"ನಮ್ಮಲ್ಲಿ ಕಾಡುಹಂದಿಯ ಹಾವಳಿ ಇದೆ ಎಂದು ಉರುಳು ಹಾಕುತ್ತಾರೆ. ಒಂದು ಹಂದಿ ಹಿಡಿದರೆ ಅರಣ್ಯ ಇಲಾಖೆಯವರು ತಕ್ಷಣ ಬಂದು, ಮಾಲೀಕನ ದಾಖಲೆಗಳನ್ನು ಜಪ್ತಿ ಮಾಡುತ್ತಾರೆ. ಹೀಗಿರುವಾಗ ಧರ್ಮಸ್ಥಳದಲ್ಲಿ ಇಷ್ಟೆಲ್ಲ ಆದದ್ದು ಹೇಗೆ?"
ಬೆಳ್ತಂಗಡಿ ಪೊಲೀಸರ ತನಿಖೆಯಲ್ಲಿ ಒಂದು ಪ್ಯಾಟರ್ನ್ ಕಂಡು ಬರುತ್ತದೆ. ಧರ್ಮಸ್ಥಳದಲ್ಲಿ ವರದಿಯಾಗಿರುವ ಪ್ರಮುಖ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಅದನ್ನು ನೋಡಬಹುದು ಎಂದು ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು (ಮಂಗಳವಾರ) ನಡೆದ ‘ಧರ್ಮಸ್ಥಳ ಸುತ್ತಲಿನ ಅತ್ಯಾಚಾರ/ಹತ್ಯೆ ಪ್ರಕರಣಗಳಲ್ಲಿ ‘ನೊಂದವರೊಂದಿಗೆ ನಾವು – ನೀವು- ಸಾರ್ವಜನಿಕ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೌಜನ್ಯ, ವೇದವಲ್ಲಿ, ಪದ್ಮಲತಾ, ಯಮುನಾ- ನಾರಾಯಣ ಕೇಸ್‌ಗಳಲ್ಲಿ ತಪ್ಪಿತಸ್ಥರು ಏಕೆ ಪತ್ತೆಯಾಗಲಿಲ್ಲ? ಎಲ್ಲ ಕೇಸ್‌ನಲ್ಲೂ ಬೆಳ್ತಂಗಡಿ ಪೊಲೀಸರ ತನಿಖೆಯಲ್ಲಿ ಒಂದು ಪ್ಯಾಟರ್ನ್ ಇದೆ. ಯಾರೋ ಒಬ್ಬನನ್ನು ಆರೋಪಿ ಎಂದು ಕರೆತರುತ್ತಾರೆ. ವೇದವಲ್ಲಿ ಪ್ರಕರಣದಲ್ಲಿ ಆಕೆಯ ಗಂಡನನ್ನೇ ಆರೋಪಿಯನ್ನಾಗಿ ಮಾಡಿದ್ದರು. ಪದ್ಮಲತಾ ಪ್ರಕರಣದಲ್ಲಿ ಯಾರೂ ಪತ್ತೆಯಾಗಲಿಲ್ಲ. ನಾರಾಯಣ- ಯಮುನಾ ಪ್ರಕರಣದಲ್ಲಿಯೂ ಅಪರಾಧಿಗಳು ಸಿಗಲಿಲ್ಲ. ನಾರಾಯಣ- ಯಮುನಾ ಕೇಸ್‌ಗೂ ಸೌಜನ್ಯ ಕೇಸ್‌ಗೂ ಇದ್ದ ಅಂತರ 20 ದಿನ ಮಾತ್ರ. ಅಂದರೆ ಇಪ್ಪತ್ತು ದಿನಗಳಲ್ಲಿ ಮೂರು ಕೊಲೆಗಳಾದವು. ಯಾವುದರಲ್ಲೂ ಅಪರಾಧಿಗಳು ಪತ್ತೆಯಾಗಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
