ಸಂಸತ್ತಿನಲ್ಲಿ ಕಮಾಲ್‌ ಮಾಡಲಿದೆಯಾ ಅಣ್ಣ-ತಂಗಿ ಜೋಡಿ?; ದೇಶವಾಸಿಗಳ ಹೃದಯದಲ್ಲಿ ಪ್ರೀತಿಯ ಅಂಗಡಿ ತೆರೆದವರಿವರು…

Date:

Advertisements
ಸಂಸತ್ತಿನಲ್ಲಿ ಮೋಶಾ ಜೋಡಿಯನ್ನು ಖಂಡಿತವಾಗಿಯೂ ಪತರಗುಟ್ಟುವಂತೆ ಮಾಡಲಿದ್ದಾರೆ ರಾಹುಲ್‌, ರಾವಣ್‌, ಅಖಿಲೇಶ್‌ ಯಾದವ್‌, ಮಹುವಾ ಮೊಯಿತ್ರಾ ಮುಂತಾದ ಬಿಸಿರಕ್ತದ ಯುವ ಪಡೆ. ಇನ್ನಾರು ತಿಂಗಳಲ್ಲಿ ಪ್ರಿಯಾಂಕಾರನ್ನು ಸಂಸತ್ತಿನಲ್ಲಿ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

 


ದ್ವೇಷದ
ಅರಮನೆಯ ಮಾಲೀಕರ ಮುಂದೆ ಪ್ರೀತಿಯ ಅಂಗಡಿಯ ಮಾಲೀಕರು ಎದುರುಬದುರಾಗುವ ಕಾಲ ಹತ್ತಿರ ಬಂದಂತಿದೆ. ಹತ್ತು ವರ್ಷಗಳಿಂದ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಮೆರೆಯುತ್ತಿದ್ದ ಸಂಸತ್ತಿನಲ್ಲೂ, ಹೊರಗೆಯೂ ರಾಹುಲ್‌ ಗಾಂಧಿ, ಗಾಂಧಿ ಪರಿವಾರವನ್ನು ದ್ವೇಷಿಸುತ್ತಾ, ಗೇಲಿ ಮಾಡುತ್ತಾ, ತಮ್ಮ ಭಕ್ತರನ್ನು ಮೆಚ್ಚಿಸಲು ಮೋದಿ-ಅಮಿತ್‌ ಶಾ ಹರಸಾಹಸ ಪಡುತ್ತಿದ್ದರು. ಅದು ಅತಿರೇಕಕ್ಕೆ ಹೋಗಿ ಈ ಚುನಾವಣೆಯ ನಂತರ ರಾಹುಲ್‌ ಗಾಂಧಿ ವಿದೇಶಕ್ಕೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಆದರೆ ತಾನು ಬಗೆದದ್ದು ಎಲ್ಲಾ ಕಾಲಕ್ಕೂ ನಿಜವಾಗಲ್ಲ ಎಂಬ ಪಾಠವನ್ನು ಈ ಚುನಾವಣೆಯಲ್ಲಿ ದೇಶದ ಜನ ಮತದಾನದ ಮೂಲಕ ತೋರಿಸಿಕೊಟ್ಟಿದ್ದಾರೆ. ಈಗ ರಾಹುಲ್‌ ವಿದೇಶಕ್ಕೆ ಹೋಗುವ ಬದಲು ಅಜ್ಜಿ ಇಂದಿರಾಗಾಂಧಿಯವರ ಪ್ರತಿರೂಪದಂತಿರುವ ತಂಗಿಯ ಕೈ ಹಿಡಿದು ಸಂಸತ್ತಿಗೆ ಪ್ರವೇಶಿಸುವ ಆ ಘಳಿಗೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Priyanka Gandhi Im Indira Gandhis

ರಾಹುಲ್‌ ಗಾಂಧಿ ಬಿಟ್ಟುಕೊಟ್ಟ ವಯನಾಡು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕಾ ಮಣಿಸಲು ಬಿಜೆಪಿಯಿಂದ ಸ್ಮೃತಿ ಇರಾನಿಯನ್ನು ಕಣಕ್ಕಿಳಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಿಂದೆ ಬಳ್ಳಾರಿಯಿಂದ ಸೋನಿಯಾ ಗಾಂಧಿ ಅವರ ಪ್ರತಿಸ್ಪರ್ಧಿಯಾಗಿ ಸುಷ್ಮಾ ಸ್ವರಾಜ್‌ ಸ್ಪರ್ಧಿಸಿದ್ದರು.

