ತಮಿಳುನಾಡಿನ ಕಡಲೂರಿನಲ್ಲಿ ಸಂಭವಿಸಿದ ಶಾಲಾ ವ್ಯಾನ್ ಅಪಘಾತಕ್ಕೆ ತಮಿಳು ಭಾಷೆ ಬರದಿರುವುದೇ ಕಾರಣವಾಗಿರಬಹುದು ಎಂದು ಡಿಎಂಕೆಯ ಹಿರಿಯ ನಾಯಕ ಟಿಕೆಎಸ್ ಎಳಂಗೋವನ್ ಮಂಗಳವಾರ ಆರೋಪಿಸಿದ್ದಾರೆ. “ರೈಲ್ವೆ ಕ್ರಾಸಿಂಗ್ನಲ್ಲಿದ್ದ ಗೇಟ್ಕೀಪರ್ ತಮಿಳು ಭಾಷಿಕರಲ್ಲ, ಸರಿಯಾಗಿ ಸಂವಹನ ನಡೆಯದ್ದು ಈ ದುರಂತಕ್ಕೆ ಕಾರಣವಾಗಿರಬಹುದು” ಎಂದು ಡಿಎಂಕೆ ನಾಯಕ ಅಭಿಪ್ರಾಯಿಸಿದರು.
ಕಡಲೂರು ಮತ್ತು ಅಲಪ್ಪಕ್ಕಂ ನಡುವಿನ ಇಂಟರ್ಲಾಕ್ ಇಲ್ಲದ ಲೆವೆಲ್ ಕ್ರಾಸಿಂಗ್ನ ಗೇಟ್ ಸಂಖ್ಯೆ 170ರಲ್ಲಿ ಬೆಳಿಗ್ಗೆ 7.45ರ ಸುಮಾರಿಗೆ ಐದು ವಿದ್ಯಾರ್ಥಿಗಳಿದ್ದ ಶಾಲಾ ವ್ಯಾನ್ ಅಪಘಾತಕ್ಕೀಡಾಗಿದೆ. ಚಾಲಕ ರೈಲು ಬರುವ ಕಾರಣ ಗೇಟ್ ಮುಚ್ಚಿದ್ದಾಗ ಹಳಿ ದಾಟಿ ವಾಹನ ಚಲಾಯಿಸಲು ಯತ್ನಿಸಿದ್ದ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ತಮಿಳುನಾಡು | ಬಿಜೆಪಿ ನಾಯಕನ ಕೊಲೆ; ಡಿಎಂಕೆ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಈ ವೇಳೆ ವಿಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ಸೇವೆಯ ರೈಲು ಸಂಖ್ಯೆ 56813, ವ್ಯಾನ್ಗೆ ಡಿಕ್ಕಿ ಹೊಡೆದಿದೆ. ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ನಿಮಿಲೇಶ್ (12), ಚಾರುಮತಿ (16) ಮತ್ತು ಚೆಝಿಯಾನ್ ಎಂದು ಗುರುತಿಸಲಾಗಿದೆ. ಉಳಿದವರು ಇನ್ನೂ ಕಡಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಘಟನೆಯ ನಂತರ ಪಂಕಜ್ ಶರ್ಮಾ ಎಂದು ಗುರುತಿಸಲಾದ ಗೇಟ್ಕೀಪರ್ ಅನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯ ಭಾಗವಾಗಿ ಬಂಧಿಸಲಾಗಿದೆ. ಶರ್ಮಾ ಗೇಟ್ ಮುಚ್ಚುತ್ತಿರುವಾಗ ಹಳಿ ದಾಟಿ ವಾಹನ ಚಲಾಯಿಸದಂತೆ ಎಚ್ಚರಿಕೆ ನೀಡಿದ್ದರೂ ವ್ಯಾನ್ ಚಾಲಕ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ತಮಿಳು ಬಾರದಿರುವುದು ಕಾರಣವಾಗಿರಬಹುದು ಎಂದು ಡಿಎಂಕೆ ನಾಯಕ ಅಭಿಪ್ರಾಯಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಡಿಕ್ಕಿಗೆ ಕಾರಣ ಪತ್ತೆಗಾಗಿ ಸದ್ಯ ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಜಂಟಿ ತನಿಖೆ ನಡೆಯುತ್ತಿದೆ.