“ಸೌಜನ್ಯ ಪ್ರಕರಣದಲ್ಲಿ ಆರಂಭದ ಎರಡು ದಿನ ತನಿಖೆ ನಡೆಸಿದ ಯೋಗೇಶ್ವರ್ ಅವರೇ ನಾರಾಯಣ- ಯಮುನಾ ಕೇಸ್‌ನಲ್ಲಿ ತನಿಖಾಧಿಕಾರಿಯಾಗಿದ್ದರು. ಜೋಡಿ ಕೊಲೆಯ ತನಿಖೆಗೆ ಶ್ವಾನದಳ, ಬೆರಳಚ್ಚು ತಜ್ಞರು ಬಂದಿದ್ದರು. ಶ್ವಾನ ದಳವು ಯಾವಾಗ ಒಂದು ಮನೆ ಹತ್ತಿರ ಹೋಯಿತೋ ಆಗ ಅದನ್ನು ಹಿಡಿದು ವ್ಯಾನಿಗೆ ಹಾಕಿದರು. ತನಿಖೆ ಮಾಡಲು ಬಿಡಲಿಲ್ಲ. ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಏನೂ ತೆಗೆದುಕೊಳ್ಳಲಿಲ್ಲ. ಸೌಜನ್ಯ ಪ್ರಕರಣದಲ್ಲೂ ಡಾಗ್ ಸ್ಕ್ವಾಡ್, ಫಿಂಗರ್ ಪ್ರಿಂಟ್ ತಜ್ಞರು, ಫುಟ್ ಪ್ರಿಂಟ್ ತಜ್ಞರು ಬಂದಿದ್ದರು. ಆದರೆ ಅವರನ್ನು ಸ್ಥಳಕ್ಕೆ ಕರೆದೊಯ್ಯಲೇ ಇಲ್ಲ” ಎಂದು ಪೊಲೀಸರ ತನಿಖಾ ಪ್ಯಾಟರ್ನ್ ತೆರೆದಿಟ್ಟರು.
ಇದನ್ನೂ ಓದಿರಿ: ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಪೀಕಲಾಟ!
“ಸೌಜನ್ಯ ಪ್ರಕರಣದಲ್ಲಿ ಸಿಲುಕಲ್ಪಟ್ಟ ಸಂತೋಷ್ ರಾವ್ ಮೇಲೆ ಈವರೆಗೆ ಯಾವೊಂದು ಪ್ರಕರಣ ಇರಲಿಲ್ಲ. ಆತನೇ ಅಪರಾಧಿ ಎನ್ನಲು ಯಾವ ದಾಖಲೆಯೂ ಇಲ್ಲ. ಖಚಿತವಾಗಿ ಆತ ನಿರಪರಾಧಿ ಎಂದು ಕೋರ್ಟ್ ಹೇಳಿದೆ. ಸೌಜನ್ಯ ಪ್ರಕರಣವನ್ನು ಸಿಐಡಿಯಿಂದ ಸಿಬಿಐ ತನಿಖೆಗೆ ವರ್ಗಾಯಿಸಲು 35- 40 ದಿನ ತೆಗೆದುಕೊಂಡಿತು. ಇಷ್ಟು ಕಡಿಮೆ ಅವಧಿಯಲ್ಲಿ ಐವರು ಸಾಕ್ಷಿಗಳು ಸಾವಿಗೀಡಾದರು. ಇದೆಲ್ಲ ಹೇಗೆ ಸಾಧ್ಯ? ಸಂತೋಷ್ ರಾವ್‌ನನ್ನು ಹಿಡಿದುಕೊಟ್ಟ ರವಿ ಪೂಜಾರಿ, ಗೋಪಾಲಕೃಷ್ಣ ಗೌಡ, ಸಂತೋಷ್ ರಾವ್ ಸ್ಥಳದಲ್ಲಿದ್ದ ಎಂದು ಹೇಳಿಕೆ ಕೊಟ್ಟ ದಿನೇಶ್ ಗೌಡ, ವಾರಿಜಾ ಸತ್ತು ಹೋದದ್ದು ಹೇಗೆ? ಎಲ್ಲವೂ ಆತ್ಮಹತ್ಯೆ, ಅಸಹಜ ಸಾವುಗಳೇ! ಬೇರೆಲ್ಲೂ ಕಾಣದ ಪ್ಯಾಟರ್ನ್ ಇದು” ಎಂದು ಅಚ್ಚರಿ ವ್ಯಕ್ತಪಡಿಸಿದರು.