ಅಣ್ಣತಂಗಿಯ ನಡುವಣ ಬಾಂಧವ್ಯವನ್ನು ರಾಹುಲ್‌ ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗಿದ್ದರು. ಈಗಲೂ ತಂಗಿಯನ್ನು ಕಂಡ ತಕ್ಷಣ ಮುದ್ದಾಡುವ ರಾಹುಲ್‌ ಸಾಮಾನ್ಯ ಮನುಷ್ಯನ ಸಹಜ ಭಾವನೆಯ ಪ್ರತಿರೂಪವಾಗಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಅಣ್ಣ ರಾಹುಲ್‌ರ ಸಾಮರ್ಥ್ಯವನ್ನು ಪ್ರಿಯಾಂಕಾ ಜನರ ಮುಂದೆ ತೆರೆದಿಡುತ್ತಲೇ ಬಂದಿದ್ದಾರೆ. ಸಹೋದರನನ್ನು ದಡ್ಡ ಎಂದು ಬಿಂಬಿಸಲಿ ಬಿಜೆಪಿ ಕೋಟ್ಯಂತರ ಹಣ ವ್ಯಯ ಮಾಡಿದೆ ಎಂಬ ಆರೋಪವನ್ನು ಪ್ರಿಯಾಂಕಾ ಮಾಡಿದ್ದರು.

ರಾಹುಲ್‌- ಪ್ರಿಯಾಂಕಾ ಇಬ್ಬರೂ ಬಾಲ್ಯದಲ್ಲಿ ಅಜ್ಜಿ, ಅಪ್ಪನ ಹತ್ಯೆ, ರಕ್ತಪಾತ ಕಂಡವರು. ತಮ್ಮ ಕುಟುಂಬ ಆಘಾತದಿಂದ ಹೊರಬರುತ್ತಿದ್ದಂತೆ ವೈಯಕ್ತಿಕ ಟೀಕೆಗಳನ್ನು ಎದುರಿಸಬೇಕಾಯ್ತು. ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಗೆಲುವಿನ ದಡ ಸೇರಿಸಿದ್ದ ತಾಯಿ ಸೋನಿಯಾರನ್ನು ಬಿಜೆಪಿ ಭಕ್ತಪಡೆ ಹೀನಾಮಾನ ಟ್ರೋಲ್‌ ಮಾಡಿದಾಗಲೂ ಸಂಯಮದಿಂದ ಇದ್ದು ಈ ಅಣ್ಣ ತಂಗಿ ಮಾದರಿಯಾಗಿದ್ದಾರೆ. ಎಂತಹ ಆರೋಪ ಬಂದಾಗಲೂ ವಿಚಲಿತರಾಗದ ಕುಟುಂಬವದು.

