ಆಯೋಗವು ಪಕ್ಷಪಾತಿಯಾಗಿ ನಡೆದುಕೊಂಡರೆ, ಕಚೇರಿಯ ಎದುರು ಧರಣಿ ಕೂರಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ದ್ವೇಷ ಭಾಷಣ, ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರು ಲೈಂಗಿಕ ವಿಕೃತಿ ಮೆರೆದಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೊಗಳುಳ್ಳ ಪೆನ್‌ಡ್ರೈವ್ ಮತ್ತು ಕರ್ನಾಟಕ ಬಿಜೆಪಿ ನೀಡಿರುವ ಕೋಮುದ್ವೇಷದ ಜಾಹೀರಾತಿನ ವಿರುದ್ಧ ಚುನಾವಣಾ ಆಯೋಗಕ್ಕೆ ಹೋರಾಟಗಾರರು ದೂರು ನೀಡಿದ್ದಾರೆ.
ಬುಧವಾರ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ನಾಗರಿಕ ಸಮುದಾಯಗಳ ಪರವಾಗಿ ಭೇಟಿ ಮಾಡಿರುವ ಹೋರಾಟಗಾರರು ೀ ಮೂರು ಪ್ರಕರಣಗಳ ಸಂಬಂಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಆಯೋಗವು ಪಕ್ಷಪಾತಿಯಾಗಿ ನಡೆದುಕೊಂಡರೆ, ಕಚೇರಿಯ ಎದುರು ಧರಣಿ ಕೂರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ದೂರು- 1
ಹಾಸನದಲ್ಲಿ ರಾಜಕಾರಣ ಕೀಳು ದರ್ಜೆಗೆ ಇಳಿದಿದೆ. ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿರುವ ಸಾವಿರಾರು ವಿಡಿಯೊ ತುಣುಕುಗಳನ್ನು ಹೊಂದಿರುವ ಪೆನ್‌ಡ್ರೈವ್‌ಗಳು ಬೀದಿಬೀದಿಯಲ್ಲಿ ದೊರಕಿವೆ. ಅದರಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಅವರ ಪಕ್ಷದ ಜೊತೆ ಸಂಬಂಧ ಹೊಂದಿರುವ ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರ ಸಹ ಮಾಡುತ್ತಿರುವ ತುಣುಕುಗಳಿರುವುದಾಗಿ ಹೇಳಲಾಗುತ್ತಿದೆ. ಇಂತಹ ವಿಡಿಯೊಗಳು ಇವೆ ಎಂಬ ಕುರಿತು ಬಿಜೆಪಿಯ ಮುಖಂಡ ಜಿ.ದೇವರಾಜೇಗೌಡ ಅವರು ಕಳೆದ ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು. “ಪ್ರಜ್ವಲ್ ರೇವಣ್ಣ ಮುಂತಾದವರಿಗೆ ಟಿಕೆಟ್ ನೀಡಿದ್ದಲ್ಲಿ (ಕಾಂಗ್ರೆಸ್‌ನವರು) ಈ ಪೆನ್‌ಡ್ರೈವ್‌ಗಳನ್ನು ಬಹಿರಂಗಪಡಿಸುತ್ತಾರೆ. ನೀವು ಬಯಸಿದ್ದಲ್ಲಿ ಇವುಗಳನ್ನು ತೋರಿಸಲು ನಾನು ಸಿದ್ಧನಿದ್ದೇನೆ” ಎಂದು ಉಲ್ಲೇಖಿಸಿದ್ದರು.
ಈಗ ಈ ವಿಡಿಯೊ ಜನಸಾಮಾನ್ಯರ ಕೈಗೂ ಸಿಕ್ಕಿದ್ದು ಇಡೀ ಸಮಾಜ ತಲೆತಗ್ಗಿಸುವ ಸ್ಥಿತಿ ಏರ್ಪಟ್ಟಿದೆ. ಅನೇಕ ಮಹಿಳೆಯರ ಬದುಕನ್ನು ಅಪಾಯಕ್ಕೆ ತಳ್ಳಿದೆ. ಅವರ ಬದುಕಿನ ಘನತೆಯನ್ನು ನಾಶಮಾಡಿದೆ. ರಾಜಕಾರಣವನ್ನು ಕೀಳು ಮಟ್ಟಕ್ಕೆ ಇಳಿಸಿದೆ. ಈ ಇಡೀ ಪ್ರಕರಣ ಸಮಾಜ ವಿರೋಧಿಯಾಗಿದೆ. ಇದರಲ್ಲಿ ಭಾಗಿಯಾದವರೆಲ್ಲರ ಮೇಲೂ ಉಗ್ರ ಕ್ರಮ ಕೈಗೊಳ್ಳುವ ಅಗತ್ಯವಿದೆ. ಚುನಾವಣಾ ಆಯೋಗ ಒಪ್ಪಲಾಗದ ಮೌನ ತಾಳದೆ ಕೂಡಲೇ ತನಿಖೆಗೆ ಆದೇಶಿಸಬೇಕು. ಪೊಲೀಸರು ತನಿಖೆ ನಡೆಸಲು ಕ್ರಮ ಜರುಗಿಸಬೇಕು.
