ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?

Date:

Advertisements
ಜನ ಸುರಾಜ್‌ ಪಕ್ಷದ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ಗೇಮ್‌ ಚೇಂಜರ್ ಆಗುತ್ತಾರೆಯೇ? ಮೂರು ವರ್ಷಗಳ ಪ್ರಯತ್ನ ಫಲ ನೀಡಲಿದೆಯೇ? 2013ರಲ್ಲಿ ದೆಹಲಿ ಕಂಡಂತಹ ಅಚ್ಚರಿಯ ಫಲಿತಾಂಶ ಬಿಹಾರದಲ್ಲೂ ಬರುತ್ತದೆಯೇ?

ಈ ವರ್ಷದ ನವೆಂಬರ್‌ಗೂ ಮುನ್ನ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈಗಾಗಲೇ ವಿವಿಧ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ. ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್ ಕುಮಾರ್ ಅವರು ಉಳಿಸಿಕೊಳ್ಳಲು ಸಾಧ್ಯವಾಗುವುದೇ? ಅಥವಾ ಸಿಎಂ ಪಟ್ಟ ಆರ್‌ಜೆಡಿ ತೇಜಸ್ವಿ ಯಾದವ್‌ ಪಾಲಾಗುತ್ತಾ? ಅಥವಾ ಇಬ್ಬರನ್ನೂ ಹಿಂದಕ್ಕೆ ತಳ್ಳಿ ಬಿಜೆಪಿ ಮುನ್ನೆಲೆಗೆ ಬರುತ್ತದೆಯೇ? ಎಂಬ ಪ್ರಶ್ನೆಗಳು, ಚರ್ಚೆಗಳ ನಡುವೆಯೇ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ತಮ್ಮ ಜನ ಸುರಾಜ್‌ ಪಕ್ಷ ಬಿಹಾರದ 243 ವಿಧಾನಸಭೆ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಘೋಷಿಸಿಕೊಂಡಿದ್ದಾರೆ.

ಆದರೆ, ಪ್ರಶಾಂತ್ ಕಿಶೋರ್ ಕುರಿತಂತೆ ಮಾಧ್ಯಮಗಳಲ್ಲಿ, ಬಿಹಾರದ ಜನರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಬೇರೆಯದೇ ಭಿನ್ನ ಅಭಿಪ್ರಾಯಗಳಿವೆ. ಇತರೆ ಪಕ್ಷಗಳ ಮತಗಳನ್ನು ಸೆಳೆಯುವ, ಸೋಲಿಸುವ ಶಕ್ತಿ ಇದೆ, ಆದರೆ ಗೆಲ್ಲುವಷ್ಟು ಬೆಳೆದಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಬಾರಿ ಬಿಹಾರದಲ್ಲಿ ಹೊಸ ಪಕ್ಷಕ್ಕೆ, ಹೊಸ ನಾಯಕನಿಗೆ ಮಣೆಹಾಕಿದರೂ ಆಶ್ಚರ್ಯವಿಲ್ಲ ಎಂಬ ವಾದವೂ ಇದೆ. ಇನ್ನೊಂದೆಡೆ ಪ್ರಶಾಂತ್‌ ಬಿಹಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ(ಎಎಪಿ) ಪುಟಿದೆದ್ದ ಬಗೆಗೂ ಹೋಲಿಕೆ ಮಾಡಲಾಗುತ್ತಿದೆ.

ಇದನ್ನು ಓದಿದ್ದೀರಾ? ರಾಜಕೀಯ ಪ್ರಚಾರಕ್ಕಾಗಿ 225 ಕೋಟಿ ರೂ. ದುರುಪಯೋಗಪಡಿಸಿದ ಬಿಹಾರ ಸರ್ಕಾರ: ತೇಜಸ್ವಿ ಆರೋಪ

