2011ರ ಜನಗಣತಿ ಬಳಿಕ 2027ರಲ್ಲಿ ಜನಗಣತಿ ನಡೆಸಲು ಸಿದ್ಧತೆ ಶುರುವಾಗಿದೆ. ಸ್ವತಂತ್ರ ಭಾರತದಲ್ಲಿ ಮೊದಲ ಡಿಜಿಟಲ್ ಜನಗಣತಿ ಮತ್ತು ಜಾತಿಗಣತಿಯನ್ನು ಒಳಗೊಂಡ ಜನಗಣತಿಯಾಗಿದೆ. ಆದ್ದರಿಂದ ಪೂರ್ವ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
2027ರ ಜನಗಣತಿಗೂ ಮುನ್ನ ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ನ ನಡುವೆ ಪೂರ್ವ-ಪರೀಕ್ಷೆಯನ್ನು ನಡೆಸಲು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು (RG & CCI) ರಾಜ್ಯಗಳಲ್ಲಿನ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯಗಳಿಗೆ (DCOs) ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಒಳ ಮೀಸಲಾತಿ | ತಾರ್ಕಿಕ ಅಂತ್ಯದ ಕಡೆ ಹೆಜ್ಜೆ, ಎಡಗೈ-ಬಲಗೈ ನಾಯಕರಿಂದ ಮಹತ್ವದ ಸಭೆ
2026ರ ಏಪ್ರಿಲ್ 1 ಮತ್ತು 2027ರ ಫೆಬ್ರವರಿ 28ರ ನಡುವೆ ಮನೆಗಳ ಪಟ್ಟಿ((HLO) ಮತ್ತು ಜನಸಂಖ್ಯಾ ಎಣಿಕೆ – ಎರಡು ಹಂತಗಳಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಸಂಪೂರ್ಣ ಪ್ರಕ್ರಿಯೆಯ ಪೂರ್ವ ಪರೀಕ್ಷೆ ನಡೆಸಲಾಗುತ್ತದೆ.
ಪ್ರಶ್ನೆಗಳು, ದತ್ತಾಂಶ ಸಂಗ್ರಹ ವಿಧಾನಗಳು, ತರಬೇತಿ ಪರಿಣಾಮಕಾರಿತ್ವ, ಮುದ್ರಣ ಪ್ರಕ್ರಿಯೆ, ಸಂಭಾವ್ಯ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಗುರುತಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಗ್ಗೆ ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ರಾಜ್ಯಗಳಲ್ಲಿನ ಡಿಸಿಒಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ದತ್ತಾಂಶ ಸಂಗ್ರಹಿಸಲು ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲಾಗುವುದು ಎಂದು ಡಿಸಿಒಗಳಿಗೆ ತಿಳಿಸಲಾಗಿದೆ. ಸ್ವಯಂ-ಗಣತಿ, ಡಿಜಿಟಲ್ ಮ್ಯಾಪಿಂಗ್ ಪರಿಕರಗಳು ಮತ್ತು ವೆಬ್-ಆಧಾರಿತ ಪೋರ್ಟಲ್‌ನಂತಹ ಇತರ ಅಂಶಗಳನ್ನು ಸಹ ಪೂರ್ವ ಪರೀಕ್ಷೆಯ ಸಮಯದಲ್ಲಿ ಬಳಸಲಾಗುವುದು ಎಂದು ಹೇಳಲಾಗಿದೆ.
ಇನ್ನು 2021ರಲ್ಲಿ ನಿಗದಿಪಡಿಸಲಾಗಿದ್ದ ಜನಗಣತಿಯು ಕೋವಿಡ್ ಕಾರಣದಿಂದಾಗಿ ವಿಳಂಬವಾಗಿತ್ತು. ಅದಾದ ಬಳಿಕವೂ ಕೇಂದ್ರ ಸರ್ಕಾರ ಗಣತಿ ಮುಂದೂಡುತ್ತಾ ಸಾಗಿತ್ತು. ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ನಿರಂತರವಾಗಿ ಪ್ರಶ್ನಿಸುತ್ತಾ ಬಂದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಕೇಂದ್ರ 2027ರಲ್ಲಿ ಜನಗಣತಿ ಪೂರ್ಣಗೊಳಿಸಲು ನಿರ್ಧರಿಸಿದೆ.