ಬಿಜೆಪಿಯ ಅಗ್ರಗಣ್ಯ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನವರೆಗೆ ತಾಯಿ ಸೋನಿಯಾರನ್ನು ವ್ಯಂಗ್ಯವಾಡಿದವರೇ ಹೆಚ್ಚು. ಈಗಲೂ ಆಕೆಯನ್ನು ಇಟಲಿಯವರು ಅಂತಾರೆ. ಅರ್ಧ ಶತಮಾನದಿಂದ ಭಾರತದಲ್ಲಿ ನೆಲೆಸಿ ಸಕ್ರಿಯ ರಾಜಕಾರಣಿಯಾಗಿದ್ದರೂ ಆಕೆಯನ್ನು ಭಾರತೀಯಳು ಎಂದು ಒಪ್ಪುತ್ತಿಲ್ಲ ಮೋದಿ ಭಕ್ತಪಡೆ. ಈ ಕುಟುಂಬವನ್ನು ಲೂಟಿ ಕೋರರು ಎಂಬ ಪಟ್ಟ ಕಟ್ಟಿದಾಗಲೂ ಸಿಟ್ಟಾಗಲಿಲ್ಲ. ಎರಡೆರಡು ಆಘಾತ ಕಂಡ ಈ ಮಕ್ಕಳು ತಮ್ಮ ಪಾಡಿಗೆ ತಾವು ವಿದೇಶದಲ್ಲಿ ಬದುಕು ಕಳೆಯಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಅವರಲ್ಲಿರುವ ದೇಶಪ್ರೇಮ, ಬಡವರ ಮೇಲಿನ ಕಾಳಜಿ, ಎಲ್ಲರನ್ನೂ ಪ್ರೀತಿಯಿಂದ ಅಪ್ಪುವ ಅವರ ಕಕ್ಕುಲಾತಿಗೆ ಮಾರು ಹೋಗದಿರಲು ಸಾಧ್ಯವೇ?

ಅಪ್ಪುಗೆ
ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದ ಜೊತೆ ರಾಹುಲ್‌, ಪ್ರಿಯಾಂಕಾ

ಎರಡು ಹಂತದಲ್ಲಿ ರಾಹುಲ್‌ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಅಸಹಾಯಕ ಜನ ರಾಹುಲ್‌ನಲ್ಲಿ ತಮ್ಮನ್ನು ಸಂತೈಸುವ ಸಹೋದರನನ್ನು ಕಂಡಿದ್ದಾರೆ. ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ರಾಹುಲ್‌ನ ಬಿಸಿಯಪ್ಪುಗೆಯಲ್ಲಿ ದೇಶವೇ ಬೆಚ್ಚನೆ ಭಾವ ಅನುಭವಿಸಿದೆಯೇನೋ ಎಂಬಂತೆ ರಾಹುಲ್‌ಗೆ ಭರ್ಜರಿ ಬೆಂಬಲ ವ್ಯಕ್ತವಾಗಿತ್ತು. ಅದೀಗ ಚುನಾವಣೆಯಲ್ಲಿ ಪ್ರತಿಫಲಿಸಿದೆ. ಭರವಸೆಯ ನಾಯಕನೊಬ್ಬ ಸತತ ಹತ್ತು ವರ್ಷಗಳ ಹೋರಾಟದ ಮೂಲಕ ಉದಯಿಸಿದ್ದಾನೆ. ಆ ಹೋರಾಟ, ವಿಜಯದಲ್ಲಿ ಈ ಮುದ್ದಿನ ತಂಗಿಯ ಪಾತ್ರವೂ ಇದೆ. ಅಣ್ಣನನ್ನು ಅಪ್ಪನಂತೆ ಬೆನ್ನಿಗೆ ನಿಂತು ಕಾಪಾಡಿದ್ದಾರೆ ಪ್ರಿಯಾಂಕಾ. ನಿಮ್ಮ ಯಾವ ಗೊಡ್ಡು ಬೆದರಿಕೆಗಳಿಗೆ ನನ್ನಣ್ಣ ಅಂಜಲ್ಲ. ನಮ್ಮ ರಕ್ತದಲ್ಲೇ ದೇಶಪ್ರೇಮವಿದೆ. ನಮ್ಮ ಕುಟುಂಬದವರು ಈ ದೇಶಕ್ಕಾಗಿ ಬಲಿಯಾಗಿದ್ದಾರೆ ಎಂದು ಮೋದಿ ಅಮಿತ್‌ ಶಾಗೆ ಖಡಕ್‌ ಸಂದೇಶ ನೀಡಿದ್ದರು.‌

2014ರಿಂದಲೂ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಪುನರುಜ್ಜೀವನ ನೀಡುವ ನಿಟ್ಟಿನಲ್ಲಿ ದುಡಿದಿದ್ದಾರೆ. 2019ರ ನಂತರ ಅಣ್ಣ ತಂಗಿ ಜೋಡಿ ದಣಿವರಿಯದೇ, ಸತತ ಸೋಲಿನ ಕಹಿಯ ನಡುವೆಯೂ ದ್ವೇಷದ ಅಂಗಡಿಯ ಮುಂದೆಯೇ ಪ್ರೀತಿಯ ಅಂಗಡಿ ತೆರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಎಷ್ಟೇ ರಾಜ್ಯಗಳ ಚುನಾವಣೆಯಲ್ಲಿ ಸೋತರೂ ಈ ಜೋಡಿ ಧೃತಿಗೆಟ್ಟಿಲ್ಲ.

