ಲೋಕಸಭಾ ಚುನಾವಣೆಯ ನಂತರ ಕೈಗಾರಿಕೋದ್ಯಮಿಗಳ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಕೇಳುವ ಪ್ರಶ್ನೆಗಳ ಬಗೆಗಿನ ವಿಚಾರವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲು ಪ್ರಧಾನಿ ಮೋದಿ, ‘ದೇವರು ನನ್ನನ್ನು ಕಳುಹಿಸಿದ್ದಾನೆ’ ಎಂಬ ಹೇಳಿಕೆ ನೀಡಿದ್ದಾರೆ ಎಂದು ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮೋದಿ, “ನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ನಂಬುತ್ತಿದ್ದೆ. ಅವಳು ತೀರಿಕೊಂಡ ನಂತರ, ನನ್ನ ಎಲ್ಲ ಅನುಭವಗಳನ್ನು ಗಮನಿಸಿದಾಗ, ‘ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ’ ಎಂಬುದು ನನಗೆ ಮನವರಿಕೆಯಾಯಿತು. ಅದಕ್ಕಾಗಿಯೇ ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, “ಅವರು (ಮೋದಿ) ಈ ದೇವರ ಕಥೆಯನ್ನು ಏಕೆ ತಂದರು ಎಂಬುದು ನಿಮಗೆ ತಿಳಿದಿದೆಯೇ? ಏಕೆಂದರೆ, ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿಯವರಿಗೆ ಕೈಗಾರಿಕೋದ್ಯಮಿಗಳ ಬಗ್ಗೆ ಇಡಿ ಪ್ರಶ್ನೆಗಳನ್ನು ಕೇಳಬಹುದು ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ಮೋದಿ, ‘ನನಗೆ ಗೊತ್ತಿಲ್ಲ, ನನ್ನನ್ನು ‘ಪರಮಾತ್ಮ’ ಕಳುಹಿಸಿದ್ದಾನೆ’ ಎಂದಿದ್ದಾರೆ. ಇದು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯತ್ನ” ಎಂದು ಆರೋಪಿಸಿದ್ದಾರೆ.
“ಇಂತಹ ಭಾಷಣಗಳನ್ನು ನಿಲ್ಲಿಸಿ. ಮೊದಲು, ಕಳೆದ ಹತ್ತು ವರ್ಷಗಳಲ್ಲಿ ಬಿಹಾರ ಮತ್ತು ದೇಶದ ಜನರಿಗೆ ನೀವು (ಮೋದಿ) ಎಷ್ಟು ಉದ್ಯೋಗಗಳನ್ನು ಒದಗಿಸಿದ್ದೀರಿ ಎಂಬುದರ ಬಗ್ಗೆ ಮಾತನಾಡಿ” ಎಂದು ರಾಹುಲ್ ಹೇಳಿದ್ದಾರೆ.
“ನರೇಂದ್ರ ಮೋದಿ ಮುಂದಿನ ಅವಧಿಗೆ ಪ್ರಧಾನಿಯಾಗುವುದಿಲ್ಲ ಎಂಬುದನ್ನು ನೀವು ಗಮನಿಸಬಹುದು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಬಣದ ಪರವಾಗಿ ‘ಅಲೆ’ ಇದೆ” ಎಂದು ಅವರು ಪ್ರತಿಪಾದಿಸಿದರು.
“ಎರಡು ಜಾತಿಗಳು ಮಾತ್ರ ಇವೆ ಎಂದು ಹೇಳಿಕೊಳ್ಳುವ ಪ್ರಧಾನಿ ತನ್ನನ್ನು ತಾನು ಒಬಿಸಿ ಎಂದು ಏಕೆ ಗುರುತಿಸಿಕೊಳ್ಳುತ್ತಾರೆ. ನಾನು ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದಾಗ ಮೋದಿ ಹೇಳಿದರು, ಭಾರತದಲ್ಲಿ ಕೇವಲ ಎರಡು ಜಾತಿಗಳಿವೆ-ಶ್ರೀಮಂತ ಮತ್ತು ಬಡವ. ಕೇವಲ ಎರಡು ಜಾತಿಗಳಿದ್ದರೆ, ಅವರು (ಮೋದಿ) ಹೇಗೆ ಒಬಿಸಿ ಆಗುತ್ತಾರೆ. ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿಯನ್ನು ನಡೆಸುತ್ತದೆ” ಎಂದರು.