ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?

Date:

Advertisements
ಅಷ್ಟಕ್ಕೂ ಸಂಸತ್ತಿಗೆ ಹಾಜರಾಗಲು ಮೋದಿ ಹಿಂದೇಟು ಹಾಕುವುದೇಕೆ? ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ವಿಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಯೋಜನೆ ರೂಪಿಸಿಕೊಂಡಿದ್ದಾರೆಯೇ ಅಥವಾ ತಾನು ಸಂಸತ್ತಿಗಿಂತಲೂ ಮೇಲು ಎಂಬ ಅಹಂ ಕಾರಣವೇ?

ದೇಶದ ಎಲ್ಲ ಆಗು ಹೋಗುಗಳ ಬಗ್ಗೆ ಮಹತ್ತರವಾದ ಚರ್ಚೆ ನಡೆಸುವುದು, ಹಲವು ಪ್ರಮುಖ ಯೋಜನೆಗಳನ್ನು, ಮಸೂದೆಗಳನ್ನು ಜಾರಿಗೆ ತರುವುದು, ದೇಶದ ಸಂಸತ್ತಿನ ಅಧಿವೇಶನದ ಮುಖ್ಯ ಉದ್ದೇಶ. ಆಡಳಿತ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವುದು ಸರ್ಕಾರ ಮತ್ತು ವಿಪಕ್ಷಗಳ ಜವಾಬ್ದಾರಿ. ಬಜೆಟ್ ಅಧಿವೇಶನ, ಚಳಿಗಾಲದ ಅಧಿವೇಶನ, ಮುಂಗಾರು ಅಧಿವೇಶನ, ಚುನಾವಣೆ ಬಳಿಕ ನಡೆಯುವ ಮೊದಲ ಅಧಿವೇಶನ ಮತ್ತು ವಿಶೇಷ ಅಧಿವೇಶನ- ಹೀಗೆ ಸಂಸತ್ತಿನಲ್ಲಿ ವರ್ಷದಲ್ಲಿ ಕನಿಷ್ಠ ಮೂರು ಕಲಾಪಗಳಾದರೂ ನಡೆಯುತ್ತದೆ. ಅದರಂತೆ ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ, ಏರ್‌ ಇಂಡಿಯಾ ವಿಮಾನ ದುರಂತಗಳ ಬಳಿಕ ನಡೆಯುವ ಈ ಅಧಿವೇಶನ ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳಿಗೆ ಅತಿ ಮುಖ್ಯವಾದ ಅಧಿವೇಶನ ಎಂದರೆ ತಪ್ಪಾಗದು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಎಂದಿನಂತೆ ಕಲಾಪಕ್ಕೆ ಗೈರಾಗಿ, ತಮ್ಮ ವಿದೇಶ ತಿರುಗಾಟದಲ್ಲಿ ವ್ಯಸ್ತರಾಗಿ, ವಿಪಕ್ಷಗಳ ಪ್ರಶ್ನೆಗಳ ಸುರಿಮಳೆಯಿಂದ ನುಣುಚಿಕೊಳ್ಳಲು ಸಜ್ಜಾಗಿದ್ದಾರೆ.

ಇಂದಿನಿಂದ ಆರಂಭವಾಗುವ ಮುಂಗಾರು ಅಧಿವೇಶನವು ಆಗಸ್ಟ್ 21ರವರೆಗೆ ನಡೆಯಲಿದೆ. ಈ ನಡುವೆ ಆಗಸ್ಟ್ 12ರಿಂದ 18ರವರೆಗೆ ರಜೆ ಇರಲಿದೆ. ಆಪರೇಷನ್ ಸಿಂಧೂರ ವಿಚಾರದಲ್ಲಿ ಈ ಹಿಂದೆ ಹಲವು ಬಾರಿ ವಿಪಕ್ಷಗಳು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿದರೂ ಕೇಂದ್ರ ವಿಪಕ್ಷಗಳಿಗೆ ಮಣೆ ಹಾಕಿಲ್ಲ. ಆದ್ದರಿಂದ ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನಕ್ಕೆ ವಿಶೇಷ ಅಧಿವೇಶನದ ಪ್ರಾಮುಖ್ಯತೆಯಿದೆ. ಪ್ರಧಾನಿ ಮೋದಿ ಅವರನ್ನು ಕೇಳಬೇಕಾದ ಹಲವು ಪ್ರಶ್ನೆಗಳನ್ನು ವಿಪಕ್ಷಗಳು ಹೊಂದಿವೆ.