ಅತ್ಯಾಚಾರಿಗಳೆಂದು ಯಾರನ್ನು ಅನುಮಾನಿಸಲಾಗುತ್ತಿದೆಯೋ ಅವರೇ ಆರೋಪಿ ಸಂತೋಷ್ ರಾವ್‌ನನ್ನು ಹಿಡಿದುಕೊಟ್ಟರು. ಸಂತೋಷ್ ಮೇಲೆ ಸಾರ್ವಜನಿಕರಿಂದ ಹಲ್ಲೆಯಾಯಿತು. “ಸಂತೋಷ್ ರಾವ್ ಗುಪ್ತಾಂಗದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ” ಎಂದು ಆಡಂ ವರದಿ ಕೊಟ್ಟರು. ಆದರೆ ಪೊಲೀಸರಿಗೆ ಒಬ್ಬ ಬೇಕಿತ್ತಷ್ಟೇ. ಆಡಂ ಅವರ ರಿಪೋರ್ಟ್ ಇಟ್ಟುಕೊಂಡು ಸಂತೋಷ್ ರಾವ್‌ನನ್ನು ಈ ಪ್ರಕರಣದಲ್ಲಿ ಫಿಕ್ಸ್ ಮಾಡಲು ಆಗುತ್ತಿರಲಿಲ್ಲ. ಅದಕ್ಕಾಗಿ ಮಧ್ಯಾಹ್ನದ ಹೊತ್ತಿಗೆ ಆತನನ್ನು ಡಾ.ಮಹಾಬಲ ಶೆಟ್ಟಿಯ ಬಳಿ ಮರು ಪರೀಕ್ಷೆಗೆ ಕಳುಹಿಸಲಾಯಿತು. ಅಸಹಜ ಸಾವುಗಳು ಸಂಭವಿಸಿದ ಸಂದರ್ಭದಲ್ಲಿ ಹೂಳುವ ಜಾಗದಲ್ಲೇ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದೆ ಎಂದಿರುವ ಮಹಾಬಲಶೆಟ್ಟಿಯ ಬಳಿಯೇ ಏಕೆ ಸಂತೋಷ್ ರಾವ್‌ನನ್ನು ಕಳುಹಿಸಲಾಯಿತು? ಎಂದು ಪ್ರಶ್ನಿಸಿದರು.
“ಸೌಜನ್ಯ ಪ್ರಕರಣದ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ತಾವಾಗಿಯೇ ಬಂದು ಮಂಪರು ಪರೀಕ್ಷೆಗೆ ಒಳಗಾಗಿರುವುದಾಗಿ ಪ್ರಚಾರ ಮಾಡಿಕೊಂಡಿದ್ದಾರೆ. ಸ್ವಯಂ ಮಂಪರು ಪರೀಕ್ಷೆಗೆ ಒಳಗಾದವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಯಾಕೆ ತನಿಖೆ ಮಾಡಲಿಲ್ಲ? ಸ್ವಯಂಪ್ರೇರಿತವಾಗಿ ಅವರಾಗಿಯೇ ಏಕೆ ಹೋದರು? ಉಳಿದವರು ಏಕೆ ತನಿಖೆಗೆ ಒಳಗಾಗಲಿಲ್ಲ? ಹೆಚ್ಚುವರಿ ತನಿಖೆ ಅಗತ್ಯವಿದೆ ಎಂದು ಸಿಬಿಐನವರು ಈ ಮೂವರ ಮೇಲೆ ಏಕೆ ವರದಿ ಸಲ್ಲಿಸಿದ್ದಾರೆ? ನಾರ್ಕೋ ಅನಾಲಿಸಿಸ್‌ಗೆ ಒಳಗಾದವರು ಫೋನ್ ಟ್ರಾಕಿಂಗ್ ವರದಿಯನ್ನೇಕೆ ಕೊಡಲಿಲ್ಲ? ಸಿಸಿಟಿವಿ ದೃಶ್ಯಗಳನ್ನು ಏಕೆ ಕೊಡಲಿಲ್ಲ? ಮಂಪರು ಪರೀಕ್ಷೆ ಮಾಡಿಸಿಕೊಂಡವರು, ವರದಿಯನ್ನೇಕೆ ಕೋರ್ಟ್‌ಗೆ ಸಲ್ಲಿಸಲಿಲ್ಲ?” ಎಂದು ಪ್ರಶ್ನೆಗಳ ಸುರಿಮಳೆಗೈದರು.