74 ವರ್ಷದ ನಿತೀಶ್ ಕುಮಾರ್ ಅವರ ರಾಜಕೀಯ ಆಟ ಈಗಾಗಲೇ ಮುಗಿದಿದೆ ಎಂಬ ಅಭಿಪ್ರಾಯ ಹಲವರದ್ದು. ಹಾಗಾಗಿ ಬಿಹಾರದ ಜನರು ಹೊಸಬರಿಗೆ ಅವಕಾಶ ನೀಡಬಹುದು ಎಂಬ ಮಾತುಗಳೂ ಇವೆ. ಬದಲಾವಣೆ ಅಲೆ ಇದೆ. ಆದರೆ ಈ ಬದಲಾವಣೆ ಕುರ್ಚಿಯಲ್ಲಿ ಕೂರುವವರು ಯಾರು? ನಿತೀಶ್‌ಗೆ ಪರ್ಯಾಯವೇ ಪ್ರಶಾಂತ್ ಕಿಶೋರ್ ಎಂಬ ಮಾತುಗಳೂ ಇವೆ. ಅವೆಲ್ಲವನ್ನು ಮೀರಿ ಪ್ರಶಾಂತ್ ಕಿಶೋರ್ ಹಿನ್ನೆಲೆ, ಪ್ರಸಕ್ತ ರಾಜಕೀಯ, ಭವಿಷ್ಯದೆಡೆ ಕಣ್ಣು ಹಾಯಿಸುವುದು ಸೂಕ್ತ.

ಪ್ರಶಾಂತ್ ಕುಮಾರ್ ಯಾರು?

ಹಲವು ವರ್ಷಗಳಿಂದ ಚುನಾವಣಾ ಭವಿಷ್ಯವನ್ನು ಹೇಳುತ್ತಾ ಬಂದವರು ಪ್ರಶಾಂತ್ ಕಿಶೋರ್. ಆದರೆ ಹೆಚ್ಚು ಮುನ್ನೆಲೆಗೆ ಬಂದಿದ್ದು 2014ರಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದಾಗ. ಆದರೆ ಅವರ ಎಷ್ಟೋ ಭವಿಷ್ಯಗಳು ಸುಳ್ಳಾಗಿದೆ, ತದ್ವಿರುದ್ಧವಾಗಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪರ ಪ್ರಚಾರ ನಡೆಸಿ ಯಶಸ್ಸು ಕಂಡಿದ್ದರು. ಅದಾದ ಬಳಿಕ ಚುನಾವಣಾ ತಂತ್ರಜ್ಞ ವೃತ್ತಿಗೆ ತಾತ್ಕಾಲಿಕ ವಿದಾಯ ಹೇಳಿದ್ದರು. ಬಳಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷದ ಬೆಂಬಲವಿಲ್ಲದೆಯೇ ಸರ್ಕಾರ ರಚಿಸಬಲ್ಲದು ಎಂದು ಭವಿಷ್ಯ ನುಡಿದಿದ್ದರು. ಆದರೆ ಚುನಾವಣಾ ಫಲಿತಾಂಶ ಪ್ರಶಾಂತ್ ಕಿಶೋರ್ ಮಾತ್ರವಲ್ಲ ಪ್ರಧಾನಿ ಮೋದಿ ಮುಖಭಂಗಕ್ಕೂ ಕಾರಣವಾಯಿತು.

ಇವೆಲ್ಲವುದರ ಬೆನ್ನಲ್ಲೇ ಇದೀಗ ಪ್ರಶಾಂತ್ ಬಿಹಾರ ಚುನಾವಣೆಗೆ ಎಂಟ್ರಿ ನೀಡಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಜನ ಸುರಾಜ್ ಪಕ್ಷವನ್ನು ಕಟ್ಟಿಕೊಂಡಿದ್ದು, ಈ ವರ್ಷ(2025) ನಡೆಯುವ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಜೊತೆಗೆ 2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ)ನ ‘ವಿಶೇಷ ಸಲಹಗಾರ’ರಾಗಿದ್ದಾರೆ. ಇದೀಗ ಅವರ ಮುಂದಿನ ಭವಿಷ್ಯ ಚುನಾವಣೆ ಮೇಲೆ ನಿಂತಿದೆ. ಯಾಕೆಂದರೆ ಈಗಾಗಲೇ, “ಎನ್‌ಡಿಎ ಚುನಾವಣೆಯಲ್ಲಿ ಗೆಲ್ಲಲ್ಲ. ಜೆಡಿಯು 25ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆದ್ದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಜನ್ ಸುರಾಜ್ ಪಕ್ಷ ಅ.2ರಂದು ಆರಂಭ: ಪ್ರಶಾಂತ್ ಕಿಶೋರ್‌

ಇತರೆ ಪಕ್ಷಗಳ ಮತ ಸೆಳೆಯುತ್ತಾರಾ ಪ್ರಶಾಂತ್?

ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದೇ ಇತರೆ ಪಕ್ಷಗಳ ಮತವನ್ನು ವಿಭಜಿಸಲು ಎಂಬ ಆರೋಪಗಳೂ ಇವೆ. ಒಂದೆಡೆ ಪ್ರಶಾಂತ್ ಅವರ ಪಕ್ಷ ಬಿಜೆಪಿಯ ‘ಬಿ’ ಟೀಂ ಎಂದು ಆರ್‌ಜೆಡಿ ಹೇಳಿದರೆ, ಇನ್ನೊಂದೆಡೆ ಜನ ಸುರಾಜ್ ಪಕ್ಷ ಕಾಂಗ್ರೆಸ್‌ನ ‘ಬಿ’ ಟೀಂ ಎಂದು ಬಿಜೆಪಿ ಆರೋಪಿಸುತ್ತಿದೆ. ಹಾಗೆಯೇ ಇತರೆ ಪಕ್ಷಗಳಿಂದ ಟಿಕೆಟ್ ಕಳೆದುಕೊಂಡವರಿಗೆ ಪ್ರಶಾಂತ್ ಜನ ಸುರಾಜ್ ಪಕ್ಷದ ಟಿಕೆಟ್ ನೀಡುತ್ತಾರೆ ಮತ್ತು ಮತ ವಿಭಜನೆ ಮಾಡಲು ಮುಂದಾಗಿದ್ದಾರೆ ಎಂಬ ಆರೋಪಗಳೂ ಇವೆ.

ಇವೆಲ್ಲವುದಕ್ಕೂ ಪ್ರಶಾಂತ್ ಪ್ರತಿಕ್ರಿಯಿಸಿದ್ದಾರೆ. ಜನ ಸುರಾಜ್ ಮೊದಲು ತಮ್ಮ ಅಭ್ಯರ್ಥಿಗಳನ್ನು ಘೋಷಿಸುತ್ತದೆ. ಶೇಕಡ 90ರಷ್ಟು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವವರು ಆಗಿರುತ್ತಾರೆ. ಆದ್ದರಿಂದ ಇತರ ಪಕ್ಷಗಳ ಅತೃಪ್ತ ನಾಯಕರಿಗೆ ಟಿಕೆಟ್ ನೀಡುವ ಸಾಧ್ಯತೆ ಬಹುತೇಕ ಶೂನ್ಯ ಎಂದೂ ಹೇಳಿದ್ದಾರೆ. ಆದರೆ ಮತ ವಿಭಜನೆ ಅಥವಾ ಕಡಿತಗೊಳಿಸುವ ಆರೋಪವನ್ನು ಮಾತ್ರ ಒಪ್ಪಿಕೊಂಡಿದ್ದಾರೆ. “ಹೌದು, ನನ್ನ ಪಕ್ಷವು ಮತ ಕಡಿತಗೊಳಿಸುತ್ತದೆ ಎಂದು ಹೇಳುತ್ತಿದ್ದೇನೆ. ಆದರೆ ಅದು ಯಾರ ಮೇಲೆ ಪ್ರಭಾವ ಬೀರುತ್ತದೆ ಎಂದು ಗೊತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾವು ಇದು ಆಡಳಿತ ಮತ್ತು ವಿಪಕ್ಷಗಳು- ಎರಡರ ಮತಗಳನ್ನೂ ಕಡಿತಗೊಳಿಸುತ್ತೇವೆ. ಯಾರಿಗೆ ಗೆಲುವು, ಯಾರಿಗೆ ಸೋಲು ಎಂದು ಹೇಳಲಾಗದು. ಆದರೆ ನಷ್ಟ ಎನ್‌ಡಿಎ ಮತ್ತು ಆರ್‌ಜೆಡಿಗೆ ಮತ್ತು ಲಾಭ ಬಿಹಾರದ ಜನರಿಗೆ ಎಂದು ಹೇಳಬಹುದು” ಎಂದಿದ್ದಾರೆ.

ಪ್ರಶಾಂತ್ ಕಿಶೋರ್ 2

ಗೇಮ್ ಚೇಂಜರ್ ಆಗ್ತಾರಾ?

