ಅನಿಲ್ ಅಂಬಾನಿ ವಂಚನೆ ಪ್ರಕರಣ: ಮೋದಿ ಅತ್ಯಾಪ್ತನ ಸಹೋದರ ಬ್ಯಾಂಕ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಕಥೆ ಇದು!

Date:

Advertisements
ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ಅವರ ಆಸ್ತಿಯನ್ನು ತನಿಖಾ ಸಂಸ್ಥೆಗಳು/ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಇಡಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು?

ಅನಿಲ್ ಧೀರೂಭಾಯ್ ಅಂಬಾನಿ– ಪ್ರಧಾನಿ ಮೋದಿ ಅವರ ಅತ್ಯಾಪ್ತ ಎಂದೇ ಕರೆಯಲಾಗುತ್ತಿರುವ ಭಾರತದ ಅತೀ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಸಹೋದರ. ಅನಿಲ್ ಅಂಬಾನಿ ಅವರು ‘ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ಸ್‌’ನ (ಎಡಿಎಜಿ) ಭಾಗವಾಗಿರುವ ಕಂಪನಿಗಳ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಎಡಿಎಜಿ ಅಡಿಯಲ್ಲಿರುವ ಸುಮಾರು 50 ಕಂಪನಿಗಳು, 35ಕ್ಕೂ ಹೆಚ್ಚು ಸ್ಥಳಗಳು ಹಾಗೂ 25ಕ್ಕೂ ಹೆಚ್ಚು ಮಂದಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಒಳಪಡಿಸಿದೆ. ಅನಿಲ್ ಅಂಬಾನಿಯ ವಂಚನೆ ಪ್ರಕರಣಕ್ಕೆ ಮರುಜೀವ ತುಂಬಿದೆ.

ಇದ್ದಕ್ಕಿದ್ದಂತೆ ಇಡಿ ಅಂಬಾನಿ ಸಹೋದರನ ಮೇಲೆ ದಾಳಿ ಮಾಡಿರುವುದು ಆಶ್ಚರ್ಯಕರವೆಂದು ಹಲವರು ಹೇಳುತ್ತಿದ್ದಾರೆ. ಇದರ, ಹಿಂದಿನ ಉದ್ದೇಶ ಏನಿರಬಹುದು ಎಂದು ಶಂಕಿಸಿದ್ದಾರೆ. ಅದೇನೆ ಇರಲಿ, ಸದ್ಯಕ್ಕೆ ಅನಿಲ್ ಅಂಬಾನಿಯ ಪ್ರಕರಣವೇನು ನೋಡೋಣ…

ಅನಿಲ್ ಅಂಬಾನಿ ಅವರ ಎಡಿಎಜಿಯ ಭಾಗವಾಗಿರುವ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಹಾಗೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ ಮೇಲೆ ಎಸ್‌ ಬ್ಯಾಂಕ್ ಬರೋಬ್ಬರಿ 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಆದರೆ, ಸಾಲ ಪಡೆದ ಅನಿಲ್ ಅಂಬಾನಿ ಸಂಸ್ಥೆ ಆ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದು, ಬ್ಯಾಂಕ್‌ಗೆ ಮೋಸ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ಆರೋಪಗಳ ಮೇಲೆ ಇಡಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ತನಿಖೆ ಆರಂಭಿಸಿದೆ. ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಅಂದಹಾಗೆ, ಧೀರೂಭಾಯ್ ಅಂಬಾನಿ ನಿಧನದ ನಂತರ 2006ರಲ್ಲಿ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌’ ಸಂಸ್ಥೆಯು ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ನಡುವೆ ಹಂಚಿಕೆಯಾಯಿತು. ಸಂಸ್ಥೆಯನ್ನು ಇಬ್ಭಾಗಿಸಿಕೊಂಡ ಅಂಬಾನಿ ಸಹೋದರರು ಪ್ರತ್ಯೇಕವಾಗಿ ತಮ್ಮ ಉದ್ಯಮಗಳನ್ನು ಬೆಳೆಸಲಾರಂಭಿಸಿದರು. ಅನಿಲ್ ಅಂಬಾನಿ ಆರಂಭದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಆದರೆ, 2017ರ ನಂತರ ಅವರ ಕಂಪನಿಗಳು– ವಿಶೇಷವಾಗಿ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಮ್) ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅನಿಲ್ ಅಂಬಾನಿ ಬ್ಯಾಂಕ್‌ಗಳಿಂದ ಹೆಚ್ಚು ಹೆಚ್ಚು ಸಾಲ ಪಡೆಯಲು ಮುಂದಾದರು. ಪಡೆದ ಸಾಲವನ್ನು ಉಲ್ಲೇಖಿತ ಉದ್ದೇಶಕ್ಕೆ ಬಳಸದೆ, ನಾನಾ ಉದ್ದೇಶಕ್ಕಾಗಿ ಬಳಸಿಕೊಂಡರು. ಸಾಲ ನೀಡಿದ ಬ್ಯಾಂಕ್‌ಗಳಿಗೆ ವಂಚಿಸಿದರು. ಅಲ್ಲದೆ, 2020ರಲ್ಲಿ ತಾವು ದಿವಾಳಿಯಾಗಿರುವುದಾಗಿ ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಅನಿಲ್ ಘೋಷಿಸಿದರು.

