಿದೆ” ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಹಾಗೆಯೇ, “ಇದು ಕೇವಲ ಒಂದು ಹಳ್ಳಿಯ ಬಗ್ಗೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಕ್ರಮಗಳ ಪ್ರಮಾಣವನ್ನು ನಾವು ಊಹಿಸಲೂ ಸಾಧ್ಯವಿಲ್ಲ” ಎಂದು ಹೇಳಿದೆ.
ಆದರೆ ಬಿಹಾರದ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಗಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಎಕ್ಸ್ ಖಾತೆ ಮೂಲಕ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. “ಮನೆಗಳಿಗೆ ನಿಜವಾದ ಸರಣಿ ಸಂಖ್ಯೆಗಳಿಲ್ಲದ ಹಳ್ಳಿಗಳು ಅಥವಾ ಕೊಳೆಗೇರಿ ಸಮೂಹಗಳಲ್ಲಿ ಒಂದು ಮನೆ ಸಂಖ್ಯೆಯನ್ನು ನೀಡಲಾಗುತ್ತದೆ. ಮತದಾರರನ್ನು ಸೇರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇದನ್ನು ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಹೇಳಿಕೊಂಡಿದ್ದಾರೆ.
ಗ್ರಾಮದ ನಿವಾಸಿಗಳೆಂದು ಹೇಳಲಾದ ವೀಡಿಯೊ ತುಣುಕುಗಳನ್ನು ಸಹ ಜಿಲ್ಲಾಧಿಕಾರಿಯ X ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ.
