ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ನೇರ ಕಾರಣ. ದುರಂತದ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಎಸ್‌ಐಟಿಯಿಂದ ತನಿಖೆ ನಡೆಯಲಿ, ಜಿಲ್ಲಾಧಿಕಾರಿಯಿಂದ ತನಿಖೆ ಬೇಡ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲಾಧಿಕಾರಿ ತನಿಖೆಗೆ ನಾವು ಒಪ್ಪುವುದಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಬಳಿಗೆ ಪಿಐಎಲ್ ಹೋಗುತ್ತಿದೆ. ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲೇ ಇದರ ತನಿಖೆ ನಡೆಯಬೇಕಿದೆ. ಇದಕ್ಕಾಗಿ ಎಸ್‌ಐಟಿ ರಚಿಸಬೇಕು. ಇದರ ವರದಿ ನೇರವಾಗಿ ಹೈಕೋರ್ಟ್‌ಗೆ ಸಲ್ಲಿಕೆಯಾಗಬೇಕು. ಈ ಎಲ್ಲ ಸಾವುಗಳಿಗೆ ನ್ಯಾಯ ನೀಡಬೇಕು. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು” ಎಂದು ಒತ್ತಾಯಿಸಿದ್ದಾರೆ.
“ಇದು ಕ್ರಿಕೆಟ್ ಅಸೋಸಿಯೇಶನ್ ಕಾರ್ಯಕ್ರಮ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಮರೆತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಹಾಕಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೋಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಸಿಎಂ ಸಿದ್ದರಾಮಯ್ಯನವರ ಕೈ ಕೆಳಗೆ ಕೆಲಸ ಮಾಡುವ, ಅವರಿಗೆ ವರದಿ ಮಾಡಿಕೊಳ್ಳುವ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಏನು ಗುಡ್ಡೆ ಹಾಕುತ್ತಾರೆ? ಕಾರ್ಯಕ್ರಮದ ಬಗ್ಗೆ ಯೋಚನೆ ಮಾಡಿ, ಅದರ ರೂಪರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಸರ್ಕಾರದ ಲೋಪದೋಷ, ಎಡವಟ್ಟುಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ ವರದಿ ನೀಡುತ್ತಾರೆ ಅಂದರೆ ಅದನ್ನು ನಂಬಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ವಂಚನೆ ಮಾಡಿ ಹೆಣಗಳನ್ನು ಉರುಳಿಸಿದ್ದಾಯ್ತು. ಈಗ ಇವರಿಗೆ ಇವರೇ ಆತ್ಮವಂಚನೆ ಮಾಡಿಕೊಂಡು ಇನ್ನೊಂದು ಪಾಪ ಯಾಕೆ ಕಟ್ಟಿಕೊಳ್ಳುತ್ತಿದ್ದಾರೆ? ನ್ಯಾಯಾಂಗ ತನಿಖೆಯಿಂದ ಮಾತ್ರ ಅಮಾಯಕ ಜೀವಗಳಿಗೆ, ಅವರ ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ಕಾಂಗ್ರೆಸ್‌ನವರು ಸಣ್ಣತನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಬಾರದು” ಎಂದಿದ್ದಾರೆ.
“ಕಪ್ಪು ನಮ್ದೇ ಎಂದು ಎಲ್ಲರೂ ಹೇಳುತ್ತಿರುವಾಗ, ತಪ್ಪು ಯಾರದ್ದು ಎಂದು ಸರ್ಕಾರವನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡವಾಗಿದೆ. ಮತ್ತೊಬ್ಬರ ಯಶಸ್ಸಿನ ದುರ್ಲಾಭವನ್ನು ಪಡೆಯಲು ಕಾಂಗ್ರೆಸ್ ನಾಯಕರು ಮಾಡಿದ ತಪ್ಪಿನಿಂದಾಗಿ ಈ ಅನಾಹುತ ನಡೆದಿದೆ. ಇವರ ಕೆಟ್ಟ ತೀರ್ಮಾನದಿಂದ ಇಂಜಿನಿಯರ್, ಡಾಕ್ಟರ್, ಮಕ್ಕಳು ಸತ್ತಿದ್ದು, ಇದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ದೂರಿದ್ದಾರೆ.
“ಕಪ್ ಎತ್ತಿ ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟವರು ನಂತರ ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರಲಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟವರು ಬಳಿಕ ಸತ್ತವರ ಮನೆಗೆ ಹೋಗಿ ಕಣ್ಣೀರು ಹಾಕಲಿಲ್ಲ. ಕ್ರಿಕೆಟ್ ಆಟಗಾರರಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದವರು ಸತ್ತವರ ಸಮಾಧಿಗೆ ಮಣ್ಣು ಹಾಕಲೂ ಬರಲಿಲ್ಲ. ಈ ಹೃದಯಹೀನ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲ” ಎಂದಿದ್ದಾರೆ.