ಮೋದಿ ಅಮಿತ್‌ ಶಾ ಜೋಡಿ ಎರಡನೇ ಅವಧಿಯಲ್ಲಿ ಈ ಕುಟುಂಬವನ್ನು, ಕಾಂಗ್ರೆಸ್‌ ಪಕ್ಷವನ್ನು ಕಾಡಿದ ಪರಿ ಅಷ್ಟಿಷ್ಟಲ್ಲ. ಕಾಂಗ್ರೆಸ್‌ ಮಾಲೀಕತ್ವದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಹಳೆಯ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಅವರನ್ನು ED ವಿಚಾರಣೆಯ ಹೆಸರಿನಲ್ಲಿ ರಾಜಕೀಯವಾಗಿ ಮಣಿಸಲು ವಿಫಲ ಯತ್ನ ಮಾಡಲಾಯಿತು. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಪ್ರಕರಣದಲ್ಲಿ ಬೆದರಿಸಲಾಯಿತು. ಬಿಜೆಪಿಯ ಈ ದ್ವೇಷ ರಾಜಕಾರಣವೇ ಇಂದು ಈ ಅಣ್ಣ-ತಂಗಿ ಜೋಡಿಯನ್ನು ಹೋರಾಟಗಾರರನ್ನಾಗಿ ರೂಪಿಸಿದೆ. ಯುವಜನರ ಭರವಸೆಯ ಹೊಂಗಿರಣಗಳಾಗಿ ಚಿಮ್ಮುವಂತೆ ಮಾಡಿದೆ.

ಕಾಂಗ್ರೆಸ್‌ ಪಕ್ಷವೇ ಸಂಪೂರ್ಣ ಸಂಕಷ್ಟದಲ್ಲಿದ್ದ ಸಮಯದಲ್ಲಿಯೇ ಪ್ರಿಯಾಂಕಾ ಗಾಂಧಿ ಹೆಚ್ಚು ಆಕ್ಟಿವ್‌ ಆಗಿ ಪಕ್ಷದಲ್ಲಿ ಕಾಣಿಸಿಕೊಂಡರು. ಅಣ್ಣನ ಜೊತೆಗೆ ನಿಂತು ಹೋರಾಟದ ಮೂಲಕವೇ ಇಂದು ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ. ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಚುನಾವಣೆಗೆ ಆರು ತಿಂಗಳಿರುವಾಗ ರಾಹುಲ್‌ ರನ್ನು ಸಂಸದರ ಸ್ಥಾನದಿಂದ ಅನರ್ಹಗೊಳಿಸಿ, ಸಂಸತ್ತಿನಿಂದ ಹೊರ ಹಾಕಿದ್ದಲ್ಲದೇ ತರಾತುರಿಯಲ್ಲಿ ಮನೆಯನ್ನೂ ಖಾಲಿ ಮಾಡಿಸಿ ತಮ್ಮ ದ್ವೇಷದ ಮಟ್ಟವನ್ನು ದೇಶಕ್ಕೆ ತೋರಿಸಿದ್ದರು ಮೋದಿ.

