ಮತಗಳ್ಳತನ ವಿರುದ್ದ ಹೋರಾಟದ ವಿಚಾರವಾಗಿ ತಮ್ಮದೇ ಪಕ್ಷದ ವಿರುದ್ಧ ಮಾತನಾಡಿ, ಸಚಿವ ಸ್ಥಾನ ಕಳೆದುಕೊಂಡಿರುವ ಕೆ.ಎನ್ ರಾಜಣ್ಣ ಅವರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆ.ಎನ್ ರಾಜಣ್ಣ ಬಿಜೆಪಿಗೆ ಸೇರಿಕೊಳ್ಳಲು ಅರ್ಜಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ಆರೋಪಿಸಿದ್ದಾರೆ.
ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಅಧಿವೇಶನ ನಡೆಯುತ್ತಿದ್ದ ಸಮಯಲ್ಲಿಯೇ ಸಚಿವ ಸಂಪುಟದಿಂದ ಕೈಬಿಡಲಾಯಿತು. ಈ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಭಾರೀ ಚರ್ಚೆಯಾಗಿತ್ತು. ಮಾತ್ರವಲ್ಲದೆ, ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಅವರ ಅಭಿಮಾನಿಗಳು ಮಧುಗಿರಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಇದೆಲ್ಲದರ ನಡುವೆ, ರಾಜಣ್ಣ ಅವರ ಭವಿಷ್ಯದ ನಡೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೇ ಹೊತ್ತಿನಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರು ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂದು ಆರೋಪಿಸಿದ್ದಾರೆ.
“ರಾಜಣ್ಣ ಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂಬುದನ್ನು ಜಗತ್ತು ಗಮನಿಸಿದೆ. ʼಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತುʼ ಎನ್ನುವಂತೆ ಅವರು ಮಾತಾಡುತ್ತಿದ್ದರು. ಅವರ ಹೇಳಿಕೆಯಿಂದಲೇ ಅವರು ಸಚಿವ ಸ್ಥಾನ ಕಳೆದುಕೊಂಡರು. ಇದರ ಹಿಂದೆ ಯಾರದ್ದೇ ಷಡ್ಯಂತ್ರವಿಲ್ಲ” ಎಂದು ಬಾಲಕೃಷ್ಣ ಹೇಳಿದ್ದಾರೆ.
“ಹೈಕಮಾಂಡ್ ವಿರುದ್ಧ ಮಾತನಾಡಿದ್ದಾಗಿ ಅವರನ್ನು ವಜಾಗೊಳಿಸಲಾಗಿದೆ. ಅವರು ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲವೆಂದು ಅವರು ಹೇಳಿಕೊಳ್ಳುತ್ತಿದ್ದರು. ಆದರೆ, ಅವರು ಯಾರ ಸಂಪರ್ಕದಲ್ಲಿದ್ದಾರೆ ಎಂಬುದು ಗೊತ್ತಾಗಬೇಕು. ಅವರನ್ನು ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಿದರೆ, ಸತ್ಯ ಗೊತ್ತಾಗುತ್ತದೆ. ಅವರು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಬೇರೆ ಪಕ್ಷ ಸೇರುತ್ತಾರೆ” ಎಂದು ಆರೋಪಿಸಿದ್ದಾರೆ.