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಕಟ್ಟಿಕೊಂಡು 2013ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರಕ್ಕೆ ಬಂದಿದ್ದರು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರನ್ನೂ ಸೋಲಿಸಿ ಎಲ್ಲಾ ರಾಜಕೀಯ ತಜ್ಞರಿಗೆ ಅಚ್ಚರಿ ಉಂಟು ಮಾಡಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ದೆಹಲಿಯಲ್ಲಿ ಹೊಸ ಪಕ್ಷ ಎಎಪಿಗೆ ಜನರು ಬೆಂಬಲ ನೀಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಈ ಬಾರಿ ಬಿಹಾರದಲ್ಲಿಯೂ ಇದೇ ರೀತಿಯ ಬದಲಾವಣೆಯಾಗಬಹುದಾ ಎಂಬ ಚರ್ಚೆಗಳಿವೆ. ಪ್ರಶಾಂತ್ ಕಿಶೋರ್ ಕೂಡಾ ಈ ರೀತಿಯ ಭರವಸೆಯಿಂದಲೇ ಪ್ರಚಾರದಲ್ಲಿ ತೊಡಗಿರುವಂತೆ ಕಾಣುತ್ತದೆ. ಜಾತಿ ಬದಿಗೊತ್ತಿ ಉದ್ಯೋಗ, ಶಿಕ್ಷಣ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಹಾರದ ಸ್ಥಿತಿ ದೆಹಲಿಯಂತಿಲ್ಲ, ಹಾಗಾಗಿ ಯಶಸ್ಸು ಸಿಗುತ್ತದಾ ಎಂಬುದೂ ಗೊತ್ತಿಲ್ಲ. ಬಿಹಾರ ಚುನಾವಣೆಯಲ್ಲಿ ಜಾತಿ ಯಾವಾಗಲೂ ಅತ್ಯಂತ ನಿರ್ಣಾಯಕ ಸ್ಥಾನ ಪಡೆದುಕೊಂಡಿದೆ. ಆದ್ದರಿಂದ ಕೇಜ್ರಿವಾಲ್‌ ತರಹ ದಿಢೀರ್ ಅಧಿಕಾರವನ್ನು ಪ್ರಶಾಂತ್ ಪಡೆಯುವುದು ಕಷ್ಟ ಎನ್ನಲಾಗುತ್ತಿದೆ.

ಅಷ್ಟಕ್ಕೂ ಪ್ರಶಾಂತ್ ಇತ್ತೀಚೆಗೆ ರಾಜಕೀಯಕ್ಕೆ ಇಳಿದವರಲ್ಲ. ಸುಮಾರು ಮೂರು ವರ್ಷಗಳಿಗೂ ಅಧಿಕ ಕಾಲದಿಂದ ಅಂದರೆ 2022ರ ಅಕ್ಟೋಬರ್‌ 2ರಂದು ಚಂಪಾರಣ್‌ನಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಬಿಹಾರದ ಸುಮಾರು 20 ಜಿಲ್ಲೆಗಳಲ್ಲಿ 5,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಪ್ರಶಾಂತ್ ಕ್ರಮಿಸಿದ್ದಾರೆ, ಪ್ರಚಾರವನ್ನು ನಡೆಸಿದ್ದಾರೆ. ಉದ್ಯೋಗ ಪಡೆಯುವುದಕ್ಕಾಗಿ ಮತ ನೀಡಿ ಎಂದು ಪದೇ ಪದೇ ಮನವಿ ಮಾಡಿದ್ದಾರೆ. ಆದರೆ ಈ ಮೂರು ವರ್ಷಗಳ ಪ್ರಯತ್ನ ಫಲ ನೀಡಲಿದೆಯೇ? ಪ್ರಶಾಂತ್ ಕಿಶೋರ್ ಗೇಮ್‌ ಚೇಂಜರ್ ಆಗುತ್ತಾರೆಯೇ? ಇನ್ನೂ ಸಮಯ ಇರುವ ಕಾರಣ ಯಾವೆಲ್ಲ ರಾಜಕೀಯ ಬದಲಾವಣೆ ನಡೆಯುತ್ತದೆ ಹೇಳಲಾಗದು. ದೆಹಲಿಯಂತಹ(2013) ಅಚ್ಚರಿಯ ಫಲಿತಾಂಶ ಬರುತ್ತದೆಯೆ ಎಂದು ಚುನಾವಣೆ ನಡೆದು ಫಲಿತಾಂಶ ಬರುವವರೆಗೂ ಕಾದುನೋಡಬೇಕಷ್ಟೆ.

ಮಯೂರಿ ಬೋಳಾರ್
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X