ಅನಿಲ್ ಅಂಬಾನಿ ಅವರು ಸುಮಾರು 20,380 ಕೋಟಿ ರೂ.ಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ. ಅವರ ವಂಚನೆಗಳಿಗೆ ಬಲಿಯಾದ ಬ್ಯಾಂಕ್‌ಗಳಲ್ಲಿ ಎಸ್‌ ಬ್ಯಾಂಕ್‌ ಮತ್ತು ಎಸ್‌ಬಿಐ ಕೂಡ ಸೇರಿವೆ.

ಅನಿಲ್ ಅಂಬಾನಿ ಅವರು ಎಡಿಎಜಿ ಭಾಗವಾಗಿರುವ ಕಂಪನಿಗಳು ದೂರಸಂಪರ್ಕ, ಮೂಲಸೌಕರ್ಯ ಹಾಗೂ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ವ್ಯಾಪಾರ ವಿಸ್ತರಣೆಗಾಗಿ ಬರೋಬ್ಬರಿ 20,380 ಕೋಟಿ ರೂ.ಗಳಷ್ಟು ಸಾಲ ಪಡೆದಿವೆ. ಮುಖ್ಯವಾಗಿ, ಈ ಸಾಲಗಳನ್ನು ಭಾರತದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಎಸ್ ಬ್ಯಾಂಕ್, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಆಕ್ಸಿಸ್ ಬ್ಯಾಂಕ್‌ ಸೇರಿದಂತೆ ಹಲವು ಬ್ಯಾಂಕ್‌ಗಳಿಂದ ಪಡೆಯಲಾಗಿದೆ.

ಆದರೆ, ಸಾಲ ಪಡೆದ ಸಂಸ್ಥೆಗಳು ಯಾವುದೇ ಹಣವನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಿಲ್ಲ. ಅಲ್ಲದೆ, ರಿಲಯನ್ಸ್ ಕಮ್ಯುನಿಕೇಷನ್ಸ್‌ ಹೆಸರಿನಲ್ಲಿ ಪಡೆದಿದ್ದ ಸಾಲದ ಮೊತ್ತವನ್ನು ಉದ್ದೇಶಿತ ಯೋಜನೆಗಳಿಗೆ ಬಳಸದೆ, ಇತರ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.

ಈ ರೀತಿಯಲ್ಲಿ ದುರ್ಬಳಕೆಯಾದ ಹಣದಲ್ಲಿ ಎಸ್ ಬ್ಯಾಂಕ್‌ ನೀಡಿದ್ದ ಸಾಲವೂ ಸೇರಿದೆ. ಎಸ್‌ ಬ್ಯಾಂಕ್‌ನಿಂದ ಪಡೆದ ಸಾಲವನ್ನು ರಿಲಯನ್ಸ್ ಗ್ರೂಪ್‌ನ ಇತರ 50ಕ್ಕೂ ಹೆಚ್ಚು ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದು ಇಡಿ ತನಿಖೆಯಲ್ಲಿ ಗೊತ್ತಾಗಿದೆ.

ಮುಖ್ಯವಾಗಿ, 2017ರಲ್ಲಿ, ರಾಣಾ ಕಪೂರ್ ನೇತೃತ್ವದಲ್ಲಿ ಎಸ್‌ ಬ್ಯಾಂಕ್‌– ಎಡಿಎಜಿ ಭಾಗವಾಗಿರುವ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಹಾಗೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ ಮೇಲೆ ಕ್ರಮವಾಗಿ 900 ಕೋಟಿ ರೂ., 1,000 ಕೋಟಿ ರೂ. ಹಾಗೂ 1,000 ಕೋಟಿ ರೂ.ಗಳನ್ನು ಹೂಡಿಕೆ (ಸಾಲವಾಗಿ) ಮಾಡಿತು. ಈ ಪ್ರಮಾಣದ ಸಾಲವನ್ನು ನೀಡಿದ್ದಕ್ಕಾಗಿ, ರಾಣಾ ಕಪೂರ್ ಅವರ ಕುಟುಂಬದ ಸಂಸ್ಥೆಗಳಿಗೆ ಅನಿಲ್ ಅಂಬಾನಿ ಅವರ ಸಂಸ್ಥೆಯು 285 ಕೋಟಿ ರೂ.ಗಳನ್ನು ಲಂಚದ ರೂಪದಲ್ಲಿ ನೀಡಿದೆ ಎಂದೂ ಆರೋಪಿಸಲಾಗಿದೆ.

