ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?

Date:

Advertisements
ಚುನಾವಣಾ ಆಯೋಗದ ಕೆಲಸ ಚುನಾವಣೆ ನಡೆಸುವುದು. ಆ ಕರ್ತವ್ಯವನ್ನೇ ಸರಿದೂಗಿಸಲಾಗದ ಆಯೋಗವು ಓರ್ವ ವ್ಯಕ್ತಿ ಭಾರತದ ಪ್ರಜೆಯೇ ಅಲ್ಲವೇ ಎಂದು ನಿರ್ಧರಿಸುವ ಕಾರ್ಯಕ್ಕೆ ಇಳಿದಂತಿದೆ.

ಬಿಹಾರದಲ್ಲಿ 2025ರ ನವೆಂಬರ್ ಒಳಗಾಗಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲ ಪಕ್ಷಗಳು ಈಗಾಗಲೇ ಸಿದ್ಧತೆಯನ್ನು ಆರಂಭಿಸಿವೆ. ಇಂತಹ ಹೊತ್ತಿನಲ್ಲಿ ಚುನಾವಣಾ ಆಯೋಗವು, ಚುನಾವಣೆಗೂ ಮುನ್ನ ವಿಶೇಷ ತೀವ್ರ ನಿಗಾ ಪರಾಮರ್ಶೆ(SIR) ನಡೆಸಲು ಮುಂದಾಗಿದೆ. ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇವೆಲ್ಲವುದರ ನಡುವೆ “ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ” ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೇಳಿದ್ದಾರೆ. ಸದ್ಯ ಈ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಆರ್‌ಜೆಡಿ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ವಿಶೇಷ ತೀವ್ರ ನಿಗಾ ಪರಾಮರ್ಶೆ ಅಥವಾ SIR ಮಾಡುವುದರಿಂದಾಗಿ ಸಾವಿರಾರು ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ. ಈ ಕ್ರಮ ಸರಿಯಲ್ಲ ಎಂಬುದು ಮಾಜಿ ಚುನಾವಣಾ ಆಯುಕ್ತರು, ವಿಪಕ್ಷಗಳ ವಾದ. ನೈಜವಾಗಿಯೂ ಆಯೋಗವು ಚುನಾವಣೆ ನಡೆಸುವ ಕೆಲಸವನ್ನು ಮಾಡಬೇಕೇ ಹೊರತು ಸರ್ಕಾರದ ಕೆಲಸವನ್ನು ಮಾಡಬಾರದು. ಆದರೆ ಇಂದು ನಡೆಯುತ್ತಿರುವುದೇ ಬೇರೆ.

ಇದನ್ನು ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ಪರಿಶೀಲನೆ: ಕಾಂಗ್ರೆಸ್ ಆಕ್ರೋಶ

ಏನಿದು ವಿಶೇಷ ತೀವ್ರ ಪರಿಷ್ಕರಣೆ?

ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಮತ್ತು ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ನಿಟ್ಟಿನಲ್ಲಿ ಜೂನ್ 24ರಂದು ವಿಶೇಷ ತೀವ್ರ ಪರಿಷ್ಕರಣೆ ಆರಂಭಿಸಲಾಗಿದೆ. ಈ ಹಿಂದೆ 2003ರಲ್ಲಿ ಬಿಹಾರದಲ್ಲಿ ಈ ರೀತಿಯ ಪರಿಷ್ಕರಣೆಯನ್ನು ಮಾಡಲಾಗಿದೆ. ಆಗಾಗ್ಗೆ ವಲಸೆ ಹೋಗುವುದು, ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಸೇರಿಸುವುದು, ಯುವ ನಾಗರಿಕರು ಮತ ಚಲಾಯಿಸಲು ಅರ್ಹರಾಗುವುದು, ಮತಪಟ್ಟಿಯಲ್ಲಿರುವವರು ಸಾವನ್ನಪ್ಪುವುದು – ಹೀಗೆ ಮೊದಲಾದ ಕಾರಣಗಳಿಂದಾಗಿ ಪರಿಷ್ಕರಣೆ ಮಾಡುವುದು ಅಗತ್ಯ ಎಂಬುದು ಚುನಾವಣಾ ಆಯೋಗದ ವಾದ.

ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆ ಸಮೀಕ್ಷೆಯನ್ನು ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಫಾರ್ಮ್‌ಗಳನ್ನು ಭರ್ತಿ ಮಾಡಲು ಸಹಾಯ ಮಾಡುವ ಮತ್ತು ಫಾರ್ಮ್ ಸಂಗ್ರಹಿಸುವ ಕಾರ್ಯವನ್ನು ಈ ಬಿಎಲ್‌ಒಗಳು ಮಾಡುತ್ತಾರೆ. ಭಾನುವಾರದ ವೇಳೆಗೆ, 1,69,49,208 ಫಾರ್ಮ್‌ಗಳನ್ನು ಸ್ವೀಕರಿಸಲಾಗಿದೆ. ಅಂದರೆ ಒಟ್ಟು 7,89,69,844 (ಸುಮಾರು 7.90 ಕೋಟಿ) ಮತದಾರರಲ್ಲಿ ಶೇಕಡ 21.46ರಷ್ಟು ಮತದಾರರಿಂದ ಫಾರ್ಮ್‌ಗಳನ್ನು ಪಡೆಯಲಾಗಿದೆ. ಕಳೆದ 24 ಗಂಟೆಗಳಲ್ಲಿ ಅಂದರೆ ಶನಿವಾರ ಸಂಜೆ ಆರು ಗಂಟೆಯವರೆಗೆ, 65,32,663 ಎಣಿಕೆ ಫಾರ್ಮ್‌ಗಳನ್ನು ಸಂಗ್ರಹಿಸಲಾಗಿದೆ. 7.90 ಕೋಟಿಗೆ ಹೋಲಿಸಿದರೆ ಈವರೆಗೆ ನಡೆದಿರುವುದು ಅತಿ ಕಡಿಮೆ. ಅಪ್ಲಿಕೇಶನ್‌ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಆದರೆ ಎಲ್ಲರಿಗೂ ಆನ್‌ಲೈನ್‌ ಬಳಕೆಯ ಮಾಹಿತಿ ಇರಲಾರದು. ಆದ್ದರಿಂದ ಅರ್ಹರೂ ಮತಚಲಾವಣೆಯ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಇದೆ. ಈ ಎಲ್ಲ ಪ್ರಕ್ರಿಯೆಗೆ ಜುಲೈ 25ರವರೆಗೆ ಅವಕಾಶವಿದೆ.

2003ರಂದು ನಡೆದ ಕೊನೆಯ ತೀವ್ರ ಪರಿಷ್ಕರಣೆಯಲ್ಲಿ ಹೆಸರು ದಾಖಲಾಗದ ಯಾವುದೇ ವ್ಯಕ್ತಿ ಮತದಾನದ ಅರ್ಹತೆಯನ್ನು ಪಡೆಯಲು 11 ದಾಖಲೆಗಳಲ್ಲಿ ಕನಿಷ್ಠ ಒಂದನ್ನು ಸಲ್ಲಿಸಬೇಕಾಗುತ್ತದೆ. 1987 ಮತ್ತು 2004ರ ನಡುವೆ ಜನಿಸಿದವರು ತಮ್ಮ ಇಬ್ಬರು ಪೋಷಕರಲ್ಲಿ ಒಬ್ಬರ ಮತ್ತು 2004ರ ನಂತರ ಜನಿಸಿದವರು ಇಬ್ಬರೂ ಪೋಷಕರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವೂ ಅತಿ ಸಂಕೀರ್ಣ.

ಅಶೋಕ್ ಲವಾಸಾ ಹೇಳುವುದೇನು?

ಚುನಾವಣಾ ಆಯೋಗವು ಮತದಾರರ ಅರ್ಹತೆ ಪರಿಷ್ಕರಣೆ ಮಾಡುತ್ತಿರುವ ನಡುವೆ ಮಾಜಿ ಚುನಾವಣಾ ಆಯುಕ್ತ(ಇಸಿ) ಅಶೋಕ್ ಲವಾಸಾ ಮತದಾರರಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ರಾಹುಲ್ ಗಾಂಧಿ ಆರೋಪಗಳಿಗೆ ಚುನಾವಣಾ ಆಯೋಗ ಉತ್ತರಿಸಬೇಕು: ಪ್ರಶಾಂತ್ ಕಿಶೋರ್