ಇದನ್ನು ಓದಿದ್ದೀರಾ? 79 ದಿನಗಳ ನಂತರ ಮಣಿಪುರದ ಬಗ್ಗೆ ಮಾತು: ಸದನದೊಳಗೆ ಮಾತನಾಡಲು ಪ್ರಧಾನಿಗೆ ಖರ್ಗೆ ಒತ್ತಾಯ

ಆದರೆ ಮೋದಿ ಬುಧವಾರ (ಜು.23)ದಿಂದ ಒಟ್ಟು ನಾಲ್ಕು ದಿನಗಳ ಕಾಲ ಯುಕೆ ಮತ್ತು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ. ಎರಡು ದಿನ ಯುಕೆಯಲ್ಲಿದ್ದರೆ, ಜುಲೈ 25-26ರಂದು ಮಾಲ್ಡೀವ್ಸ್‌ನಲ್ಲಿ ಇರಲಿದ್ದಾರೆ. ದೇಶದಲ್ಲಿದ್ದರೂ ಸಂಸತ್ತಿಗೆ ಹಾಜರಾಗದ ಕುಖ್ಯಾತಿಯನ್ನು ಹೊಂದಿರುವ ಪ್ರಧಾನಿ ಇದೀಗ ಸಂಸತ್ತಿನ ಆರಂಭವಾಗುತ್ತಿದ್ದಂತೆ ವಿದೇಶ ಪ್ರವಾಸಕ್ಕೆ ಅಣಿಯಾಗಿದ್ದಾರೆ. ಅಧಿವೇಶನ ಬಿಡಿ ಸರ್ವ ಪಕ್ಷ ಸಭೆಗೂ ಪ್ರಧಾನಿ ಹಾಜರಾಗಿಲ್ಲ. ಇದು ಸ್ಪಷ್ಟವಾಗಿ ವಿಪಕ್ಷಗಳ ಪ್ರಹಾರದಿಂದ ತಪ್ಪಿಸಿಕೊಳ್ಳುವ ಯತ್ನದಂತೆ ಭಾಸವಾಗಿದೆ. ಮೋದಿ ನಾಲ್ಕು ದಿನ ಅಧಿವೇಶನ ಗೈರಾದರೆ ದೊಡ್ಡ ಪ್ರಮಾದವಾಗದು ಎಂದು ನೀವು ಹೇಳಬಹುದು. ಆದರೆ ಈವರೆಗೆ ಮೋದಿ ಎಷ್ಟು ಬಾರಿ ಅಧಿವೇಶನಕ್ಕೆ ಹಾಜರಾಗಿದ್ದರೆ, ಮಾತನಾಡಿದ್ದಾರೆ, ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ?

ಅಷ್ಟಕ್ಕೂ ಪ್ರಧಾನಿ ಅಧಿವೇಶನಕ್ಕೆ ಗೈರಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಗೈರಾಗಿದ್ದಾರೆ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. 2014ರಿಂದ ಈವರೆಗೆ ನಿರಂತರವಾಗಿ ಮೋದಿ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಲು ಪ್ರಮುಖ ಕಾರಣ ಸಂಸತ್ತಿನಲ್ಲಿ ಪ್ರಧಾನಿ ಹಾಜರಾತಿ. ಈ ಎಲ್ಲ ಬೆಳವಣಿಗೆ ನಡುವೆ “ಪ್ರಧಾನಿ ಮೋದಿ ಅವರು ತಾನು ಸಂಸತ್ತಿಗಿಂತ ಮೇಲೆ ಎಂದು ಭಾವಿಸಿರಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು. ಈ ಮಾತನ್ನು ಮೋದಿ ಪ್ರತಿ ನಡೆಯು ಸ್ಪಷ್ಟಪಡಿಸುವಂತಿದೆ.

ಲೋಕಲ್‌ ಸರ್ಕಲ್ಸ್‌ ಸಮೀಕ್ಷೆ ಏನು ಹೇಳುತ್ತದೆ?

ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಾಜರಾತಿ ಬಗ್ಗೆ ಯಾವುದೇ ನಿಖರ ಅಂಕಿಅಂಶಗಳಿಲ್ಲ. ಪ್ರಧಾನಿಯಾಗಿರುವ ಕಾರಣ ಮೋದಿ ನೋಂದಣಿಯಲ್ಲಿ ಸಹಿ ಮಾಡಬೇಕಾಗಿಲ್ಲ. ಆದರೆ ಪ್ರಧಾನಿಯ ನಿರ್ದಿಷ್ಟ ಹಾಜರಾತಿಯೂ ಸ್ಪಷ್ಟವಾಗಿ ತಿಳಿಯಬೇಕು ಎಂಬ ಆಗ್ರಹವಿದೆ. ಲೋಕಲ್‌ಸರ್ಕಲ್ಸ್‌(LocalCircles) ನಡೆಸಿದ ಆನ್‌ಲೈನ್ ಸಮೀಕ್ಷೆ ಪ್ರಕಾರ ಒಟ್ಟು 7,899 ಮಂದಿಯಲ್ಲಿ ಸುಮಾರು ಶೇಕಡ 61ರಷ್ಟು ಮಂದಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಹಾಜರಾಗಿರುವುದು ಸಂಸತ್ತು ಕಾರ್ಯಾಚರಣೆ ಸುಧಾರಣೆಗೆ ಸಹಕಾರಿ ಎಂದು ಭಾವಿಸಿದ್ದಾರೆ. ಆದರೆ ಜನರ ಅಭಿಪ್ರಾಯಕ್ಕೆ ಮೋದಿ ಕಿಮ್ಮಕ್ಕು ನೀಡುತ್ತಾರೆಯೇ? ಇಲ್ಲ.

ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಈ ಹಿಂದೆ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದರು. ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ಸೇರಿ ಎಲ್ಲ ಸಂಸತ್ ಸದಸ್ಯರು ಕನಿಷ್ಠ ಶೇಕಡ 75ರಷ್ಟು ಹಾಜರಾತಿ ಹೊಂದಿರುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಲೋಕಸಭಾ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಈ ಅರ್ಜಿಯನ್ನು ಉಲ್ಲೇಖಿಸಲಾಗಿತ್ತು. ಆದರೆ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.

ಇದನ್ನು ಓದಿದ್ದೀರಾ? 2024ರಲ್ಲಿ ರಾಜಕೀಯ ಪ್ರವೇಶ, ಸದ್ದು ಮಾಡಿದ ಪ್ರಬಲ ಮಹಿಳಾ ರಾಜಕಾರಣಿಗಳಿವರು

ತಮ್ಮ ವಿರುದ್ಧ ಅದೆಷ್ಟೋ ಟೀಕೆಗಳು ಬಂದರೂ ಮೋದಿ ಮಾತ್ರ ಸಂಸತ್ತಿನಿಂದ ತಪ್ಪಿಸಿಕೊಳ್ಳುವ ತಮ್ಮ ಪ್ರಯತ್ನವನ್ನು ಕೈಬಿಟ್ಟಿಲ್ಲ. ಇದರೊಂದಿಗೆ ವಿವಿಧ ದೇಶಗಳೊಂದಿಗೆ ಉತ್ತಮ ನಂಟು ಬೆಸೆಯುವ ನೆಪ ತೋರಿ ತಮ್ಮ ವಿದೇಶ ಪ್ರವಾಸದ ಚಾಳಿಯನ್ನೂ ತೊರೆದಿಲ್ಲ. ಈವರೆಗೆ 90 ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ, ಹಲವು ದೇಶಗಳನ್ನು ಸುತ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲ ಪ್ರವಾಸ ಹೋಗಿ ಆಗಿದ್ದೇನು? ದೇಶ ವಿಶ್ವಗುರು ಆಗಲು ಸಾಧ್ಯವಾಗಿದೆಯೇ? ಖಂಡಿತವಾಗಿಯೂ ಇಲ್ಲ. ಗಾಜಾ, ಪ್ಯಾಲೆಸ್ತೀನ್, ಇಸ್ರೇಲ್ ವಿಚಾರದಲ್ಲಿ ದೃಢ ನಿಲುವು ತೆಗೆದುಕೊಳ್ಳದ ಭಾರತ ಹಲವು ಪ್ರಜಾಪ್ರಭುತ್ವ ದೇಶಗಳಿಂದ ದೂರ ಸರಿಯುತ್ತಿರುವಂತಿದೆ.

atal singh

ವಾಜಪೇಯಿ, ಮನ್‌ಮೋಹನ್ ಸಿಂಗ್‌ ಶಿಸ್ತು ಮೋದಿಗಿದೆಯೇ?