ಇದೀಗ ನಡೆದ ಲೋಕಸಭಾ ಚುನಾವಣೆಯಲ್ಲಿ “ಚಾರ್‌ ಸೌ ಪಾರ್‌” ಎನ್ನುತ್ತಾ, ಬಿಜೆಪಿಗೆ ನಾನೂರುಕ್ಕೂ ಹೆಚ್ಚು ಸೀಟು ಬರುತ್ತದೆ ಎಂದು ಹುಸಿ ಭರವಸೆಯನ್ನು ಬಿತ್ತಿ ಹೇಗಾದರೂ ಮಾಡಿ ಗೆಲ್ಲುವ ಉತ್ಸಾಹದಲ್ಲಿದ್ದ ಜೋಡಿಗೆ ತಲೆಯ ಮೇಲೆ ಆಕಾಶವೇ ಬಿದ್ದಂತಾಗಿದೆ. ಈಗ ಅವರಿರುವುದು ಹಂಗಿನರಮನೆಯಲ್ಲಿ. ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಪಕ್ಷಗಳ ಮೇಲೆ ಮೋದಿಯವರ ಹಂಗಿನರಮನೆ ನಿಂತಿದೆ.

nitish kumar 2

ರಾಹುಲ್ ಉತ್ತರಭಾರತದಿಂದ ಪಲಾಯನ ಮಾಡ್ತಾರೆ. ವಯನಾಡಿಂದ ಮಾತ್ರ ಸ್ಪರ್ಧಿಸ್ತಾರೆ. ಸೋನಿಯಾ ರಾಯಬರೇಲಿ ತೊರೆದಾಗಿದೆ. ಉತ್ತರ ಭಾರತದಿಂದ ಖಾಲಿಯಾಗ್ತದೆ ಕಾಂಗ್ರೆಸ್ ಎಂಬ ಬಿಜೆಪಿ ಕನಸು ಭಗ್ನಗೊಂಡಿದೆ. ರಾಹುಲ್‌ ರಾಯ್‌ ಬರೇಲಿಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದಾಗ ವಯನಾಡಿನಲ್ಲಿ ಸೋಲುವ ಭಯದಿಂದ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಅಂತ ಗೇಲಿ ಮಾಡಿದ್ರು. ಅದಕ್ಕೆ ತಕ್ಕ ಉತ್ತರ ಮತದಾರರು ನೀಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಮೂರ್ನಾಲ್ಕು ಲಕ್ಷ ಮತಗಳ ಅಂತರದಿಂದ ರಾಹುಲ್‌ಗೆ ಆಶೀರ್ವಾದ ಮಾಡಿದ್ದಾರೆ. ಅಷ್ಟೇ ಅಲ್ಲ ಅಮೇಥಿಯಿಂದ ಸ್ಪರ್ಧಿಸಿ ಅಧಿಕಾರದ ಮದದಲ್ಲಿ ತೇಲಾಡುತ್ತಿದ್ದ ಸ್ಮೃತಿ ಇರಾನಿಯನ್ನು ಮನೆಗೆ ಕಳಿಸಿದ್ದಾರೆ. ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಈ ಜೋಡಿ ಬಿರುಸಿನ ಪ್ರಚಾರ ನಡೆಸಿತ್ತು.

ಎಷ್ಟೇ ದ್ವೇಷ ರಾಜಕಾರಣ, ಅವಮಾನ ಮಾಡಿದರೂ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸುವುದನ್ನು ಬಿಟ್ಟಿಲ್ಲ. ಒಂದು ವಿಷಯದ ಮೇಲಿನ ತನ್ನ ನಿಲುವನ್ನು ಎಂದಿಗೂ ಬದಲಿಸಿಲ್ಲ. ಈಗ ವಯನಾಡಿನಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂಬ ಘೋಷಣೆಯೇ ದೇಶದ ಜನರ ಚಿತ್ತ ವಯನಾಡಿನತ್ತ ಸೆಳೆದಿದೆ. ಅಷ್ಟೇ ಅಲ್ಲ ಈ ಅಣ್ಣ ತಂಗಿ ಜೋಡಿಯನ್ನು ಜನ ಈಗಲೇ ಸಂಸತ್ತಿನೊಳಗೆ ಕಲ್ಪಿಸಿಕೊಳ್ಳಲು ಶುರು ಮಾಡಿದ್ದಾರೆ.