ಆದಾಗ್ಯೂ, ಎಡಿಎಜಿಯ ಕಂಪನಿಗಳಲ್ಲಿ ಎಸ್ ಬ್ಯಾಂಕ್ ಮಾಡಿದ್ದ ಹೂಡಿಕೆಯು ‘ನಿಷ್ಟ್ರಯೋಜಕ’ವಾಗಿದೆ. ಆ ಹೂಡಿಕೆಯಿಂದ ಯಾವುದೇ ಆದಾಯ/ಲಾಭ ಬರುತ್ತಿಲ್ಲ ಎಂಬುದನ್ನು ಎಸ್‌ ಬ್ಯಾಂಕ್‌ ಕಂಡುಕೊಂಡಿತು. 2020ರಲ್ಲಿ ಎಡಿಎಜಿ ವಿರುದ್ಧ ಸಿಬಿಐಗೆ ದೂರು ನೀಡಿತು. ಎಸ್‌ ಬ್ಯಾಂಕ್‌ನ ದೂರು ಆಧರಿಸಿ ಬಿಸಿಐ 2022ರಲ್ಲಿ ಎಡಿಎಜಿ ವಿರುದ್ಧ ಎರಡು (RC2242022A0002 ಮತ್ತು RC2242022A0003) ಎಫ್‌ಐಆರ್ ದಾಖಲಿಸಿತು. ಸಿಬಿಐ ಎಫ್‌ಐಆರ್‌ಗಳನ್ನು ದಾಖಲಿಸಿದ ಬರೋಬ್ಬರಿ ಮೂರು ವರ್ಷಗಳ ಬಳಿಕ, ಇಡಿ ಕೂಡ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದೆ. ತನಿಖೆ ನಡೆಸುತ್ತಿದೆ.

2025ರ ಜೂನ್ 13ರಂದು, ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅನಿಲ್ ಅಂಬಾನಿಯವರನ್ನು ‘ವಂಚಕರು’ ಎಂದು ಎಸ್‌ಬಿಐ ಹೆಸರಿಸಿ, ವರ್ಗೀಕರಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಂಚನೆ ಅಪಾಯ ನಿರ್ವಹಣೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ವಂಚನೆ ವರ್ಗೀಕರಣವನ್ನು ಎಸ್‌ಬಿಐ ಮಾಡಿತು.

ರಿಲಯನ್ಸ್‌ ಕಮ್ಯುನಿಕೇಷನ್ ಮತ್ತು ಅನಿಲ್ ಅಂಬಾನಿಯನ್ನು ‘ವಂಚಕರು’ ಎಂದು ಎಸ್‌ಬಿಐ ಪಟ್ಟಿ ಮಾಡಿದ ಬೆನ್ನಲ್ಲೇ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿತು. ಜುಲೈ 24ರಂದು ಅನಿಲ್ ಅಂಬಾನಿ ಅವರು ಸಂಸ್ಥೆಗೆ ಸಂಬಂಧಿಸಿದ 50 ಕಂಪನಿಗಳು, 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲಿಸಿದೆ ಹಾಗೂ 25ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕೂಡ ಅನಿಲ್ ಅಂಬಾನಿಯವರ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ಸೆಬಿಯೂ ಸಹ ತನಿಖೆ ನಡೆಸುತ್ತಿದೆ.

ಸದ್ಯ, ಇಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಇನ್ನೂ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಾಲ ನೀಡುವ ಎಸ್‌ ಬ್ಯಾಂಕ್‌ ಸಾಲದ ಅನುಮೋದನೆ ವೇಳೆ ಹಲವಾರು ನಿಯಮಗಳನ್ನು ಉಲ್ಲಂಘಿಸಿದ್ದು, ವ್ಯವಸ್ಥಿತ ಲೋಪ ಎಸಗಿದೆ ಎಂಬುದನ್ನು ಇಡಿ ಕಂಡುಕೊಂಡಿದೆ.