ಪತ್ರಿಕಾಗೋಷ್ಠಿಯನ್ನು ನಡೆಸುವುದರಿಂದ ಹಿಡಿದು, ಸಂಸತ್ತಿನ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗಿಯಾಗುವ ವಿಚಾರಕ್ಕೆ ಬಂದಾಗ ಬಿಜೆಪಿ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಿಂದ ಹಿಡಿದು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ವರೆಗೆ ಹಲವು ನಾಯಕರುಗಳಿಗೆ ಇರುವ ಬದ್ಧತೆ, ಸಂಸದೀಯ ಶಿಸ್ತು ಪ್ರಧಾನಿ ನರೇಂದ್ರ ಮೋದಿಗಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಮೋದಿ ಯಾರ ಮಾತನ್ನೂ ಕೇಳಲು ಬಯಸದ, ಕೇಳದ, ತಾನೂ ಮಾತನಾಡಲು ಬಯಸದ, ಮಾತನಾಡದ, ಪ್ರಶ್ನೆಗಳಿಗೆ ಉತ್ತರಿಸಲಾಗದ ವ್ಯಕ್ತಿತ್ವ ಹೊಂದಿರುವವರು. ಅಧಿವೇಶನ ಆರಂಭವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ ಬಳಿಕ ಒಂದು ಭಾಷಣ, ಹಲವು ದಿನಗಳ ಕಲಾಪ ನಡೆದು ಕೊನೆಯ ದಿನ ಒಂದು ಭಾಷಣ- ಇದಿಷ್ಟೇ ತನ್ನ ಪಾಲಿಗೆ ಸೇರಿದ್ದು ಎಂದು ಪ್ರಧಾನಿ ಅಂದುಕೊಂಡಿರುವಂತಿದೆ. ಅಲ್ಲಿಯೂ ಚುನಾವಣೆ ಗುಂಗಿನಿಂದ ಹೊರಬರದ ಪ್ರಧಾನಿ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸುವ ಬದಲು ಮಾಡಿರುವುದು ಚುನಾವಣಾ ಭಾಷಣ.

ಮೋದಿಗೆ ಹೋಲಿಸಿದರೆ ಮನಮೋಹನ್ ಸಿಂಗ್ ಹಲವು ಬಾರಿ ಪತ್ರಿಕಾಗೋಷ್ಠಿಯನ್ನು ಎದುರಿಸಿದ್ದಾರೆ ಮತ್ತು ತನ್ನ ಆರೋಗ್ಯ ಸಮಸ್ಯೆಗಳನ್ನೆಲ್ಲ ಬದಿಗೊತ್ತಿ ಸಂಸತ್ತಿನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಮನ್‌ ಮೋಹನ್ ಸಿಂಗ್ ಅವರನ್ನು ‘ಮೌನಿ’ ಎಂದು ಬಿಜೆಪಿ ಟೀಕಿಸಿದರೂ ಅದೆಷ್ಟೋ ಪತ್ರಿಕಾಗೋಷ್ಠಿ ನಡೆಸಿದವರು ಅವರು. ಹಾಗೆಯೇ ವಿಪಕ್ಷಗಳ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದವರು. 2023ರಲ್ಲಿ ರಾಜ್ಯಸಭಾ ಸದಸ್ಯರಾಗಿ ಸಿಂಗ್ ಅವರು ಆರೋಗ್ಯ ಕಾರಣದಿಂದಾಗಿ ಸೀಮಿತವಾಗಿ ಸಂಸತ್ತಿಗೆ ಹಾಜರಾಗುತ್ತಿದ್ದರು. ಆದರೆ ಯಾವುದೇ ಪ್ರಮುಖ ಮತದಾನದ ಸಂದರ್ಭದಲ್ಲೂ ‘ವೀಲ್‌ಚೇರ್‌’ನಲ್ಲೇ ಬಂದು ಮತ ಹಾಕಿ ತನ್ನ ಬದ್ಧತೆಯನ್ನು ತೋರಿಸಿದ್ದಾರೆ.

