‘ಲೆಹರಾ ದೋ ತಿರಂಗಾ’ ಪ್ರತಿಭಟನೆ ಮತ್ತು ಸಂಬಂಧಿತ ಪ್ರದರ್ಶನಗಳ ಸಂದರ್ಭದಲ್ಲಿ ಅಭಿಜೀತ್ ದೀಪ್ಕೆ, ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಸೇರಿದಂತೆ ಸುಮಾರು 150 ಮಂದಿಯನ್ನು ದೆಹಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕನಾಟ್ ಪ್ಲೇಸ್ ಮತ್ತು ಮಂಡಿಹೌಸ್ ಪ್ರದೇಶಗಳಲ್ಲಿ ಈ ಬೆಳವಣಿಗೆಗಳು ನಡೆದಿವೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ದೀಪ್ಕೆ ಅವರು ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಂಜೆ 5 ಗಂಟೆಗೆ ತಿರಂಗಾ ಹಿಡಿದು ಸೇರಲು ಕರೆ ನೀಡಿದ್ದರು. ಪ್ರತಿಭಟನೆಗೆ ತೆರಳುತ್ತಿದ್ದ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಬಳಿಕ ಜಾಫರ್ಪುರ ಕಲಾನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇದಕ್ಕೂ ಮೊದಲು ಸೆಂಟ್ರಲ್ ಪಾರ್ಕ್ಗೆ ತೆರಳದಂತೆ ಪೊಲೀಸರು ನೋಟಿಸ್ ನೀಡಿದ್ದರು.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಐಸಾ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಮಂಡಿಹೌಸ್ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ. ಕನಾಟ್ ಪ್ಲೇಸ್ಗೆ ಬಂದಿದ್ದ ಪ್ರತಿಭಟನಾಕಾರರನ್ನೂ ಪೊಲೀಸರು ಕರೆದೊಯ್ದರು. ಈ ವೇಳೆ ಪ್ರತಿಭಟನಾಕಾರರು, ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ತಳ್ಳಾಟ ಉಂಟಾಯಿತು. ಬಿಗಿ ಭದ್ರತೆಯ ನಡುವೆಯೂ ನೂರಾರು ಜನರು ರಾಷ್ಟ್ರಧ್ವಜ ಹಿಡಿದು ವಿವಿಧ ಕಡೆಗಳಲ್ಲಿ ಸೇರಿದ್ದರು.
ಸೆಂಟ್ರಲ್ ಪಾರ್ಕ್ ಅನ್ನು ಅಕ್ಟೋಬರ್ 16 ಮತ್ತು 17ರಂದು ಆಡಳಿತಾತ್ಮಕ ಕಾರಣಗಳಿಂದ ಮುಚ್ಚುವುದಾಗಿ ನವದೆಹಲಿ ನಗರಪಾಲಿಕೆ ಮಂಡಳಿ ತಿಳಿಸಿತ್ತು. ಆ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಪೊಲೀಸರು ಪಾರ್ಕ್ ಸುತ್ತ ಮಾನವ ಸರಪಳಿ ನಿರ್ಮಿಸಿ ಪ್ರವೇಶ ನಿರ್ಬಂಧಿಸಿದ್ದರು. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ, ಸಿಸಿಟಿವಿ ನಿಗಾವನ್ನೂ ಹೆಚ್ಚಿಸಲಾಗಿತ್ತು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮಗಳಾಗಿವೆ ಎಂಬ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅನುಮತಿಯಿಲ್ಲದೆ ಜಂತರ್ಮಂತರ್ ಪ್ರವೇಶಿಸಿದ ಆರೋಪದಲ್ಲಿ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ವಶಕ್ಕೆ ಕಳುಹಿಸಿದ್ದನ್ನು ವಿರೋಧಿಸಿ ಈ ತಿರಂಗಾ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಯಾವ ಕಾನೂನನ್ನೂ ಉಲ್ಲಂಘಿಸದ ತನ್ನನ್ನು ಏಕೆ ವಶಕ್ಕೆ ಪಡೆಯಲಾಗುತ್ತಿದೆ ಎಂದು ದೀಪ್ಕೆ ಪ್ರಶ್ನಿಸಿದರು. ರಾಷ್ಟ್ರಧ್ವಜ ಹಾರಿಸುವುದು ಅಪರಾಧವಲ್ಲ ಎಂದು ದೀಪ್ಕೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಸಂಚಾರ ಸುಗಮವಾಗಿಡುವುದು ತಮ್ಮ ಮುಖ್ಯ ಉದ್ದೇಶವೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಲು ಪ್ರಯತ್ನಿಸುವವರನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದೂ ತಿಳಿಸಿದ್ದಾರೆ.





