ವಿಐಪಿ ಪ್ರಯಾಣಕ್ಕಾಗಿ ಹೆಲಿಕಾಪ್ಟರ್ ಮತ್ತು ಖಾಸಗಿ ಜೆಟ್ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರ ಈ ನಿರ್ಧಾರವು ವಿರೋಧ, ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ಸರ್ಕಾರವನ್ನು ಟೀಕಿಸಿರುವ ಬಿಜೆಪಿ, ‘ಹೊಟ್ಟೆಗೆ ಹಿಟ್ಟಿಲ್ಲದಿದ್ರು, ಜುಟ್ಟಿಗೆ ಮಲ್ಲಿಗೆ ಹೂವು’ ಎಂದು ಅಣಕಿಸಿದೆ.
ರಾಜ್ಯ ಸರ್ಕಾರವು ಈವರೆಗೆ ವಿಐಪಿ ಪ್ರಯಾಣಕ್ಕಾಗಿ ಹೆಲಿಕಾಪ್ಟರ್ ಮತ್ತು ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆಯುತ್ತಿತ್ತು. ಇದೀಗ, ಸರ್ಕಾರ ಹೆಲಿಕಾಪ್ಟರ್ ಮತ್ತು ಖಾಸಗಿ ಜೆಟ್‌ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ. ಖರೀದಿ ನಿರ್ಧಾರವನ್ನು ಪ್ರಕಟಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, “ಸರ್ಕಾರ ಶೀಘ್ರದಲ್ಲೇ ಹೆಲಿಕಾಪ್ಟರ್ ಖರೀದಿಗಾಗಿ ಟೆಂಡರ್ ಕರೆಯಲಿದೆ. ಹೆಲಿಕಾಪ್ಟರ್ ಮತ್ತು ಜೆಟ್‌ಅನ್ನು ಖರೀದಿಸುವ ಜವಾಬ್ದಾರಿಯನ್ನು ನನಗೆ ಮತ್ತು ಕೆಲವು ಸಚಿವರಿಗೆ ಮುಖ್ಯಮಂತ್ರಿ ವಹಿಸಿದ್ದಾರೆ. ಇತರ ರಾಜ್ಯಗಳು ಹೆಲಿಕಾಪ್ಟರ್ ಮತ್ತು ಜೆಟ್‌ಗಳ ವಿಚಾರವಾಗಿ ಏನು ಮಾಡುತ್ತಿವೆ ಎಂಬುದನ್ನು ಅಧ್ಯಕ್ಷಯ ಮಾಡಿ, ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಜೊತೆಯೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ, “ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಹೊಸ ಯೋಜನೆಗಳನ್ನು ರೂಪಿಸುತ್ತಿಲ್ಲ. ಇಂತಹ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ಐಷಾರಾಮಿ ವಸ್ತುಗಳ ಮೇಲೆ ದುಂದುವೆಚ್ಚ ಮಾಡುತ್ತಿದೆ. ಇದು ವಿಪರ್ಯಾಸ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ
“ಸರ್ಕಾರಿ ನೌಕರರ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲಾಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಕಾಲಕ್ಕೆ ನೆರವು ದೊರೆಯುತ್ತಿಲ್ಲ.ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗಳನ್ನು ಸಹ ನೀಡಲಾಗುತ್ತಿಲ್ಲ. ಇಂತಹ ಶೋಚನೀಯ ಆರ್ಥಿಕ ಸ್ಥಿತಿಯಲ್ಲಿ, ‘5 ಆಸನಗಳ ಹೆಲಿಕಾಪ್ಟರ್ ಮತ್ತು 13 ಆಸನಗಳ ಜೆಟ್’ ಖರೀದಿಸಲು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರ ದುರದೃಷ್ಟಕರ” ಎಂದು ಟೀಕಿಸಿದೆ.
“ಸರ್ಕಾರದ ನಡೆಯು ‘ಹೊಟ್ಟಿಗೆ ಹಿಟ್ಟಿಲ್ಲದಿದ್ರು, ಜುಟ್ಟಿಗೆ ಮಲ್ಲಿಗೆ ಹೋವು’ ಎಂಬ ಗಾದೆಯನ್ನು ನೆನಪಿಸುತ್ತದೆ. ಕಾಂಗ್ರೆಸ್ ಸರ್ಕಾರವು ತನ್ನ ಪ್ರತಿಷ್ಠೆಯನ್ನು ಪ್ರದರ್ಶಿಸಲು ದುಂದುವೆಚ್ಚ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನರ ತೆರಿಗೆ ಹಣದಿಂದ ದುಂದುವೆಚ್ಚಕ್ಕೆ ಹಣಕಾಸು ಒದಗಿಸಲು ತೆರಿಗೆಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತಲೇ ಇದೆ. ಸಾರ್ವಜನಿಕ ಸೇವೆಗಾಗಿ ಜನರು ಅಧಿಕಾರ ನೀಡುತ್ತಾರೆ ಎಂಬುದು ಕಾಂಗ್ರೆಸ್ ಅರ್ಥವೇ ಆಗಿಲ್ಲ” ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.