ಗಂಗಾವತಿ ಶಾಸಕ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ಕಾಂಗ್ರೆಸ್ ಸಂಸದ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿಸಿದೆ. ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರು. ಅವರ ಈ ಆರೋಪವು ಅಧಾರರಹಿತವಾಗಿದೆ. ಇಂತಹ ಹೇಳಿಕೆ ನೀಡಿ, ನನ್ನ ಮಾನಹಾನಿ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೇಕೆಂದು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸೆಂಥಿಲ್ ಮೊಕದ್ದಮೆ ದಾಖಲಿಸಿದ್ದಾರೆ.
ದೂರಿನಲ್ಲಿ; “ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಈ ಹಿಂದೆ, ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದರು. ಆಗ ರೆಡ್ಡಿ ಎಸಗಿದ್ದ ಅಕ್ರಮಗಳ ತನಿಖೆಯಲ್ಲಿ ಸಿಇಸಿ ಮತ್ತು ಸಿಬಿಐಗೆ ಅಗತ್ಯ ನೆರವು ನೀಡಿದ್ದೆ. ಇದರಿಂದ, ನನ್ನ ವಿರುದ್ಧ ಜನಾರ್ದನ ರೆಡ್ಡಿ ದ್ವೇಷ ಸಾಧಿಸುತ್ತಿದ್ದರು. ಅದೇ ದ್ವೇಷದಿಂದ, ನನ್ನನ್ನು ‘ಹಿಂಉ ವಿರೋಧಿ’, ‘ಧರ್ಮಸ್ಥಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್’ ಎಂದೆಲ್ಲ ಆಧಾರರಹಿತ ಆರೋಪ ಮಾಡಿದ್ದಾರೆ. ಅವರ ಹೇಳಿಕೆಗಳನ್ನು ಮಾಧ್ಯಮಗಳು ವರದಿ ಮಾಡಿವೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
ಸೆಂಥಿಲ್ ಅವರ ಖಾಸಗಿ ದೂರನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ನಿಗದಿ ಮಾಡಿದೆ. ಅಂದು, ದೂರುದಾರರ ನ್ಯಾಯಾಲಯದಲ್ಲಿ ಹಾಜರಾಗಿ, ಸ್ವಯಂ ಹೇಳಿಕೆ ದಾಖಲಿಸಲು ಸೂಚಿಸಿದೆ.