ಮೋದಿಯೊಂದಿಗೆ ಕಾಂಗ್ರೆಸ್ ಹಿರಿಯ ನಾಯಕರ ಹೋಲಿಕೆ ಯಾಕೆ ಬಿಡಿ, ಬಿಜೆಪಿ ನಾಯಕ ವಾಜಪೇಯಿ ಅವರೊಂದಿಗೆ ಹೋಲಿಸೋಣ. ವಾಜಪೇಯಿ ಅವರಿಗಿದ್ದ ಸಂಸತ್ತಿನ ಶಿಸ್ತಿನ ಶೇಕಡ 1ರಷ್ಟು ಪ್ರಧಾನಿ ಮೋದಿಗಿಲ್ಲ ಎಂದರೆ ಖಂಡಿತ ತಪ್ಪಾಗದು. ಪ್ರಧಾನಿಯಾಗಿದ್ದಾಗ ಮಾತ್ರವಲ್ಲ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಸಂಸತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ವಾಜಪೇಯಿ. ಹಾಗೆಯೇ ಸಂಸತ್ತಿನಲ್ಲಿ ತಮ್ಮ ವಾಕ್ಚಾತುರ್ಯ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೇಲೆ ತಮಗಿದ್ದ ಗೌರವಕ್ಕಾಗಿ ಆಗಾಗ್ಗೆ ಪ್ರಶಂಸೆಗೆ ಒಳಗಾಗಿದ್ದಾರೆ. ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ‘ಭೀಷ್ಮ ಪಿತಾಮಹ’ ಎಂದು ಮನಮೋಹನ್ ಸಿಂಗ್ ಅವರು ಕರೆದಿದ್ದಾರೆ. 2009ರಲ್ಲಿ ಆರೋಗ್ಯ ಸಮಸ್ಯೆಗಳಿಂದ ಸಂಸದೀಯ ಚಟುವಟಿಕೆಗಳಲ್ಲಿ ವಾಜಪೇಯಿ ಹೆಚ್ಚಾಗಿ ತೊಡಗಿಸಿಕೊಳ್ಳದಿದ್ದರೂ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ಮೋದಿ ವಾಜಪೇಯಿ

ವಿಪಕ್ಷಗಳಿಂದ ತಪ್ಪಿಸಿಕೊಳ್ಳುವ ಯತ್ನವೇ?

ಇವೆಲ್ಲವುದನ್ನು ನೋಡಿದಾಗ ಮೋದಿ ವಿಪಕ್ಷಗಳಿಂದ ತಪ್ಪಿಸಿಕೊಳ್ಳುವ, ಪಲಾಯನ ಮಾಡುವ ಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತದೆ. ಇದೇ ಪ್ರಧಾನಿ ಮೋದಿ ಈ ಹಿಂದೆ “ಯುವ ಸಂಸದರಿಗೆ ಮಾತನಾಡಲು ಅವಕಾಶ ನೀಡಬೇಕು, ಅವರ ಮಾತನ್ನು ಕೂತು ಆಲಿಸಬೇಕು” ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದ್ದರು. ಆದರೆ ತಾವು ಮಾತ್ರ ಮಾಡಿದ್ದೇನು? ಈ ಹಿಂದೆ ನಡೆದ ಅಧಿವೇಶನದಲ್ಲಿ ಸಂಸದೆ ಮಹುವಾ ಮೊಯಿತ್ರಾ ಭಾಷಣದ ವೇಳೆ ಎದ್ದು ಹೊರನಡೆದರು. ಇದರಿಂದಾಗಿ ಮೊಯಿತ್ರಾ ಅವರ ಲೇವಡಿಗೆ ಮೋದಿ ಗುರಿಯಾದರು. ಅಷ್ಟಕ್ಕೂ ಸಂಸತ್ತಿಗೆ ಹಾಜರಾಗಲು ಮೋದಿ ಹಿಂದೇಟು ಹಾಕುವುದೇಕೆ? ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮತ್ತು ವಿಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲದೆ ಪ್ರಧಾನಿ ವಿದೇಶ ಪ್ರವಾಸ ಯೋಜನೆ ರೂಪಿಸಿಕೊಂಡಿದ್ದಾರೆಯೇ? ಅಥವಾ ತಾನು ಸಂಸತ್ತಿಗಿಂತಲೂ ಮೇಲು ಎಂಬುದು ಮೋದಿ ಅವರ ಭಾವನೆಯೇ, ಎಂಬುದು ಹಲವರ ಪ್ರಶ್ನೆಯಾಗಿದೆ.

ಮಯೂರಿ ಬೋಳಾರ್
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X