priyanka speech

ಸಾರ್ವತ್ರಿಕ ಚುನಾವಣೆಯಲ್ಲಿಯೇ ಪ್ರಿಯಾಂಕಾ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್‌ ನಾಯಕರು ಬಯಸಿದ್ದರೂ ಅವರು ನಿರಾಕರಿಸಿದ್ದರು. ತಾವು ಸ್ಟಾರ್‌ ಪ್ರಚಾರಕರಾಗಿ ದೇಶದೆಲ್ಲೆಡೆ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ ಎಂಬ ಕಾರಣ ನೀಡಿದ್ದರು. ಚುನಾವಣೆಯ ಪ್ರಚಾರ ಸಭೆಗಳ ಉದ್ದಕ್ಕೂ ಬಿಜೆಪಿ, ಮೋದಿಯವರ ಸುಳ್ಳು ಆರೋಪಗಳಿಗೆ ಕೌಂಟರ್‌ ಕೊಡುತ್ತಲೇ ಹೋದರು. ಅಣ್ಣ ತಂಗಿಯ ವಾಗ್ಭಾಣಕ್ಕೆ ಪ್ರತಿಯಾಗಿ ಮೋದಿ ಬತ್ತಳಿಕೆಯಲ್ಲಿ ಯಾವ ಅಸ್ತ್ರವೂ ಇರಲಿಲ್ಲ ಅನ್ಸುತ್ತೆ, ಹಾಗಾಗಿ ಮೋದಿಯವರು ಹಿಂದೂ ಮುಸ್ಲಿಂ ವಿಚಾರಕ್ಕೆ ಜೋತುಬಿದ್ದರು. ಮೋದಿಯವರ ದ್ವೇಷದ, ಉತ್ಪ್ರೇಕ್ಷಿತ ಹೇಳಿಕೆಗಳಿಗೆ ಅಯೋದ್ಯೆಯ ಜನರೇ ವೋಟ್‌ ಹಾಕಲಿಲ್ಲ. ಸ್ಪಷ್ಟ ಬಹುಮತದ ಹತ್ತಿರವೂ ಬಿಜೆಪಿ ಸುಳಿಯಲಿಲ್ಲ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾಯಂದಿರ ಮಾಂಗಲ್ಯವನ್ನೂ ಕಿತ್ತುಕೊಳ್ಳಲಿದೆ ಎಂಬ ಹೇಳಿಕೆಗೆ ಪ್ರತಿಯಾಗಿ ಪ್ರಿಯಾಂಕಾ ಆಡಿದ ಮಾತು ಜನರ ಮನಸ್ಸಿಗೆ ನೇರವಾಗಿ ನಾಟುವಂತಿತ್ತು.”ಈ ದೇಶವನ್ನು 60 ವರ್ಷ ಕಾಂಗ್ರೆಸ್‌ ಆಳಿದೆ. ಯಾರ ಮಾಂಗಲ್ಯವನ್ನೂ ನಾವು ಕಿತ್ತುಕೊಂಡಿಲ್ಲ. ದೇಶಕ್ಕಾಗಿ ನನ್ನ ತಾಯಿ ಸೋನಿಯಾ ತಮ್ಮ ಮಾಂಗಲ್ಯ ತ್ಯಾಗ ಮಾಡಿದ್ದಾರೆ” ಎಂದಿದ್ದರು.

