ಅಮೆರಿಕಗೆ ಉದ್ಯೋಗಕ್ಕಾಗಿ ತೆರಳುವವರಿಗೆ ನೀಡಲಾಗುವ ಎಚ್1ಬಿ ವೀಸಾ ಮೇಲಿನ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (84 ಲಕ್ಷ ರೂ.) ಹೆಚ್ಚಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿಹಾಕಿದ್ದಾರೆ. ಅಮೆರಿಕದಲ್ಲಿ ಉದ್ಯೋಗ ಮಾಡುವ ವಿದೇಶಿ ಉದ್ಯೋಗಿಯು ಪ್ರತಿ ವರ್ಷ, ಎಚ್1ಬಿ ವೀಸಾಗಾಗಿ 1 ಲಕ್ಷ ಡಾಲರ್ ಶುಲ್ಕವನ್ನು ಪಾವತಿ ಮಾಡಬೇಕಿದೆ. ಇದು ಎಚ್1ಬಿ ವೀಸಾ ಪಡೆದು ಅಮೆರಿಕದಲ್ಲಿ ನೆಲೆಸಿರುವ ಸುಮಾರು 70% ಭಾರತೀಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಎಚ್1ಬಿ ವೀಸಾ ಶುಲ್ಕ ಏರಿಕೆಯ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಹುಟ್ಟುಹಬ್ಬದ ಕರೆಯ ನಂತರ ನೀವು ಸ್ವೀಕರಿಸಿದ ರಿಟರ್ನ್ ಉಡುಗೊರೆಗಳಿಂದ ಭಾರತೀಯರು ನೋವು ಅನುಭವಿಸುತ್ತಿದ್ದಾರೆ. ನಿಮ್ಮ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್’ದಿಂದ H-1B ವೀಸಾ ಹೊಂದಿರುವವರ 70% ಭಾರತೀಯರ ಮೇಲೆ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.
.@narendramodi ji,
— Mallikarjun Kharge (@kharge) September 20, 2025
Indians are pained by the return gifts you have received after the birthday call.
Birthday Return Gifts from your “Abki Baar, Trump Sarkar” Govt!
👉$100,000 annual fee on H-1B visas, hits Indian tech workers the hardest, 70% of H-1B visa holders are… pic.twitter.com/CEcVrdv5tI
“ಈಗಾಗಲೇ 50% ಸುಂಕದಿಂದಾಗಿ ಕೇವಲ 10 ಪ್ರಮುಖ ಕ್ಷೇತ್ರಗಳಲ್ಲಿ ಭಾರತಕ್ಕೆ 2.17 ಲಕ್ಷ ಕೋಟಿ ರೂ. ನಷ್ಟವಾಗಿದೆ ಅಂದಾಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸರಕುಗಳ ಮೇಲೆ 100% ಸುಂಕ ವಿಧಿಸಲು ಯುರೋಪಿಯನ್ ಒಕ್ಕೂಟಕ್ಕೆ ಟ್ರಂಪ್ ಕರೆಕೊಟ್ಟಿದ್ದಾರೆ. ತಮ್ಮ ಹಸ್ತಕ್ಷೇಪದಿಂದಲೇ ಭಾರತ-ಪಾಕ್ ನಡುವೆ ಕದನ ವಿರಾಮ ಸಾಧ್ಯವಾಯಿತೆಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇದೆಲ್ಲವನ್ನೂ ಮರೆಮಾಚಿ, ಜನರು ಮೋದಿ ಮೋದಿ ಎನ್ನುವಂತೆ ಮಾಡುವ ಪ್ರಯತ್ನಗಳು ನಡೆದಿವೆ. ಹೀಗೆ ಮಾಡುವುದೇ ವಿದೇಶಾಂಗ ನೀತಿಯಲ್ಲ” ಎಂದು ಖರ್ಗೆ ಕಿಡಿಕಾರಿದ್ದಾರೆ.
“ವಿದೇಶಾಂಗ ನೀತಿಯು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವುದು; ಭಾರತವನ್ನು ಮೊದಲ ಸ್ಥಾನದಲ್ಲಿರಿಸುವುದು ಹಾಗೂ ಬುದ್ಧಿವಂತಿಕೆ ಮತ್ತು ಸಮತೋಲನದೊಂದಿಗೆ ಇತರ ರಾಷ್ಟ್ರಗಳ ಜೊತೆಗಿನ ಸ್ನೇಹವನ್ನು ಮುನ್ನಡೆಸುವುದಾಗಿದೆ” ಎಂದು ಖರ್ಗೆ ಹೇಳಿದ್ದಾರೆ.