ಆಗಸ್ಟ್‌ನಲ್ಲಿ ಸಂಪುಟ ಪುನಾರಚನೆ; ಹೈಕಮಾಂಡ್‌ ಮುಂದೆ ನಾಲ್ಕರಿಂದ ಆರು ಸಚಿವರ ಕೈಬಿಡುವ ಯೋಚನೆ!

Date:

Advertisements

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ದೆಹಲಿಗೆ ತೆರಳುತ್ತಿರುವ ಬೆನ್ನಲ್ಲೇ ರಾಜ್ಯದ ಕೆಲವು ಹಿರಿಯ ನಾಯಕರಿಗೆ ಹೈಕಮಾಂಡ್ ಬುಲಾವ್‌ ನೀಡಿರುವುದು ತಿಳಿದುಬಂದಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ನಡೆಸುತ್ತಿರುವ ಮಾತುಕತೆ ಸಾಕಷ್ಟು ಮಹತ್ವ ಪಡೆದಿದೆ. ಉಭಯ ನಾಯಕರ ಭೇಟಿಯಲ್ಲಿ ಸಂಪುಟ ಪುನಾರಚನೆ, ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಚರ್ಚೆಯಾಗುವ ಸಾಧ್ಯತೆ ಹೆಚ್ಚಿದೆ.

ಸಂಪುಟ ಪುನಾರಚನೆ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಒಂದು ಸ್ಥಾನ ಖಾಲಿ ಇದ್ದು, ಇದನ್ನು ಭರ್ತಿ ಮಾಡಬೇಕಾ ಅಥವಾ ಕೆಲವರನ್ನು ಸಂಪುಟದಿಂದ ಹೊರಗಿಟ್ಟು, ಬೇರೆಯವರಿಗೆ ಅವಕಾಶ ಕಲ್ಪಿಸಬೇಕಾ? ಎಂಬ ಬಗ್ಗೆಯೂ ಚರ್ಚೆ ನಡೆಯಬಹುದು.

Advertisements

ಸಂಪುಟ ಪುನಾರಚನೆಗೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಸಂಪುಟದಿಂದ ಹೊರಗಿರುವ ಹಿರಿಯ ನಾಯಕರಾದ ಬಿ ಕೆ ಹರಿಪ್ರಸಾದ್, ತನ್ವೀರ್ ಸೇಠ್ ಹಾಗೂ ಎಸ್ ಆರ್ ಪಾಟೀಲ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳುತ್ತಿದೆ. ಈ ಪೈಕಿ ಬಿ ಕೆ ಹರಿಪ್ರಸಾದ್ ಅವರು ದೆಹಲಿಗೆ ತೆರಳುತ್ತಿರುವುದು ಅಧಿಕೃತವಾಗಿದೆ. ಮಂಗಳವಾರ ಸಂಜೆಯೇ ದೆಹಲಿಯತ್ತ ಹರಿಪ್ರಸಾದ್ ಪ್ರಯಾಣ ಬೆಳೆಸಲಿದ್ದಾರೆ. ನಾಲ್ಕು ದಿನ ದೆಹಲಿಯಲ್ಲೇ‌ ‌ಹರಿಪ್ರಸಾದ್ ಇರಲಿದ್ದು, ಸಚಿವ ಸ್ಥಾನದ ಅವಕಾಶ ಅವರಿಗೆ ಒಲಿಯಬಹುದು ಎನ್ನಲಾಗಿದೆ.

ಈ ದಿನ.ಕಾಮ್‌ ಜೊತೆ ಮಾತನಾಡಿದ ಹರಿಪ್ರಸಾದ್‌ ಆಪ್ತರು, “ಸ್ವತಃ ಸೋನಿಯಾ ಗಾಂಧಿ ಅವರೇ ಹರಿಪ್ರಸಾದ್‌ ಅವರನ್ನು ಕರೆಯಿಸಿಕೊಳ್ಳುತ್ತಿದ್ದಾರೆ. ಹಿಂದೆ ಸಂಪುಟ ಪಟ್ಟಿ ತಮ್ಮ ಗಮನಕ್ಕೆ ಬಾರದೇ ಅಂತಿಮಗೊಂಡಿತ್ತು ಎಂದು ಹೇಳಿದ್ದರು. ಆಗಿರುವ ಅನ್ಯಾಯವನ್ನು ಮುಂದೆ ಸರಿಪಡಿಸುತ್ತೇವೆ ಎಂದು ಸೋನಿಯಾ ಗಾಂಧಿ ಹರಿಪ್ರಸಾದ್‌ ಅವರಿಗೆ ಭರವಸೆ ನೀಡಿದ್ದರು. ಹೀಗಾಗಿ ಹರಿಪ್ರಸಾದ್‌ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ” ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ರಚನೆಯಾದ ವೇಳೆ‌ ಸಚಿವ ಸ್ಥಾನ ಕೈತಪ್ಪಿದ್ದರಿಂದ ಬಿ ಕೆ ಹರಿಪ್ರಸಾದ್‌ ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಬೇಸರ ಹೊರಹಾಕಿದ್ದರು. ಮೂಲ ಕಾಂಗ್ರೆಸ್ಸಿಗರನ್ನು ಸಿದ್ದರಾಮಯ್ಯ ಸೈಡ್‌ಲೈನ್‌ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಆಳದೊಳಗೆ ಹರಿಪ್ರಸಾದ್‌ ವಿರುದ್ಧ ಅಸಮಾಧಾನ ಹೊಂದಿರುವ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟಕ್ಕೆ ಹರಿಪ್ರಸಾದ್‌ ಅವರನ್ನು ಬರಮಾಡಿಕೊಳ್ಳುತ್ತಾರಾ ಎನ್ನುವುದೂ ಕೂಡ ಪ್ರಶ್ನೆಯಾಗಿದೆ.