ಅಣ್ಣ ರಾಹುಲ್‌ರನ್ನು ಮೋದಿಯವರು ಶಹಜಾದ್‌(ರಾಜಕುಮಾರ) ಎಂದು ಕರೆದಿದ್ದಕ್ಕೆ, ಮೋದಿಯವರು ಜನರಿಂದ ದೂರವಿರುವ ಶಹನ್‌ ಶಾ, ಅಂದ್ರೆ ರಾಜರ ರಾಜ, “ಚಕ್ರವರ್ತಿ” ಎಂದು ಕುಟುಕಿದ್ರು. ನನ್ನ ಸಹೋದರ ಶಹಜಾದ್‌ ಜನರ ಕಷ್ಟ ಕೇಳಲು, ರೈತರು, ಕಾರ್ಮಿಕರಲ್ಲಿ ಧೈರ್ಯ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ನಾಲ್ಕು ಸಾವಿರ ಕಿಲೋಮೀಟರ್‌ ಪಾದಯಾತ್ರೆ ಮಾಡಿದರು. ಆದರೆ ಶಹನ್‌ ಶಾ ಮೋದಿ ಅರಮನೆಯಲ್ಲಿ ವಾಸ ಮಾಡ್ತಾರೆ. ದೂಳಿನ ಸಣ್ಣ ಕಲೆಯೂ ಇಲ್ಲದ ಶುಭ್ರವಾದ ಬಟ್ಟೆ, ನೀಟಾದ ಕೂದಲು. ಅವರು ಎಂದಾದರೂ ಜನರ ಶ್ರಮದ ದುಡಿಮೆ, ಬೇಸಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಎಂದು ಮಾತಿನ ಚಾಟಿ ಬೀಸಿದ್ರು. ಮೋದಿಯವರ ಒಂದೊಂದು ಹೇಳಿಕೆಗೂ ಒಂದೊಂದು ಬಾಣ ಬಿಡುತ್ತಲೇ ಹೋದ ಪ್ರಿಯಾಂಕಾ ಅವರ ಮಾತಿನ ಶೈಲಿ ದೇಶದ ಬಹುತೇಕರ ಹೃದಯವನ್ನು ಮುಟ್ಟಿದೆ. ಜನರಿಗೆ ಮೋದಿಯವರ ಮಾತಿನ ಪೊಳ್ಳುತನ ಅರ್ಥವಾಗಿದೆ.

ಎನ್‌ಡಿಎ ಸರ್ಕಾರ ರಚನೆಯಾಗುತ್ತಲೇ ಬಿಜೆಪಿ, ಮೋದಿ ಪರಿವಾರದಲ್ಲಿ ಸೂತಕದ ಛಾಯೆ ಕಾಣುತ್ತಿದೆ. ಎಂದಿನ ಸಂಭ್ರಮವಿಲ್ಲ ಎಲ್ಲರ ಮುಖವೂ ಕಳಾಹೀನ. ನಾಯ್ಡು, ನಿತೀಶ್‌, ಸಣ್ಣಪುಟ್ಟ ಪಕ್ಷಗಳ ಮುಂದೆ ಮೋದಿ ಪರಿವಾರ ನಡು ಬಗ್ಗಿಸಿ ನಿಲ್ಲಬೇಕಿದೆ. ಮೂರನೇ ಅವಧಿಯ ನೂರು ದಿನಗಳಲ್ಲಿ ಏನೇನು ಮಾಡಬೇಕು ಎಂದು ಮೋದಿ ಅವರು ಧ್ಯಾನದಿಂದ ಎದ್ದು ಬಂದು ಮೀಟಿಂಗ್‌ ಮೇಲೆ ಮೀಟಿಂಗ್‌ ಮಾಡಿದ್ರು. ವನ್‌ ನೇಷನ್‌ ವನ್‌ ಎಲೆಕ್ಷನ್‌, ಯೂನಿಫಾಮ್‌ ಸಿವಿಲ್ ಕೋಡ್ ಸೇರಿದಂತೆ ಬಿಜೆಪಿ, ಆರೆಸ್ಸಿನ ಅಜೆಂಡವನ್ನು ಮೂರು ತಿಂಗಳಲ್ಲಿ ಮಾಡಿ ಮುಗಿಸುವ ಹುನ್ನಾರಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ. ಈಗ ಮುಸ್ಲಿಮರನ್ನು ದ್ವೇಷಿಸಿದ್ರೆ ನಾಯ್ಡು ಸಿಟ್ಟಾಗುತ್ತಾರೆ. ನಾಯ್ಡು ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಜ್‌ ಯಾತ್ರೆಗೆ ತೆರಳುವವರಿಗೆ ತಲಾ ಒಂದು ಲಕ್ಷ ಸಹಾಯಧನ, ಮುಸ್ಲಿಮರಿಗೆ ಶೇ 4ಮೀಸಲಾತಿ ನೀಡಬೇಕಿದೆ. ಯುಸಿಸಿಯನ್ನು ನಿತೀಶ್‌ ಕುಮಾರ್‌ ಪಕ್ಷ ಬೆಂಬಲಿಸೋದು ಅನುಮಾನ. ಈಗ ಬ್ಯಾಲೆನ್ಸ್‌ ಮಾಡೋದಷ್ಟೇ ಉಳಿದಿರುವ ದಾರಿ.

