- ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ?
- ಕರ್ನಾಟಕವನ್ನು ದುಷ್ಟಶಕ್ತಿ ಮುಕ್ತ ರಾಜ್ಯ ಮಾಡುತ್ತೇವೆ: ಪ್ರಿಯಾಂಕ್
“ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ಅಂದಹಾಗೆ, ಕಲಬುರಗಿಯಲ್ಲಿ ಪೇದೆ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ!” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕುಟುಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿ ಬ್ಲಾಕ್‌ಮೇಲ್ ಮಾಡಿದ ದುಷ್ಟನ ಬಗ್ಗೆ ತಾವು ಮಾತಾಡುವುದಿಲ್ಲವೇಕೆ? ಆತ ಹಿಂದೆ ನಿಮ್ಮ ಮನೆಯ ಮೇಲೆ ದಾಳಿ ಮಾಡಿದ ದುಷ್ಟಶಕ್ತಿಯ ಗುಂಪಿಗೆ ಸೇರಿದವನು ಎಂಬುದಕ್ಕೆ ಭಯವೇ?” ಎಂದು ಲೇವಡಿ ಮಾಡಿದ್ದಾರೆ.
“ಕಲಬುರಗಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತ ಪೇದೆಯನ್ನು ಕೊಲೆ ಮಾಡಿದ್ದಲ್ಲದೆ, ಬಂಧಿಸಿದ ಪೊಲೀಸರಿಗೆ ಚಾಕು ಹಾಕಲು ಹೋಗಿ ಈಗ ಗುಂಡೇಟು ತಿಂದು ಬಂಧಿಯಾಗಿದ್ದಾನೆ. ತಾವು ಆತನಿಗೆ ಜಾಮೀನು ನೀಡಿ ಬಿಡಿಸಲು ಪ್ರಯತ್ನಿಸದಿದ್ದರೆ ಸಾಕು, ಅದೇ ತಾವು ಕರ್ನಾಟಕಕ್ಕೆ ಮಾಡುವ ಉಪಕಾರ!” ಎಂದು ಆರಗಗೆ ಪ್ರಿಯಾಂಕ್ ಕುಟುಕಿದ್ದಾರೆ.
“ನಮ್ಮ ಸರ್ಕಾರ ಬಂದು ಒಂದು ತಿಂಗಳಾಗಿದೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಅಷ್ಟೇ ಅಲ್ಲ, ಕರ್ನಾಟಕವನ್ನು ದುಷ್ಟಶಕ್ತಿ ಮುಕ್ತ ರಾಜ್ಯ ಮಾಡುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮನ್ ಕಿ ಬಾತ್‌ನಲ್ಲಿ ಮಣಿಪುರದ ಬಾತ್ ಏಕಿಲ್ಲ: ಪ್ರಧಾನಿ ಮೋದಿಯ ಮೌನ ಪ್ರಶ್ನಿಸಿದ ಖರ್ಗೆ
ಪೊಲೀಸ್ ವಲಯದಲ್ಲಿ ಕಳವಳ
ಮರಳು ಅಕ್ರಮ ಸಾಗಾಣಿಕೆ ತಡೆಯಲು ಮುಂದಾದ ಕಾನ್‌ಸ್ಟೆಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿದ ಗಂಭೀರ ಪ್ರಕರಣ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಬೆನ್ನಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ ಅವರ ಮೇಲೆ ಕೊಲೆ ಪ್ರಕರಣದ ಆರೋಪಿಯೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಪೊಲೀಸ್ ವಲಯದಲ್ಲಿ ಕಳವಳವನ್ನುಂಟು ಮಾಡಿದೆ.