ನ್ಯಾಯಾಲಯವನ್ನು ರಾಜಕೀಯ ಹೋರಾಟಗಳಿಗೆ ವೇದಿಕೆಯನ್ನಾಗಿ ಬಳಸಲು ಅವಕಾಶ ನೀಡಲಾರೆವು. ರಾಜಕಾರಣಿಗೆ ತನ್ನ ವಿರೋಧಿಗಳ ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದೆ.
ಬಿಜೆಪಿಯ ತೆಲಂಗಾಣ ಘಟಕವು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಕೊನೆಗೊಳಿಸುತ್ತದೆ ರೇವಂತ್ ರೆಡ್ಡಿ ಹೇಳಿದ್ದು, ಅದು ಸುಳ್ಳು ಎಂದು ಹೇಳಿಕೊಂಡು ಬಿಜೆಪಿ ಮಾನನಷ್ಟ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಮೊಕದ್ದಮೆಯನ್ನು ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್‌ನ ಆದೇಶದ ವಿರುದ್ಧ ಬಿಜೆಪಿಯ ತೆಲಂಗಾಣ ಘಟಕವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ತಿರಸ್ಕರಿಸಿದೆ.
ಇದನ್ನು ಓದಿದ್ದೀರಾ? ತೆಲಂಗಾಣಕ್ಕೆ ನೀಡಿರುವ 6 ಗ್ಯಾರಂಟಿ ಶೀಘ್ರ ಜಾರಿ: ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ
2024ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರೇವಂತ್ ರೆಡ್ಡಿ ಮಾಡಿದ ಭಾಷಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ಪೀಠ, “ನ್ಯಾಯಾಲಯಗಳು ರಾಜಕೀಯ ಹೋರಾಟಗಳಿಗೆ ವೇದಿಕೆಯಾಗಲು ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆಯೇ ಸಿಇಜೆಐ ಹಲವು ಬಾರಿ ಹೇಳಿದ್ದರು. ನೀವು ರಾಜಕಾರಣಿಯಾಗಿದ್ದರೆ, ಇದನ್ನೆಲ್ಲ ಸಹಿಸಿಕೊಳ್ಳುವ ಧೈರ್ಯ ನಿಮಗಿರಬೇಕು” ಎಂದು ಹೇಳಿದೆ.
2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರೇವಂತ್ ಹೇಳಿಗಳ ವಿರುದ್ಧ ತೆಲಂಗಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸಮ್ ವೆಂಕಟೇಶ್ವರಲು ಅವರು ದೂರು ದಾಖಲಿಸಿದ್ದರು. ಆಗಸ್ಟ್ 1ರಂದು, ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಅವರು ತೆಲಂಗಾಣ ಸಿಎಂ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿದ್ದರು.