ಸೌಜನ್ಯ ಪ್ರಕರಣದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಭಾಗಿಯಾಗಿದ್ದಾರೆಂದು ಗೊತ್ತಾಗಿದೆ. ಮಂಪರು ಪರೀಕ್ಷೆ ಮಾಡಿಸಿಕೊಂಡವರು ಹೆಚ್ಚವರಿ ತನಿಖೆ ಆಗದಂತೆ ತಡೆಯಾಜ್ಞೆ ತಂದಿದ್ದೇಕೆ? ಸ್ಟೇ ತರಲು ನೀವ್ಯಾರು? ನಿಮಗೂ ಹೆಚ್ಚುವರಿ ತನಿಖೆಗೂ ಏನು ಸಂಬಂಧ? ಇದನ್ನೆಲ್ಲ ಪ್ರಶ್ನಿಸಿದರೆ, ಸಂತೋಷ್ ರಾವ್ ಸೌಜನ್ಯಳನ್ನು ಹೆಗಲಲ್ಲಿ ಹೊತ್ತುಕೊಂಡು ಹೋದ, ಆಕೆಗೆ ಊಟ ತಂದುಕೊಟ್ಟ ಎಂದೆಲ್ಲ ಹೇಳುತ್ತಾರೆ. ಸಂತೋಷ್ ರಾವ್ ಕೊಟ್ಟಿದ್ದನ್ನು ಅಪರಿಚಿತ ಯುವತಿಯೊಬ್ಬಳು ತಿನ್ನಲು ಸಾಧ್ಯವೇ? ಎಂದು ಕೇಳಿದರು.
ಸೌಜನ್ಯ ಮೃತ ದೇಹ ಸಿಕ್ಕ ಕೇವಲ ನೂರು ಮೀಟರ್ ದೂರದಲ್ಲಿ ಸಂತೋಷ್ ರಾವ್ ಟೆಂಟ್ ಹಾಕಿಕೊಂಡು ಕೂತಿದ್ದ ಎಂದು ಹೇಳಿದರು. ಬಾಡಿ ಸಿಕ್ಕ ದಿನ ಸುಮಾರು 10,000 ಜನ ಸೇರಿದ್ದರು. ಆಗ ಟೆಂಟ್ ಎಲ್ಲಿತ್ತು? ಆತ ಬ್ಯಾಗ್ ಹಿಡಿದುಕೊಂಡಿದ್ದ, ಜಪಮಾಲೆ ಇತ್ತು ಎಂದು ಹೇಳುವವರು ಇವರೇ. ಆತನ ಕೈಯಲ್ಲೇ ಇದ್ದ ಬ್ಯಾಗ್ ಜಪ್ತಿ ಮಾಡಲಿಲ್ಲ ಏಕೆ? ಆತನ ಬ್ಯಾಗ್ ಕಾಡಿನೊಳಗೆ ಹೋಗಿದ್ದು ಹೇಗೆ? ನಿಮ್ಮದು ಯಾವ ರೀತಿಯ ತನಿಖೆ? ಸಂತೋಷ್ ರಾವ್ ಕಡೆಯಿಂದ ಮರುತನಿಖೆಗೆ ಮತ್ತೊಂದು ಅರ್ಜಿ ಹಾಕಿಸಿದ್ದೇವೆ ಎಂದು ಬಹಿರಂಗಪಡಿಸಿದರು.
ಅಸಹಜ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನಮ್ಮಲ್ಲಿ ಕಾಡುಹಂದಿಯ ಹಾವಳಿ ಇದೆ ಎಂದು ಉರುಳು ಹಾಕುತ್ತಾರೆ. ಒಂದು ಹಂದಿ ಹಿಡಿದರೆ ಅರಣ್ಯ ಇಲಾಖೆಯವರು ತಕ್ಷಣ ಬಂದು, ಮಾಲೀಕನ ದಾಖಲೆಗಳನ್ನು ವಶಕ್ಕೆ ಪಡೆಯುತ್ತಾರೆ. ಅಂಥದ್ದರಲ್ಲಿ ಈ ಪವಿತ್ರ ನೆಲದಲ್ಲಿ ಇಂತಹ ಘಟನೆಗಳು ಆಗಿದ್ದು ಹೇಗೆಂದು ಪ್ರಶ್ನಿಸಲೇಬೇಕು” ಎಂದರು.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡೆ ಪ್ರದೇಶದಲ್ಲಿ ವ್ಯಾಪಕ ಶೋಧಕ್ಕೆ ಎಸ್‌ಐಟಿ ಮತ್ತೆ ಸಿದ್ಧತೆ!
