ನಿನ್ನೆ(ಸೆಪ್ಟೆಂಬರ್ 2) ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಾಯಿಯ ನಿಂದನೆ ಮಾಡಿದ್ದಾರೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. “ನನ್ನ ತಾಯಿಯನ್ನು ನಿಂದಿಸಿರುವುದು, ದೇಶದ ಪ್ರತಿಯೊಬ್ಬ ತಾಯಿ, ಸಹೋದರಿಯರನ್ನು ಅವಮಾನಿಸಿದಂತೆ” ಎಂದು ಪ್ರಧಾನಿ ಹೇಳಿದ್ದಾರೆ. ತಾಯಿ ಬಗ್ಗೆ ನಿಂದನೆ ನೆನೆದು ಭಾವುಕರಾದ ಪ್ರಧಾನಿ ಮೋದಿ ಅವರನ್ನು ಜಾನಪದ ಗಾಯಕಿ ನೇಹಾ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ನೇಹಾ ಸಿಂಗ್, “ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದಾಗ ಈ ಕಣ್ಣೀರು ಎಲ್ಲಿತ್ತು? ಇತರ ಮಹಿಳೆಯರನ್ನು ಜರ್ಸಿ ದನ, ಹಸು ಎಂದು ಕರೆದಾಗ ನೀವು ಎಲ್ಲಿದ್ದಿರಿ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕೇಂದ್ರ ಸರ್ಕಾರ ಟೀಕಿಸಿದ ಗಾಯಕಿ ನೇಹಾ ಸಿಂಗ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
“ಏನಾಯ್ತು ಸಾಹೇಬರೇ? ಈಗ ನಿಮ್ಮ ತಾಯಿಯ ವಿಷಯ ಬಂದಾಗ ನಿಮಗೆ ಅಳು ಬರುತ್ತಿದೆಯೇ? ಇತರರ ತಾಯಿಗೆ ಜರ್ಸಿ ದನ, ಹಸು, ’50 ಕೋಟಿ ರೂಪಾಯಿಯ ಗರ್ಲ್‌ಫ್ರೆಂಡ್’ ಎಂದೆಲ್ಲ ಲೇವಡಿ ಮಾಡುತ್ತಿದ್ದಾಗ ನೀವು ಎಲ್ಲಿದ್ದಿರಿ? ಮಣಿಪುರದಲ್ಲಿ ಇತರರ ತಾಯಿ, ಸಹೋದರಿಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದಾಗ ನಿಮ್ಮ ಈ ಕಣ್ಣೀರು ಯಾಕೆ ಹೊರಬರಲಿಲ್ಲ” ಎಂದು ಪ್ರಧಾನಿ ಮೋದಿಯನ್ನು ನೇಹಾ ಸಿಂಗ್ ಕೇಳಿದ್ದಾರೆ.
She did the job 🔥
— Gabbar (@Gabbar0099) September 2, 2025
This should go viral. pic.twitter.com/VuXMAzGTLh
“ನಿಮ್ಮ ಕಾರ್ಯಕರ್ತರು ಇತರರ ತಾಯಿಯನ್ನು ‘ಬಾರ್ ಡ್ಯಾನ್ಸರ್’ ಎಂದು ಕರೆಯುತ್ತಾರೆ. ಅವರನ್ನು ಈವರೆಗೂ ನೀವು ತಡೆದಿಲ್ಲ. ಈಗ ನೀವು ಕೊಯ್ಯುತ್ತಿರುವ ಫಸಲಿಗೆ ಬೀಜವನ್ನು ಬಿತ್ತಿದವರು ನೀವೇ. ‘ದೀದಿ ಹೋ ದೀದಿ’ ಎಂದು ಕಿರುಚುವ ಪರಂಪರೆಯನ್ನು ನೀವೇ ಶುರು ಮಾಡಿದ್ದು. ಅದರ ಪರಿಣಾಮವೇ ಇಂದು ಕಂಡುಬರುತ್ತಿದೆ” ಎಂದು ಹೇಳಿದ್ದಾರೆ.
“ನೀವು ಅಳುವುದನ್ನು ನಿಲ್ಲಿಸಿ. ದೇಶದ ಜನರನ್ನು ಮೂರ್ಖರು ಎಂದುಕೊಳ್ಳಬೇಡಿ. ನಿಮ್ಮ ಮನಸ್ಸಲ್ಲಿ ಮಹಿಳೆಯರಿಗೆ ಎಷ್ಟು ಗೌರವವಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ನಾವು ಬಾಯಿಬಿಟ್ಟು ಎಲ್ಲ ವಿಚಾರವನ್ನು ಹೇಳುವಂತೆ ಮಾಡಬೇಡಿ” ಎಂದಿದ್ದಾರೆ.
ಬಿಜೆಪಿ, ಆರ್‌ಎಸ್‌ಎಸ್ ಬೆಂಬಲಿಗರು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ‘ಬಾರ್ ಡ್ಯಾನ್ಸರ್’ ಆಗಿದ್ದರು ಎಂಬ ಅಪಪ್ರಚಾರ ಮಾಡಿದ್ದರು. ಸ್ವತಃ ಪ್ರಧಾನಿ ಮೋದಿ ಅವರೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿಯನ್ನು “50 ಕೋಟಿ ರೂಪಾಯಿಯ ಗರ್ಲ್‌ಫ್ರೆಂಡ್” ಎಂದು 2012ರಲ್ಲಿ ಚುನಾವಣಾ ಪ್ರಚಾರದ ವೇಳೆ ಮೋದಿ ಹೇಳಿದ್ದರು. ಹಾಗೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು “ದೀದಿ ಹೊ ದೀದಿ” ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದರು.