೪೪೪೪೪
ಅಖಿಲೇಶ್‌ ಯಾದವ್‌, ರಾವಣ್‌, ಮಹುವಾ ಮೊಯಿತ್ರಾ

ಈ ಮಧ್ಯೆ ಸಂಸತ್ತಿನಲ್ಲಿ ಮೋಶಾ ಅವರನ್ನು ಖಂಡಿತವಾಗಿಯೂ ಪತರಗುಟ್ಟುವಂತೆ ಮಾಡಲಿದ್ದಾರೆ ರಾಹುಲ್‌, ರಾವಣ್‌, ಅಖಿಲೇಶ್‌ ಯಾದವ್‌, ಮಹುವಾ ಮೊಯಿತ್ರಾ ಮುಂತಾದ ಬಿಸಿರಕ್ತದ ಯುವ ಪಡೆ. ವಯನಾಡಿನ ಜನ ಪ್ರಿಯಾಂಕಾರನ್ನು ಮನೆ ಮಗಳಂತೆ ಆಧರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇನ್ನಾರು ತಿಂಗಳಲ್ಲಿ ಅವರನ್ನು ಸಂಸತ್ತಿನಲ್ಲಿ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಚಿಕ್ಕಮಗಳೂರಿಂದ ಅಜ್ಜಿ ಇಂದಿರಾಗಾಂಧಿ ಸ್ಪರ್ಧಿಸಿದ್ದರು. ಈಗ ವಯನಾಡಿನಿಂದ ಮೊಮ್ಮಗಳು ಸಂಸತ್ತಿಗೆ ಪ್ರವೇಶಿಸಿದರೆ ಉತ್ತರದಿಂದ ದಕ್ಷಿಣದವರೆಗೆ ಅಣ್ಣ ತಂಗಿಯ ಪ್ರಭಾವ ವಿಸ್ತರಿಸಲಿದೆ. ಅಣ್ಣನಂತೆ ತಂಗಿಯೂ ಸಂಸತ್ತಿನಲ್ಲಿ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡಲಿದ್ದಾರೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಜೂನಿಯರ್‌ ಇಂದಿರಾ ಕಾಂಗ್ರೆಸ್‌ನ ಪ್ರಬಲ ನಾಯಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಸರಳತೆ, ಗೌರವದ ನಡವಳಿಕೆ, ದೇಶದ ಜನರ ಬಗೆಗಿನ ಕಾಳಜಿ ತುಂಬಿದ ಮಾತುಗಳು ಜನರ ಅಂತಃಕರಣವನ್ನು ತಲುಪಿವೆ. ದ್ವೇಷ ರಾಜಕಾರಣವೇ ಮೇಳೈಸುತ್ತಿದ್ದ ಒಂದು ದಶಕದ ದುರಾಡಳಿತಕ್ಕೆ ತಕ್ಕ ಉತ್ತರವನ್ನು ಸಂಸತ್ತಿನಲ್ಲಿ ಪ್ರಿಯಾಂಕಾ ನೀಡುವರೇ, ಅಂತಹ ಅವಕಾಶವನ್ನು ವಯನಾಡಿನ ಜನ ಸಲೀಸಾಗಿ ಕೊಡುವರೇ ಕಾದು ನೋಡಬೇಕಿದೆ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದಲ್ಲಿ ಪ್ರತಿ ಗಂಟೆಗೆ ಓರ್ವ ರೈತ ಆತ್ಮಹತ್ಯೆ: NCRB ವರದಿ

ಭಾರತದಲ್ಲಿನ ಅಪರಾಧ ಪ್ರಕರಣಗಳ ಕುರಿತಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)...

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

Download Eedina App Android / iOS

X