ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಅವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿಗೆ ಪಾದಾರ್ಪಣೆ ಮಾಡಿದರು. ಸಹ ಸಂಸದರ ಗದ್ದಲದ ನಡುವೆಯೂ ತಮಿಳಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 12ರಂದು ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಕಮಲ್ ಹಾಸನ್ ಆಯ್ಕೆಯಾಗಿದ್ದಾರೆ.
ಇನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಯೆ ನೀಡಿರುವ ಹಾಸನ್, “ದೆಹಲಿಯಲ್ಲಿ ನಾನಿಂದು ಪ್ರಮಾಣ ವಚನ ಸ್ವೀಕರಿಸಿ ನನ್ನ ಹೆಸರನ್ನು ನೋಂದಾಯಿಸಲಿದ್ದೇನೆ. ಒಬ್ಬ ಭಾರತೀಯನಾಗಿ ನನಗೆ ನೀಡಿದ ಈ ಕರ್ತವ್ಯವನ್ನು ನಾನು ಗೌರವದಿಂದ ಪೂರೈಸುತ್ತೇನೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹಾವೇರಿ | ಕಮಲ್ ಹಾಸನ್ ದುರುದ್ದೇಶ ಪೂರಿತ ಹೇಳಿಕೆ : ಕರವೇ ಖಂಡನೆ
2017ರಲ್ಲಿ ಭ್ರಷ್ಟಾಚಾರ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸುಸ್ಥಿರತೆಯ ವಿರುದ್ಧ ಹೋರಾಡುವ ಗುರಿಯೊಂದಿಗೆ ಕಮಲ್ ಹಾಸನ್ ತಮ್ಮ ಪಕ್ಷವನ್ನು ಆರಂಭಿಸಿದ್ದಾರೆ. ಹಾಗೆಯೇ 2019ರ ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಂ ಶೇಕಡ 4ರಷ್ಟು ಮತಗಳನ್ನೂ ಗಳಿಸಿತ್ತು. 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಸ್ಥಾನದಲ್ಲಿ ಸ್ಪರ್ಧಿಸಿದ ಕಮಲ್ ಹಾಸನ್ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
#WATCH | Makkal Needhi Maiam chief and actor Kamal Haasan takes oath as a Member of the Rajya Sabha, in Tamil.
— ANI (@ANI) July 25, 2025
Source: Sansad TV/ YouTube pic.twitter.com/cmDio7srJL
2024ರಲ್ಲಿ ಎಂಎನ್ಎಂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಆದರೆ ಆಡಳಿತಾರೂಢ ಡಿಎಂಕೆಗೆ ಬೆಂಬಲ ನೀಡಿದೆ. ಇದೀಗ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಎಂಎನ್‌ಎಂ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.