2021ರ ಜನಗಣತಿಯ ಪೂರ್ವ-ಪರೀಕ್ಷೆಯು 2019ರಲ್ಲಿ ನಡೆದಿದ್ದು, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 76 ಜಿಲ್ಲೆಗಳಲ್ಲಿ 26 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡಿತ್ತು. 2019ರಲ್ಲಿ ರಾಜ್ಯ ಸರ್ಕಾರಗಳು ಈ ಪ್ರಕ್ರಿಯೆಗಳಲ್ಲಿ ಸುಮಾರು 6,000 ಗಣತಿದಾರರು ಮತ್ತು 1,100 ಮೇಲ್ವಿಚಾರಕರು ತೊಡಗಿಸಿಕೊಂಡಿದ್ದರು. ಈ ವೇಳೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ಎರಡನೇ ಹಂತದ ಜನಸಂಖ್ಯಾ ಗಣತಿಗೆ ಸಂಬಂಧಿಸಿದ ಪ್ರಶ್ನೆಗಳು ಸೇರಿತ್ತು. ಆದರೆ ಈಗ ಪೂರ್ವ-ಪರೀಕ್ಷೆಯು ಮೊದಲ ಹಂತದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಒಳಗೊಂಡಿದೆ. ಜಾತಿ ಸಂಬಂಧಿತ ಎರಡನೇ ಹಂತದ ಬಗ್ಗೆ ಪ್ರಶ್ನೆಗಳಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜನಗಣತಿ ಜತೆಗೆ ಜಾತಿಗಣತಿ ನಡೆಯಬೇಕು ; ಲೋಹಿಯಾ ವೇದಿಕೆ ಒತ್ತಾಯ
ಇನ್ನು ಈ ಹಿಂದೆಯೇ ವಿಳಂಬವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ. “2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಇನ್ನಷ್ಟೂ ವಿಳಂಬ ಮಾಡಲು ನಿಜವಾಗಿಯೂ ಯಾವುದೇ ಕಾರಣವಿಲ್ಲ. ಮೋದಿ ಸರ್ಕಾರ ಬರೀ ಸುದ್ದಿ ಹಬ್ಬಿಸುತ್ತದೆ, ಆದರೆ ಗಡುವನ್ನು ಮಾತ್ರ ಪೂರೈಸಲ್ಲ” ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
ಜನಗಣತಿಯನ್ನು 2027ಕ್ಕೆ ವಿಳಂಬ ಮಾಡುವ ಬಿಜೆಪಿ ಸರ್ಕಾರದ ಕ್ರಮವು ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಯೋಜನೆ ಬಿಜೆಪಿಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ. “2026ರ ನಂತರದ ಮೊದಲ ಜನಗಣತಿಯ ನಂತರ ವಿಕೇಂದ್ರೀಕರಣವನ್ನು ಸ್ಪಷ್ಟಪಡಿಸಿದೆ. ನಾನು ಇದರ ಬಗ್ಗೆ ಎಚ್ಚರಿಸಿದ್ದೆ. ಈಗ ಎಲ್ಲವೂ ಬಯಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿರುವ ದಕ್ಷಿಣ ಭಾರತದ ಹಲವು ರಾಜ್ಯಗಳು ಈಗ ವಿಕೇಂದ್ರೀಕರಣದಿಂದಾಗಿ ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಳೆದುಕೊಳ್ಳುವ ಆತಂಕದಲ್ಲಿದೆ. 1976ರಲ್ಲಿ 1971ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ, ಕುಟುಂಬ ಯೋಜನೆಯ ಮೂಲಕ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿದ ರಾಜ್ಯಗಳು ಸಂಸತ್ತಿನಲ್ಲಿ ಸ್ಥಾನಗಳನ್ನು ಕಳೆದುಕೊಳ್ಳುವುದನ್ನು ತಡೆಯಲು ಡಿಲಿಮಿಟೇಶನ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಅದಾದ ಬಳಿಕ 2001ರಲ್ಲಿ ಈ ತಡೆಯನ್ನು 2026ರವರೆಗೆ ವಿಸ್ತರಿಸಲಾಯಿತು.
