47 ವರ್ಷದ ಮನೆಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶುಕ್ರವಾರ ಪ್ರಜ್ವಲ್ರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಶನಿವಾರಕ್ಕೆ ಕಾಯ್ದಿರಿಸಲಾಗಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಶನಿವಾರ ಎರಡೂ ಪಕ್ಷಕಾರರ ನಡುವಿನ ವಾದಗಳನ್ನು ಆಲಿಸಿ ಶಿಕ್ಷೆಯ ಪ್ರಮಾಣ ನಿಗದಿ ಪಡಿಸಿ ತೀರ್ಪು ನೀಡಿದರು.
ಪ್ರಜ್ವಲ್ ರೇವಣ್ಣಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಇದರಲ್ಲಿ ಸಂತ್ರಸ್ತೆಗೆ ಏಳು ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಶನಿವಾರ ಬೆಳಗಿನ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಮತ್ತು ಬಿ ಎನ್ ಜಗದೀಶ್ ಹಾಗೂ ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರ ವಾದ ಮಂಡಿಸಿದರು. ಅಂತಿಮವಾಗಿ ಪ್ರಜ್ವಲ್ಗೂ ತಮ್ಮ ಅನಿಸಿಕೆ ಹೇಳಿಕೊಳ್ಳಲು ನ್ಯಾಯಾಲಯ ಅವಕಾಶ ಕಲ್ಪಿಸಿತು.
ಈ ಸಂದರ್ಭದಲ್ಲಿ ಪ್ರಜ್ವಲ್ “ನಾನು ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಸಂಸದನಾಗಿದ್ದಾಗ ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಆರೋಪಿಸಿರಲಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ. ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರನಾದ ನಾನು ಮೆರಿಟ್ ವಿದ್ಯಾರ್ಥಿ. ರಾಜಕೀಯದಲ್ಲಿ ನಾನು ಬೇಗ ಬೆಳೆದಿದ್ದು, ನನಗೆ ಮುಳುವಾಯಿತು” ಎಂದು ಗದ್ಗದಿತರಾದರು.
ಪ್ರಾಸಿಕ್ಯೂಷನ್ ಪರ ಬಿ ಎನ್ ಜಗದೀಶ್ ಅವರು, “ಜೀವನೋಪಾಯಕ್ಕಾಗಿ ಮನೆಕೆಲಸಕ್ಕೆ ಸೇರಿದ ಅನಕ್ಷರಸ್ಥೆಯ ಮೇಲೆ ಪ್ರಜ್ವಲ್ ಪದೇಪದೇ ಪ್ರಜ್ವಲ್ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೇಳೆ ಸೆರೆ ಹಿಡಿದಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಮಾನಸಿಕವಾಗಿ ಹಿಂಸೆ ಅನುಭವಿಸಿ, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಸಾಕಷ್ಟು ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪ್ರಜ್ವಲ್ ವಿಡಿಯೋ ಮಾಡಿದ್ದಾನೆ. ಈತ ಚಟಗಾರನಾಗಿದ್ದು, ಆತನ ವಿರುದ್ದ ಇನ್ನೂ ಮೂರು ಅತ್ಯಾಚಾರ ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರಜ್ವಲ್ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಬೇಕು” ಎಂದು ಕೋರಿದ್ದರು.
ಐಪಿಸಿ ಸೆಕ್ಷನ್ 376(2)(k) ಹಾಗೂ 376 (2)(n) ಅಡಿ ತೀರ್ಪು ಪ್ರಕಟಿಸಲಾಗಿದ್ದು, ಜೀವನ ಪರ್ಯಂತ ಜೈಲು ಶಿಕ್ಷೆಯನ್ನು ಪ್ರಜ್ವಲ್ ಅನುಭವಿಸಬೇಕಿದೆ. ಅತ್ಯಾಚಾರದ 2 ಸೆಕ್ಷನ್ಗಳ ಅಡಿ ಒಟ್ಟು 10 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 7 ಲಕ್ಷ ರೂ. ಸಂತ್ರಸ್ತೆಗೆ ನೀಡಬೇಕು ಎಂದು ಜಡ್ಜ್ ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಅವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.