ದೂರು- 2
ಏಪ್ರಿಲ್ 21ರಂದು ಬಿಜೆಪಿ ಪಕ್ಷವು ಕರ್ನಾಟಕದ ಎಲ್ಲ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ “ಕಾಂಗ್ರೆಸ್ ಡೇಂಜರ್” ಎಂಬ ಜಾಹೀರಾತನ್ನು ನೀಡಿದೆ. ಅದರಲ್ಲಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಕೋರರಿಗೆ ಪ್ರಚೋದನೆ ಸಿಗುತ್ತದೆ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳುತ್ತದೆ, ಹೊರಗೆ ಹೋದ ಹಿಂದೂ ಮಹಿಳೆಯರು ಸುರಕ್ಷಿತವಾಗಿ ಮರಳಿ ಬರುವುದಿಲ್ಲ, ಮೇಯಲು ಹೋದ ಗೋವುಗಳು ಕಸಾಯಿಖಾನೆಗೆ ಹೋಗುತ್ತದೆ, ಎಲ್ಲಾ ಕಡೆ ಬಾಂಬ್ ಸ್ಪೋಟಗಳು ನಡೆಯುತ್ತವೆ. ಇತ್ಯಾದಿ ಇತ್ಯಾದಿ ಭಯ ಸೃಷ್ಟಿಸುವ ಕೋಮು ಪ್ರಚೋದನಕಾರಿ ವಾಕ್ಯಗಳನ್ನು ಜಾಹೀರಾತಿನಲ್ಲಿ ಬಳಸಲಾಗಿದೆ. ಸುಳ್ಳು ಹೇಳುವ ಮೂಲಕ ಒಂದು ಸಮುದಾಯದ ಬಗ್ಗೆ ದ್ವೇಷ ಬೆಳೆಸಲಾಗುತ್ತಿದೆ. ಮತ್ತೊಂದು ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಇದು ದೇಶದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿ ತೂರುವ ಕೆಲಸವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದೆ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಜಾಹೀರಾತಿನ ಪ್ರತಿಯನ್ನು ಲಗತ್ತಿಸಲಾಗುತ್ತಿದೆ. ಈ ಕೂಡಲೇ ಬಿಜೆಪಿಗೆ ಎಚ್ಚರಿಕೆ ಕಳುಹಿಸಬೇಕು ಮತ್ತು ಇಂತಹ ಜಾಹೀರಾತುಗಳ ಮೇಲೆ ನಿರ್ಬಂಧ ಹೇರಬೇಕು.
ದೂರು- 3
ಏಪ್ರಿಲ್ 21ರಂದು ರಾಜಸ್ಥಾನದಲ್ಲಿ ಭಾಷಣಾ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರನ್ನು ನುಸುಳುಕೋರರು ಎಂದು ಕರೆದಿದ್ದಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಹೀಯಾಳಿಸಿದ್ದಾರೆ. ಕಾಂಗ್ರೆಸ್‌ನವರು ಹಿಂದೂ ಮಹಿಳೆಯರ ಮಂಗಳ ಸೂತ್ರ ಕಸಿದು ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಮನಮೋಹನ ಸಿಂಗ್ ಅವರ ಭಾಷಣವನ್ನು ತಿರುಚಿ ಪ್ರಚೋದನಾಕಾರಿ ಸುಳ್ಳು ಹೇಳಿದ್ದಾರೆ. ಸಾರಾಂಶದಲ್ಲಿ ಇದು ಹಿಂದೂ ಸಮುದಾಯವನ್ನು ಭಾವನಾತ್ಮಕವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದಿಸುವ ದ್ವೇಷ ರಾಜಕಾರಣವಾಗಿದೆ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಚುನಾವಣಾ ನಿಯಮಗಳ ಉಲ್ಲಂಘನೆಯಾಗಿದೆ. ಜಾತ್ಯತೀತ ಸಾಂವಿಧಾನಿಕ ನೀತಿಯಾಗಿ ಒಪ್ಪಿಕೊಂಡಿರುವ ಇಡೀ ಸಮಾಜ ತಲೆತಗ್ಗಿಸಬೇಕಾದ ವಿಚಾರವಾಗಿದೆ. ಈ ಕೂಡಲೇ ಮೋದಿಯವರ ಮೇಲೆ ಕ್ರಮ ಜರುಗಿಸಬೇಕು. ಮುಂದಿನ ಆರು ವರ್ಷಗಳ ಕಾಲ ಅವರು ಭಾಷಣ ಮಾಡದಂತೆ ನಿರ್ಬಂಧ ಹೇರಬೇಕು.
ಈ ವೇಳೆ ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಜನ ಸಂಘಟನೆಗಳ ಸಂಘಟಕ ನೂರ್ ಶ್ರೀಧರ್, “48 ಗಂಟೆಗಳ ಒಳಗೆ ಕ್ರಮ ತೆಗೆದುಕೊಳ್ಳದಿದ್ದರೆ, ಏಪ್ರಿಲ್ 26ರಂದು ನಡೆಯುವ ಮತದಾನ ಮುಗಿಸಿಕೊಂಡು ಬಂದು ಚುನಾವಣಾ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಹೋರಾಟಗಾರರಾದ ಅಖಿಲಾ ವಿದ್ಯಾಸಂದ್ರ, ತಾರಾ, ಲೋಕೇಶ್ ನಾಯಕ್, ಎ.ಶ್ರೀಕಾಂತ, ತನ್ವೀರ್ ಅಹಮದ್, ಎ.ಆರ್.ವಾಸವಿ, ಸತೀಶ್ ದೇಶಪಾಂಡೆ, ವೆಂಕಟೇಶ್, ಗೌರಿ ಮೊದಲಾದವರು ದೂರಿನಲ್ಲಿ ಸಹಿ ಹಾಕಿದ್ದಾರೆ.