ಹದಿನೈದು ವರ್ಷದ ಹುಡುಗಿ ಮೋಕ್ಷಕ್ಕಾಗಿ ಬಂದು ಸಾಯುತ್ತಾಳೆಯೇ? ಮೋಕ್ಷ ಅನ್ನೋ ಪದ ಅರ್ಥ ತಿಳಿಯಲಿಕ್ಕೆ ಆಕೆಗೆ ಇನ್ನೂ ಹದಿನೈದು ವರ್ಷ ಬೇಕಾಗುತ್ತದೆ. ಧರ್ಮಸ್ಥಳ ಮಾಹಿತಿ ಕೇಂದ್ರದ ಬಳಿ ಹೆಣ ಸಿಕ್ಕರೆ ಒಂದೇ ದಿನದಲ್ಲಿ ಹೇಗೆ ದಫನ್ ಮಾಡಿದಿರಿ? ಲಾಡ್ಜ್‌ನಲ್ಲಿ ಸಿಕ್ಕ ಮಹಿಳೆಯ ಮೃತದೇಹವನ್ನು ಹೇಗೆ ಅಪರಿಚಿತ ಎನ್ನಲು ಸಾಧ್ಯ? ಲಾಡ್ಜ್‌ನಲ್ಲಿ, ಮಾಹಿತಿ ಕೇಂದ್ರದ ಪಕ್ಕ, ದ್ವಾರದ ಬಳಿ ಸಿಕ್ಕ ಹೆಣಗಳನ್ನೆಲ್ಲ ಒಂದೇ ದಿನಕ್ಕೆ ಹೇಗೆ ಅಂತ್ಯ ಸಂಸ್ಕಾರ ಮಾಡಿದಿರಿ? ದ್ವಾರದ ಬಳಿ ಸಿಕ್ಕ ಹೆಣ ಕೊಳೆತಿರಲು ಹೇಗೆ ಸಾಧ್ಯ? ಎಂದು ಕೇಳಿದರು.
“ಪೊಲೀಸಿನವರನ್ನು ಪ್ರಶ್ನಿಸಿದರೆ ಯುಡಿಆರ್ ಆಗಿದೆ ಎನ್ನುತ್ತಾರೆ. ಬೆಳ್ತಂಗಡಿ ಪೊಲೀಸರು ಯುಡಿಆರ್ ಮಾಡುತ್ತಾರೆ. ಪೇಮೆಂಟ್ ಮಾಡುವುದು ಮಾತ್ರ ಧರ್ಮಸ್ಥಳ ಗ್ರಾಮ ಪಂಚಾಯಿತಿ. ದಫನ್ ಮಾಡಿದ್ದಕ್ಕೆ ಗ್ರಾಮ ಪಂಚಾಯಿತಿ ಹೇಗೆ ಪಾವತಿ ಮಾಡಲು ಸಾಧ್ಯ? ಯಾಕಾದರೂ ಹಣ ಪಾವತಿ ಮಾಡಬೇಕು? ಬಾಬು ಸನ್ ಆಫ್ ಗುರುವ, ಬಾಬು ಸನ್ ಆಫ್ ಚೀಂಕ್ರಾ, ಬಾಬು ಸನ್ ಆಫ್ ಚೋಮಾ- ಎಲ್ಲವನ್ನೂ ದಫನ್ ಮಾಡಿದ್ದು ಬಾಬು! ಬಾಬು ಎಂಬಾತನ ಸಹಿ ಎಲ್ಲ ಒಂದೇ. ಇದನ್ನು ಪ್ರಶ್ನೆ ಮಾಡಿದರೆ ನಾವೆಲ್ಲ ಧರ್ಮ ವಿರೋಧಿಗಳಾಗುತ್ತೇವೆ” ಎಂದು ಕುಟುಕಿದರು.
