ಕಳೆದ ಎರಡು ವರ್ಷಗಳಿಂದ ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿ ನಡೆಸಿ, 65,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಂದಿರುವ ಇಸ್ರೇಲ್‌ಅನ್ನು ಹಲವು ರಾಷ್ಟ್ರಗಳು ಖಂಡಿಸುತ್ತಿವೆ. ಆದರೆ, ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದ ವಿಚಾರವಾಗಿ ಭಾರತ ಸರ್ಕಾರವು ತಟಸ್ಥ ನಿಲುವು ತಳೆದಿತ್ತು. ಇದೀಗ, ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರವು ಆತಿಥ್ಯ ವಹಿಸಿದೆ. ಈ ಕಾರಣಕ್ಕಾಗಿ, ಕೇಂದ್ರ ಸರ್ಕಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ.
ಇಸ್ರೇಲ್ ಸಚಿವರಿಗೆ ಆತಿಥ್ಯ ನೀಡಿದ್ದನ್ನು ಖಂಡಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯನ್, “ಸ್ಮೋಟ್ರಿಚ್ ಅವರನ್ನು ತೀವ್ರ ಬಲಪಂಥೀಯ ಉಗ್ರಗಾಮಿ. ಇಸ್ರೇಲ್‌ನ ಕ್ರೂರ ಆಕ್ರಮಣ ಮತ್ತು ವಿಸ್ತರಣಾವಾದಿ ಕಾರ್ಯಸೂಚಿಯ ಮುಖ್ಯಸ್ಥ” ಎಂದು ಬಣ್ಣಿಸಿದ್ದಾರೆ.
“ಗಾಜಾದಲ್ಲಿ ನರಮೇಧ ನಡೆಯುತ್ತಿರುವ ಸಮಯದಲ್ಲಿ, ನೆತನ್ಯಾಹು ಆಡಳಿತದ ಪ್ರತಿನಿಧಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಪ್ಯಾಲೆಸ್ತೀನ್‌ನೊಂದಿಗಿನ ಭಾರತದ ಐತಿಹಾಸಿಕ ಒಗ್ಗಟ್ಟಿಗೆ ದ್ರೋಹವಾಗಿದೆ” ಎಂದು ಅವರು ಹೇಳಿದರು.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?
ಪ್ಯಾಲೆಸ್ತೀನ್‌ಗೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಹಾದಿಯನ್ನು ಅನುಸರಿಸದೆ ಇರುವಾಗ ಇಸ್ರೇಲ್‌ನೊಂದಿಗೆ ಮಿಲಿಟರಿ, ಭದ್ರತೆ ಮತ್ತು ಆರ್ಥಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಶೋಚನೀಯ ಎಂದು ಎಡಪಂಥೀಯ ಅನುಭವಿ ಹೇಳಿದರು.
ಸ್ಮೋಟ್ರಿಚ್ ಸೆಪ್ಟೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಅವರು ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಉಭಯ ದೇಶಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿಯೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದರು.