ರಾಜ್ಯದಲ್ಲಿ ಪಂಪ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15 ಸಾವಿರ ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹಿ ಹೈಟ್ರೊ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್(THDCL) ಜೊತೆಗೆ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ.
ಇಂಧನ ಸಚಿವ ಕೆ ಜೆ ಜಾರ್ಜ್ ಅವರ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಪರವಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಟಿಹೆಚ್ಡಿಸಿಎಲ್ ತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
‘ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳನ್ನು ಪರಿಹರಿಸಲು ಈ ಒಪ್ಪಂದ ಪೂರಕವಾಗಿದ್ದು, ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧ’ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದರು.
. @EnergyDeptGoK has signed an MoU with @THDCIL_MOP worth Rs 15,000 crores to cover various Power Projects, Hydro, Solar (Floating and Ground mounting) and Pumped Storage Projects. The MoU is also about establishing a solar PV plant at the #KadraDam reservoir Ground mounted, a… pic.twitter.com/YMIrdC6NOa
— KJ George (@thekjgeorge) November 9, 2023
‘ದಿಲ್ಲಿಯಲ್ಲಿ ಈ ಹಿಂದೆ ಕೇಂದ್ರ ಇಂಧನ ಸಚಿವ ಅರ್ಕೆ ಸಿಂಗ್ ಮತ್ತು ಟಿಹೆಚ್ಡಿಸಿಎಲ್ನ ಸಿಎಂಡಿ ಆರ್.ಕೆ. ವಿಷ್ಣೋಯ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಒಪ್ಪಂದದ ಬಗ್ಗೆ ವಿಸ್ತ್ರತವಾಗಿ ಮಾತುಕತೆ ನಡೆಸಲಾಗಿತ್ತು. ಅದರ ಫಲವಾಗಿ ನಾವು ಇಂದು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಒಪ್ಪಂದದಂತೆ ಆದ್ಯತೆಯ ಮೇರೆಗೆ ಕರ್ನಾಟಕಕ್ಕೆ ವಿದ್ಯುತ್ ಒದಗಿಸುವುದಾಗಿ ಟಿಹೆಚ್ಡಿಸಿಎಲ್ ಭರವಸೆ ನೀಡಿದೆ’ ಎಂದರು.
‘ಕದ್ರಾ ಅಣೆಕಟ್ಟು ಜಲಾಶಯದಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಫ್ಲೋಟಿಂಗ್ ಸೋಲಾರ್ ಪಿವಿ ಸ್ಥಾವರದ ಅಭಿವೃದ್ಧಿ 170 ಮೆಗಾವ್ಯಾಟ್ ಸಾಮರ್ಥ್ಯದ ಗ್ರೌಂಡ್ ಮೌಂಟೆಡ್ ಯೋಜನೆ, ಕೆಪಿಸಿಎಲ್ ಆವರಣದಲ್ಲಿ ಮೇಲ್ಛಾವಣಿ ಸೌರ ಪಿವಿ ಸ್ಥಾವರ ಮತ್ತು ವಾರಾಹಿಯಲ್ಲಿ 1500 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಘಟಕ ಸ್ಥಾಪನೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಸಚಿವರು ವಿವರಿಸಿದರು.
‘ನವೀಕರಿಸಬಹುದಾದ ಇಂಧನ ಮತ್ತು ಹೈಡ್ರೋ ಮತ್ತು ಪಂಪ್ ಹೈಡ್ರೋ ವಲಯದಲ್ಲಿ ಅಪಾರ ಅನುಭವ ಇರುವ ಟಿಹೆಚ್ಡಿಸಿಎಲ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ ಕೈಗೊಳ್ಳುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂದಿನ ಹಂತದಲ್ಲಿ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಿ, ಕಾರ್ಯ ಸಾಧ್ಯತೆಯ ಅಧ್ಯಯನ ಕೈಗೊಳ್ಳಲಾಗುವುದು. ಎಲ್ಲ ಅಗತ್ಯ ಅನುಮೋದನೆಗಳನ್ನು ಪಡೆಯುವುದಾಗಿ ಟಿಹೆಚ್ಡಿಸಿಎಲ್ ಮುಖ್ಯಸ್ಥರು ಭರವಸೆ ನೀಡಿದ್ದಾರೆ” ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.
ಕ್ರೆಡಲ್ ಜತೆ ಒಪ್ಪಂದ:
1 ಗಿ.ವ್ಯಾ. ಹೈ ಬ್ರಿಡ್ ಯೋಜನೆ ಮತ್ತು 500 ಮೆಗಾ ವ್ಯಾಟ್ ಸಾಮರ್ಥ್ಯದ ಬೀದರ್ ಸೋಲಾರ್ ಪಾರ್ಕ್ ಅಭಿವೃದ್ಧಿ ಸಂಬಂಧ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಜತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.
ಟಿಹೆಚ್ಡಿಸಿಎಲ್ನ ತಾಂತ್ರಿಕ ನಿರ್ದೇಶಕ ಭೂಪೇಂದರ್ ಗುಪ್ತಾ ಹಾಗೂ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಅವರು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಅದರಂತೆ ಟಿಹೆಚ್ಡಿಸಿಎಲ್ ಕೈಗೊಳ್ಳುವ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ನವೀಕರಿಸಬಹುದಾದದ ಇಂಧನ ನೀತಿ 2022-27ರ ಅನ್ವಯ ಕ್ರೆಡಲ್ ನೆರವು ಒದಗಿಸಲಿದೆ.
ಸಭೆಯಲ್ಲಿ ಟಿಹೆಚ್ಡಿಸಿಎಲ್ ಮುಖ್ಯ ವ್ಯವಸ್ಥಾಪಕ ಸಂದೀಪ್ ಸಿಂಘಾಲ್, ಟಿಹೆಚ್ಡಿಸಿಎಲ್ ಸಹಾಯಕ ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಉದಯಗಿರಿ, ಟಿಹೆಚ್ಡಿಸಿಎಲ್ನ ವಿಶೇಷ ಅಧಿಕಾರಿ, ಗುಜರಾತ್ ಸರ್ಕಾರದ ಮಾಜಿ ವಿಶೇಷ ಆಯುಕ್ತ ಎಕೆ ವಿಜಯ್ ಕುಮಾರ್ ಮತ್ತು ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.