ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಒಟ್ಟು 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಕೆ.ಸಿ. ವೇಣುಗೋಪಾಲ್ ಅವರು ಲೋಕಸಭಾ ಅಧ್ಯಕ್ಷರಿಗೆ ಹಕ್ಕುಚ್ಯುತಿ ಪ್ರಸ್ತಾಪ ಸಲ್ಲಿಸಿದ್ದಾರೆ.
ಸಂಸತ್ತಿನ ಹಕ್ಕುಗಳು ಮತ್ತು ಜನಪ್ರತಿನಿಧಿಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಲಾಗಿದೆ ಮತ್ತು ಸಂಸದೀಯ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಈ ನೋಟಿಸ್ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನಗಳು, ಸಂಸದೀಯ ಸಮಿತಿಗಳ ಅಥವಾ ಪ್ರಮುಖ ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ಆಡಳಿತಾತ್ಮಕ ಮುಖ್ಯಸ್ಥರಾದ ಮುಖ್ಯ ಕಾರ್ಯದರ್ಶಿಗಳು ನಡೆದುಕೊಂಡ ರೀತಿ ಸಂಸತ್ತಿನ ಗೌರವಕ್ಕೆ ಧಕ್ಕೆ ತಂದಿದೆ ಎಂಬುದು ಕಾಂಗ್ರೆಸ್ ನಾಯಕರ ಮುಖ್ಯ ಆರೋಪವಾಗಿದೆ.
ಇದನ್ನೂ ಓದಿ: ಮುಂಭಡ್ತಿಗೆ ಲಂಚ | ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ: ಸಿಎಸ್ ಡಾ. ಶಾಲಿನಿ ರಜನೀಶ್
ಈ ಪ್ರಸ್ತಾಪದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಹೊರತಾಗಿ, ಇತರ ಪ್ರಮುಖ ಐದು ರಾಜ್ಯಗಳ ಹಿರಿಯ ಐಎಎಸ್ ಅಧಿಕಾರಿಗಳು ಸೇರಿದ್ದಾರೆ.
ಸಂಸದೀಯ ನಿಯಮಗಳ ಪ್ರಕಾರ, ಯಾವುದೇ ಸರ್ಕಾರಿ ಅಧಿಕಾರಿ ಅಥವಾ ವ್ಯಕ್ತಿ ಸಂಸತ್ತಿನ ಸದಸ್ಯರ ಹಕ್ಕುಗಳಿಗೆ ಧಕ್ಕೆ ತಂದಲ್ಲಿ ಅಥವಾ ಸಂಸತ್ತಿನ ಆದೇಶ-ನಡಾವಳಿಗಳನ್ನು ಗೌರವಿಸದೇ ಇದ್ದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸಲು ಅವಕಾಶವಿದೆ. ಪ್ರಸ್ತುತ ಲೋಕಸಭಾ ಸ್ಪೀಕರ್ ಅವರು ಈ ಪ್ರಸ್ತಾಪವನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕಾಗಿ ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸುವ ಸಾಧ್ಯತೆಯಿದೆ.