“ಸಾಲ ಅನುಮೋದನೆ ಮೆಮೊರಂಡಮ್‌ ಪತ್ರಗಳಲ್ಲಿ (CAMಗಳು) ಹಿಂದಿನ ನಿಯಮಗಳನ್ನು ಅನುಸರಿಸಲಾಗಿದೆ. ಹೊಸ ನಿಯಮಗಳನ್ನು ಗಾಳಿಗೆ ತೂರಿ, ಉಲ್ಲಂಘಿಸಿ ಸಾಲವನ್ನು ಅನುಮೋದಿಸಲಾಗಿದೆ. ಅಲ್ಲದೆ, ಈ ವೇಳೆ, ಸಾಲದ ವಿಶ್ಲೇಷಣೆಯನ್ನೂ ನಡೆಸದೆ, ಬ್ಯಾಂಕ್‌ ಹೂಡಿಕೆ ಮಾಡಿದೆ. ಜೊತೆಗೆ, ಸಾಲ ನೀಡಿದ್ದಕ್ಕಾಗಿ ಸಾಲ ರೂಪದಲ್ಲಿ ಕಪೂರ್ ಮತ್ತು ಇತರರಿಗೆ ಲಂಚ ನೀಡಲಾಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ” ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ವೇಳೆ, ಅನಿಲ್ ಅವರ ರಿಲಯನ್ಸ್‌ ಗ್ರೂಪ್‌ ಪಡೆದ ಸಾಲದ ಹಣವನ್ನು ನಿಯಮಗಳನ್ನು ಉಲ್ಲಂಘಿಸಿ ಬಹು ಗುಂಪು ಕಂಪನಿಗಳು ಮತ್ತು ಶೆಲ್ ಸಂಸ್ಥೆಗಳಿಗೆ ವಿತರಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಈ ಲೇಖನ ಓದಿದ್ದೀರಾ?: ಧನಕರ್ ರಾಜೀನಾಮೆ ಹಿಂದಿದೆಯೇ ಅಧಿಕಾರದಾಹಿ BJPಯ ಬಿಹಾರ ಚುನಾವಣಾ ಲೆಕ್ಕಾಚಾರ?

ಸಾಲದ ಹಣದಲ್ಲಿ ಹಂಚಿಕೆ ಪಡೆದ ಕಂಪನಿಗಳು ಸರಿಯಾದ ದಾಖಲೆಗಳನ್ನು ಹೊಂದಿಲ್ಲ, ಈ ಕಂಪನಿಗಳು ಸಾಮಾನ್ಯ ವಿಳಾಸಗಳು ಮತ್ತು ನಿರ್ದೇಶಕರನ್ನು ಹೊಂದಿವೆ, ಹಣಕಾಸಿನ ಲೆಕ್ಕಾಚಾರಗಳು ತಪ್ಪು ನಿರೂಪಣೆಗಳಿಂದ ಕೂಡಿವೆ. ಇದೆಲ್ಲವೂ ಹಣಕಾಸಿನ ದುರುಪಯೋಗ ಮತ್ತು ಅಕ್ರಮದಲ್ಲಿ ಚಾಕಚಕ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಡಿಯ ತನಿಖೆಗೆ ಸಿಬಿಐ, ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ (ಎನ್‌ಎಫ್‌ಆರ್‌ಎ) ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ನಿಯಂತ್ರಕ ಮತ್ತು ಹಣಕಾಸು ಸಂಸ್ಥೆಗಳು ಮಾಹಿತಿ ಒದಗಿಸಿವೆ.

ಇದೆಲ್ಲದರ ನಡುವೆ, ಕೆನರಾ ಬ್ಯಾಂಕ್ ಕೂಡ ರಿಲಯನ್ಸ್ ಕಮ್ಯುನಿಕೇಷನ್ಸ್‌ ವಿರುದ್ಧ ‘ವಂಚನೆ’ ಪ್ರಕರಣ ದಾಖಲಿಸಿತ್ತು. ಆದರೆ ಬಾಂಬೆ ಹೈಕೋರ್ಟ್‌ನಲ್ಲಿ ಅನಿಲ್ ಅಂಬಾನಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ ಬಳಿಕ, ತನ್ನ ನಿರ್ಧಾರದಿಂದ ಕೆನರಾ ಬ್ಯಾಂಕ್ ಹಿಂದೆ ಸರಿಯಿತು ಎಂಬ ಅಂಶವೂ ಮುನ್ನೆಲೆಗೆ ಬಂದಿದೆ.

ಸದ್ಯಕ್ಕೆ, ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ಅವರ ಆಸ್ತಿಯನ್ನು ತನಿಖಾ ಸಂಸ್ಥೆಗಳು/ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಇಡಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X