ಮಾಜಿ ಸಚಿವ ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ಜೊತೆ ರಾಜಕೀಯ ಸಂಘರ್ಷ ಇಟ್ಟುಕೊಂಡ ಕಾರಣ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ ಎಂಬ ಮಾತುಗಳು ಕಾಂಗ್ರೆಸ್‌ ಪಡಸಾಲೆಯಲ್ಲಿವೆ. ಇವರಿಗೂ ಅವಕಾಶ ಸಿಗುತ್ತಾ ಕಾದುನೋಡಬೇಕು. ಹಾಗೆಯೇ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ವಿಧಾನ‌ ಪರಿಷತ್ ಆಯ್ಕೆಯಲ್ಲಿಯೂ ಅವರಿಗೆ ಅವಕಾಶ ವಂಚಿಸಲಾಗಿದೆ. ಈ ಎಲ್ಲ ವಿಚಾರಗಳಿಗೆ ಮುನಿಸಿಕೊಂಡಿರುವ ಎಸ್‌ ಆರ್‌ ಪಾಟೀಲ್‌ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಕೊನೆಗೂ ಅವರು ಕಾಂಗ್ರೆಸ್‌ನಲ್ಲೇ ಉಳಿದಿದ್ದು, ಅವರಿಗೂ ಸಚಿವ ಸ್ಥಾನದ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್‌ ಹೈಕಮಾಂಡ್‌ ಈ ಮೂವರು ನಾಯಕರನ್ನು ವಿಶೇಷವಾಗಿ ಪರಿಗಣಿಸಿದೆ ಎನ್ನಲಾಗಿದೆ.

ನಾಲ್ಕರಿಂದ ಆರು ಸಚಿವರ ಕೈಬಿಡುವ ಯೋಚನೆ

ಪಕ್ಷದೊಳಗೆ ಕೆಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಇರಾದೆಯಿಂದ ಹಾಲಿ ಸಚಿವರಾಗಿ ವಿಫಲರಾಗಿರುವ ನಾಲ್ಕರಿಂದ ಆರು ಮಂದಿ ಸಚಿವರನ್ನು ಕೈಬಿಟ್ಟು, ಅನುಭವಿಗಳು ಮತ್ತು ಪಕ್ಷನಿಷ್ಠರಿಗೆ ಅವಕಾಶ ನೀಡುವ ಯೋಚನೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿದೆ.

ಮೂಲಗಳ ಪ್ರಕಾರ ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪುರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ಮಧು ಬಂಗಾರಪ್ಪ, ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌, ಹಿಂದುಳಿದ ವರ್ಗಗಳ ಮತ್ತು ಎಸ್‍ಟಿ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವ ಎಂ ಸಿ ಸುಧಾಕರ್‌ ಅವರನ್ನು ಕೈಬಿಡುವ ಯೋಚನೆ ಇದೆ ಎಂದು ಮೂಲಗಳು ಹೇಳಿವೆ.

ಸಭಾಧ್ಯಕ್ಷ ಯು ಟಿ ಖಾದರ್‌ ಅವರಿಗೆ ಸಚಿವ ಸ್ಥಾನ ಸಿಗುವ ಮಾತುಗಳು ಕೂಡ ಕೇಳಿಬರುತ್ತಿದ್ದು, ಸ್ಥಾನ ಪಲ್ಲಟವಾಗಿ ದಿನೇಶ್‌ ಗುಂಡೂರಾವ್‌ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಿ, ಆರೋಗ್ಯ ಇಲಾಖೆ ಖಾತೆಯನ್ನು ಯು ಟಿ ಖಾದರ್‌ ಅವರಿಗೆ ನೀಡಬಹುದು ಎನ್ನಲಾಗಿದೆ.

ಇದರ ಹೊರತಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆಯೂ ಚರ್ಚೆ ನಡೆಯಬಹುದು. ಸಿದ್ದರಾಮಯ್ಯ ಆಪ್ತರೇ ಈ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಹೈಕಮಾಂಡ್‌ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾದರೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯಬಹುದು. ಇಲ್ಲವೇ ಶರಣಪ್ರಕಾಶ್ ಪಾಟೀಲ್ ಹೆಸರು ಕೂಡ ಚಾಲ್ತಿಯಲ್ಲಿದೆ. ಈ ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಪ್ತರು ಎಂಬುದು ಗಮನಾರ್ಹ.

ಸಿಎಂ ಸಿದ್ದರಾಮಯ್ಯ ಅವರು ಇವತ್ತೇ ಮರಳಿ ಬೆಂಗಳೂರಿಗೆ ಬರುವುದರಿಂದ ಇಷ್ಟೆಲ್ಲಾ ಬೆಳವಣಿಗೆಗಳು ಇವತ್ತಿನ ಚರ್ಚೆಯಲ್ಲೇ ನಡೆಯುತ್ತಾ? ಅಥವಾ ಇವತ್ತಿನ ಚರ್ಚೆ ಎಲ್ಲ ಚರ್ಚೆಗಳಿಗೂ ಮುನ್ನುಡಿ ಬರೆಯುತ್ತಾ ಕಾದು ನೋಡಬೇಕು. ಒಟ್ಟಾರೆ ಆಗಸ್ಟ್‌ ತಿಂಗಳಲ್ಲಿ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X