ಸಂತ್ರಸ್ತರ ದೂರಿನಲ್ಲಿ ಏನಿದೆ? ಗುರುವಾರ ತಡರಾತ್ರಿ ನಡೆದ ಘಟನೆಗಳೇನು?
ರಾಜ್ಯದ ಪ್ರಭಾವಿ ರಾಜಕಾರಣಿ, ನಾಲ್ಕು ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ನಡೆಸಿರುವ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.
ಗುರುವಾರ ಸಂಜೆ 6 ಗಂಟೆಯ ವೇಳೆಗೆ ಸಂತ್ರಸ್ತ ತಾಯಿ ಮತ್ತು ಮಗಳು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಲು ಯತ್ನಿಸಿದರು. ಆದರೆ ಪೊಲೀಸರು ತಕ್ಷಣವೇ ದೂರು ಸ್ವೀಕರಿಸಲಿಲ್ಲ. ತಾಯಿ ಮತ್ತು ಮಗಳು ತಮಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದು ಪಟ್ಟು ಹಿಡಿದಿದ್ದರಿಂದ ರಾತ್ರಿ 12 ಗಂಟೆಯ ವೇಳೆಗೆ ಎಫ್‌ಐಆರ್ ಆಗಿದೆ.
ಪೋಕ್ಸೋ ಕಾನೂನಿನ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಯಡಿಯೂರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಕ್ಸೋ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಆರೋಪ ಸಾಬೀತಾದದಲ್ಲಿ ಕನಿಷ್ಠ ಮೂರು ವರ್ಷ, ಕೆಲವೊಮ್ಮೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು. ಜೊತೆಗೆ ದಂಡವನ್ನೂ ವಿಧಿಸಬಹುದು.
ಐಪಿಸಿ ಸೆಕ್ಷನ್ 354 ಎ ಲೈಂಗಿಕ ಕಿರುಕುಳಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಇಷ್ಟವಿಲ್ಲದಿದ್ದರೂ ಲೈಂಗಿಕ ಅಭಿವ್ಯಕ್ತಿಯನ್ನು ಮಾಡುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಯನ್ನು ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲವಾದದ್ದನ್ನು ತೋರಿಸುವುದು ಶಿಕ್ಷಾರ್ಹ ಅಪರಾಧವೆಂದು ಈ ಸೆಕ್ಷನ್ ಹೇಳುತ್ತದೆ.
ದೂರಿನಲ್ಲಿ ಏನಿದೆ?
ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರುವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು. ಬಾಲಕಿಯು ಯಡಿಯೂರಪ್ಪನವರನ್ನು ತಾತಾ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿಯನ್ನು ಅಪ್ಪಾಜಿ ಎಂದು ಸಂಬೋಧಿಸುತ್ತಿದ್ದರು. ಆ ವೇಳೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಟ್ಟಿಲ್ಲ. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ. “ಹೀಗೇಕೆ ಮಾಡಿದಿರಿ?” ಎಂದು ತಾಯಿ ಕೇಳಲಾಗಿ, “ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದಿದ್ದಾರೆ. ತಕ್ಷಣವೇ ಯಡಿಯೂರಪ್ಪ ಕ್ಷಮೆ ಯಾಚಿಸುತ್ತಾ, “ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳು
ಯಡಿಯೂರಪ್ಪನವರ ವಿರುದ್ಧ ಸಂತ್ರಸ್ತ ಬಾಲಕಿ ಮತ್ತು ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದನ್ನು ತಿಳಿದ ಅನೇಕ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ತಡರಾತ್ರಿಯೇ ಪೊಲೀಸ್ ಠಾಣೆಗೆ ಧಾವಿಸಿದ್ದರು. ‘ಈದಿನ.ಕಾಂ’ ತಂಡವೂ ಸ್ಥಳದಲ್ಲಿತ್ತು.
ಪೊಲೀಸ್ ಠಾಣೆಯ ಎದುರು ಜನ ಜಮಾಯಿಸದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಮಾಧ್ಯಮಗಳ ವಾಹನಗಳನ್ನು ಮತ್ತು ಪತ್ರಕರ್ತರನ್ನು ತೆರವು ಮಾಡಿಸಲಾಯಿತು. ಜೊತೆಗೆ ಬಿಎಸ್‌ವೈ ಬೆಂಬಲಿಗರು ಮಾಧ್ಯಮಗಳಲ್ಲಿ ವರದಿಯಾಗುವುದನ್ನು ತಡೆಯಲು ಠಾಣೆಯ ಬಳಿ ದೌಡಾಯಿಸಿದ್ದರು.
ಬಿ.ಎಸ್.ಯಡಿಯೂರಪ್ಪನವರ ಬೆಂಬಲಿಗರು, ಮಾಧ್ಯಮದ ಪಿಆರ್‌ಒ ತಂಡ ಸ್ಥಳದಲ್ಲಿತ್ತು. “ಸುಳ್ಳು ಪ್ರಕರಣ ದಾಖಲಿಸಲು ಬಂದಿದ್ದಾರೆ, ಯಾವುದೇ ಕಾರಣಕ್ಕೂ ವರದಿ ಮಾಡಬಾರದು” ಎಂದು ತಾಕೀತು ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಬಿಜೆಪಿ ಮುಖಂಡರಿಬ್ಬರು ಪತ್ರಕರ್ತರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು. ಅದರಲ್ಲಿ ಒಬ್ಬರು ರುದ್ರೇಶ್ ಸೋಂಪುರ ಎಂದು ತಿಳಿದುಬಂದಿದ್ದು, ಅವರು ಕೂಗಾಟ ಜೋರಾಗಿತ್ತು.
ಲೈಂಗಿಕ ಕಿರುಕುಳ ಘಟನೆಯ ನಂತರದಲ್ಲಿ ಬಿಜೆಪಿಯ ವರಿಷ್ಠರಿಗೆ ಸಂತ್ರಸ್ತರು ದೂರು ನೀಡುವ ಪ್ರಯತ್ನವನ್ನೂ ಮಾಡಿದ್ದರೆಂದು ತಿಳಿದುಬಂದಿದೆ. ಆದರೆ ಯಾವುದೇ ಕ್ರಮ ಜರುಗಿಸದೆ ಇದ್ದರಿಂದ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಪೋಕ್ಸೋ ದಾಖಲಾದ ನಂತರದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಮೇಲೆ ಇಂತಹದ್ದೇ ಗಂಭೀರ ಪ್ರಕರಣ ದಾಖಲಾಗಿರುವುದು ಇದೇ ಮೊದಲು.
ಎಷ್ಟೇ ಪ್ರಭಾವಿಯಾದರೂ ಕಾನೂನಿನ ಅನ್ವಯ ಬಂಧನವಾಗುವುದು ಖಚಿತ ಎಂದು ಕಾನೂನು ತಜ್ಞರು ಹೇಳುತ್ತಾರೆ. ಯಡಿಯೂರಪ್ಪನವರನ್ನು ಅರೆಸ್ಟ್ ಮಾಡಲಾಗುತ್ತಾ? ಸಂತ್ರಸ್ತ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತದಾ? ಯಾವುದೇ ರಾಜಕಾರಣ ನಡೆಯದೆ, ಸಂತ್ರಸ್ತರನ್ನು ಬೆದರಿಸದೆ, ಒತ್ತಡ ತರದೆ ಪ್ರಕರಣದ ತನಿಖೆಯಾಗುತ್ತಾ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.
