ಒಡಿಶಾದ ಬಾಲಾಸೋರ್ ಬಳಿ ನಡೆದ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ʼಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ʼ ಮತ್ತು ʼಪಾಯಿಂಟ್ ಮಷಿನ್ʼಗಳಲ್ಲಿನ ಬದಲಾವಣೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಆದರೆ, ಕೆಲವು ಬಲಪಂಥೀಯರು ಈ ರೈಲು ದುರಂತಕ್ಕೆ ಕೋಮುವಾದದ ಬಣ್ಣ ಬಳಿಯುವ ವಿಫಲ ಪ್ರಯತ್ನವನ್ನು ಕೂಡ ನಡೆಸಿದ್ದಾರೆ.
ಅಪಘಾತ ಸಂಭವಿಸಿರುವ ಸ್ಥಳದ ಫೋಟೋಗಳು ಶುಕ್ರವಾರ ರಾತ್ರಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದವು. ಈ ಪೈಕಿ ಅಪಘಾತದ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಕಟ್ಟಡವೊಂದರ ಚಿತ್ರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಹುಚರ್ಚಿತ ಕಟ್ಟಡದ ಫೋಟೋ ಹಂಚಿಕೊಂಡು ವಿವಾದ್ಮಾತಕ ಟ್ವೀಟ್ ಮಾಡಿದ್ದ ಬಿಜೆಪಿ ಬೆಂಬಲಿಗ ವೀರೇಂದ್ರ ತಿವಾರಿ, “ಅಪಘಾತ ಸಂಭವಿಸಿರುವುದು ಶುಕ್ರವಾರ, ರೈಲ್ವೆ ಹಳಿಯ ಪಕ್ಕದಲ್ಲೇ ಮಸೀದಿ ಇದೆ. ʼಜಿಹಾದ್ʼ ಮಾಡಲಿಕ್ಕಾಗಿಯೇ ಹೆದ್ದಾರಿಗಳು ಮತ್ತು ರೈಲ್ವೆ ಹಳಿಗಳ ಪಕ್ಕದಲ್ಲಿ ಮುಸಲ್ಮಾನರ ಕಾಲೋನಿಗಳು ಹುಟ್ಟಿಕೊಳ್ಳುತ್ತಿವೆ” ಎಂದಿದ್ದರು.

ಹೀಗೆ ಹಲವರು ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯರು ಘಟನೆಗೆ ಮುಸ್ಲಿಂ ಸಮುದಾಯವೇ ನೇರ ಹೊಣೆ. ಪಕ್ಕದ ಮಸೀದಿಯಲ್ಲೇ ಪ್ರಯೋಗ ನಡೆದಿದೆ ಎಂದೆಲ್ಲ ಆಧಾರ ರಹಿತವಾಗಿ ಫುಂಕಾನು ಫುಂಕ ಆರೋಪಗಳನ್ನು ಮಾಡಿದ್ದರು.

ಆದರೆ, ಸುಳ್ಳು ಸುದ್ದಿಗಳ ಹಿಂದೆ ಬಿದ್ದು ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸುವ ʼಆಲ್ಟ್ ನ್ಯೂಸ್ʼ ಸಂಸ್ಥೆ. ಬಲಪಂಥೀಯರು ಹಂಚಿಕೊಳ್ಳುತ್ತಿರುವ ಫೋಟೋದ ಹಿಂದೆ ಬಿದ್ದು ಅಸಲಿ ಅಂಶಗಳನ್ನು ಜನರ ಮುಂದಿಟ್ಟಿದೆ. ಅಪಘಾತವಾದ ಸ್ಥಳದ ಹತ್ತಿರದಲ್ಲಿರುವುದು ಮಸೀದಿಯಲ್ಲ, ಬದಲಿಗೆ ನಿರ್ಮಾಣ ಹಂತದಲ್ಲಿರುವ ಇಸ್ಕಾನ್ ಮಂದಿರ ಎಂಬುದು ʼಆಲ್ಟ್ ನ್ಯೂಸ್ʼನ ತನಿಖಾ ವರದಿಯಿಂದ ಸ್ಪಷ್ಟವಾಗಿದೆ. ಮಂದಿರದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿರುವ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಜುಬೇರ್ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.