ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿರುವ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರು ʼನಾಮ್ ತಮಿಳರ್ ಕಚ್ಚಿʼ ಪಕ್ಷಕ್ಕೆ ಸೇರಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾರಾಣಿ, 2020ರ ಜುಲೈನಲ್ಲಿ ಬಿಜೆಪಿಗೆ ಸೇರಿದ್ದರು. ಅದರ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಆದರೆ, ಇತ್ತೀಚೆಗೆ ಬಿಜೆಪಿಯನ್ನು ತೊರೆದು ನಟ-ನಿರ್ದೇಶಕ ಸೀಮನ್ ನೇತೃತ್ವದ ಎನ್ಟಿಕೆಗೆ ಸೇರಿದ್ದಾರೆ. ಆದಿವಾಸಿಗಳು ಮತ್ತು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಚೆನ್ನೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸೀಮನ್, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲ 40 ಅಭ್ಯರ್ಥಿಗಳನ್ನು ಪರಿಚಯಿಸಿದ್ದಾರೆ. “ವಿದ್ಯಾರಾಣಿ ಕೃಷ್ಣಗಿರಿಯಿಂದ ಎನ್ಟಿಕೆ ಅಭ್ಯರ್ಥಿಯಾಗಲಿದ್ದಾರೆ” ಎಂದು ಘೋಷಿಸಿದ್ದಾರೆ. “ಪಕ್ಷದ 40 ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಮಹಿಳೆಯರಾಗಿದ್ದಾರೆ. ಪಕ್ಷವು ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಅವರ ಸಿದ್ದಾಂತವನ್ನು ಅನುಸರಿಸುತ್ತಿದೆ” ಎಂದಿದ್ದಾರೆ.
ಎನ್ಟಿಕೆ ಪಕ್ಷವು 2016ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿತ್ತು ಮತ್ತು ಕೇವಲ 1.1% ಮತಗಳನ್ನು ಪಡೆದಿತ್ತು. 2019ರ ಲೋಕಸಭಾ ಚುನಾವಣೆ ವೇಳೆಗೆ ಸುಮಾರು 4% ಮತಗಳನ್ನು ಗಳಿಸುವ ಮಟ್ಟಕ್ಕೆ ಬೆಳೆಯಿತು. 2021ರ ವಿಧಾನಸಭಾ ಚುನಾವಣೆಯಲ್ಲಿ 6.7% ಮತ ಪಡೆದು, ಮತ ಹಂಚಿಕೆಯ ದೃಷ್ಟಿಯಿಂದ ತಮಿಳುನಾಡಿನ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ʼಸ್ವಜನಪಕ್ಷಪಾತʼದ ಆರೋಪ; ಬಿಜೆಪಿ ವಿರುದ್ಧ ಉದಯನಿಧಿ ವಾಗ್ದಾಳಿ
2004ರ ಅಕ್ಟೋಬರ್ 18ರಂದು ತಮಿಳುನಾಡು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಎನ್ಕೌಂಟರ್ನಲ್ಲಿ ಕಾಡುಗಳ್ಳ ವೀರಪ್ಪನ್ ಮೃತಪಟ್ಟಿದ್ದ. ಆತ ಆನೆಗಳನ್ನು ಬೇಟೆಯಾಡುವುದು, ಶ್ರೀಗಂಧದ ಮರಗಳನ್ನು ಕಳ್ಳಸಾಗಣೆ ಮಾಡುವ ದಂಧೆಯಲ್ಲಿ ತೊಡಗಿದ್ದ. ಕನ್ನಡದ ಮೇರುನಟ ರಾಜ್ ಕುಮಾರ್ ಮತ್ತು ಮಾಜಿ ಸಚಿವ ನಾಗಪ್ಪ ಅವರಂತಹ ಉನ್ನತ ವ್ಯಕ್ತಿಗಳನ್ನು ಅಪಹರಿಸಿದ್ದ ವೀರಪ್ಪನ್, ಪೊಲೀಸರು ಹಾಗೂ ಇತರರನ್ನು ಕೊಲ್ಲುವ ಮೂಲಕ ಕುಖ್ಯಾತಿ ಪಡೆದಿದ್ದ.