ಜೂನ್ 24ರಂದು ನಿರ್ದೇಶನ ಹೊರಡಿಸಿದ ಇಸಿಐ ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸಿ, “ಮತದಾರರ ಪಟ್ಟಿಯಲ್ಲಿ ಯಾರದೇ ಹೆಸರನ್ನು ನೋಂದಾಯಿಸುವುದಾದರೆ, ಆತ/ಆಕೆ ಭಾರತದ ಪ್ರಜೆಯಾಗಿರಬೇಕು. ಭಾರತದ ನಾಗರಿಕರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಬಾಧ್ಯತೆ ಚುನಾವಣಾ ಆಯೋಗಕ್ಕೆ ಇದೆ” ಎಂದು ಹೇಳಿದೆ.

ಆದರೆ ಚುನಾವಣಾ ಆಯೋಗದ ಈ ಹೇಳಿಕೆಯನ್ನು ಟೀಕಿಸಿರುವ ಮಾಜಿ ಆಯುಕ್ತ ಲವಾಸಾ, “ಪೌರತ್ವ ಕಾಯ್ದೆಯ ಪ್ರಕಾರ ಪೌರತ್ವ ಪ್ರಮಾಣಪತ್ರವನ್ನು ನೀಡುವುದು ರಾಜ್ಯ ಅಥವಾ ಸರ್ಕಾರದ ಜವಾಬ್ದಾರಿ. ಅದು ಇಸಿಐನ ಕೆಲಸವಲ್ಲ. ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಚುನಾವಣೆಯ ಮೇಲ್ವಿಚಾರಣೆ ಮಾಡುವುದು ಮಾತ್ರ ಅದರ ಪಾತ್ರ” ಎಂದಿದ್ದಾರೆ.

ಮತದಾರರ ನೋಂದಣಿಯು ಕಳೆದ ಏಳು ದಶಕಗಳಿಂದ ನಡೆಯುತ್ತಿತ್ತು. ಈ ಪ್ರಕ್ರಿಯೆಯು ನಿಯಮಕ್ಕೆ ವಿರುದ್ಧವಾಗಿದ್ದು ಎಂದು ಯಾರೂ ಹೇಳಿಲ್ಲ. ಚುನಾವಣಾ ಆಯೋಗವೂ ಹೇಳಿಲ್ಲ. ಆದ್ದರಿಂದ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸುವುದು ಅಥವಾ ಅನ್ವಯಿಸುವುದು ಸಮಂಜಸವಲ್ಲ ಎಂದು ಅಶೋಕ್ ಲವಾಸಾ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ಚುನಾವಣಾ ಆಯೋಗ ಯಾರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಶ್ನೆಗಳನ್ನೂ ವಿಪಕ್ಷಗಳು ಎತ್ತಿವೆ. ಆ ಪ್ರಶ್ನೆ ಹುಟ್ಟುವುದು ಸಹಜ. ಚುನಾವಣಾ ಆಯೋಗದ ಕೆಲಸ ಚುನಾವಣೆ ನಡೆಸುವುದು. ಆ ಕರ್ತವ್ಯವನ್ನೇ ಸರಿದೂಗಿಸಲಾಗದ ಆಯೋಗವು ಓರ್ವ ವ್ಯಕ್ತಿ ಭಾರತದ ಪ್ರಜೆಯೇ ಅಲ್ಲವೇ ಎಂದು ನಿರ್ಧರಿಸುವ ಕಾರ್ಯಕ್ಕೆ ಇಳಿದಂತಿದೆ.

ಈ ಒಂದು ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಜನರು ಮತದಾನದಿಂದ ಹೊರಗುಳಿಯಬಹುದು ಎಂಬುದು ಹಿರಿಯ ವಕೀಲರುಗಳಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ. ಸದ್ಯ ಈ ಪ್ರಕ್ರಿಯೆ ವಿರುದ್ಧ ಸಲ್ಲಿಕೆಯಾದ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಜುಲೈ 10ರಂದು ವಿಚಾರಣೆ ನಡೆಸಲಿದೆ. ಸದ್ಯ ಚಿತ್ತ ಸುಪ್ರೀಂನ ತೀರ್ಪಿನ ಮೇಲೆ ನೆಟ್ಟಿದೆ.

ಮಯೂರಿ ಬೋಳಾರ್
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

Download Eedina App Android / iOS

X