ನಗರಗಳ ವಿನ್ಯಾಸವು ಸಮುದಾಯಗಳು, ಪ್ರತ್ಯೇಕಗೊಂಡ ಕೊಳೆಗೇರಿಗಳು ಹಾಗೂ ಶ್ರೀಮಂತರ ಎತ್ತರದ ಕಟ್ಟಡಗಳು ಸಾಮಾಜಿಕ ಶ್ರೇಣಿಗಳನ್ನು ಕಾಂಕ್ರೀಟ್‌ನಲ್ಲಿ ನಿರ್ಮಾಣಗೊಂಡಿವೆ. ನಗರಗಳಲ್ಲಿ ವಲಸಿಗರು ಒಂದೇ ನಗರದ ಆಕಾಶರೇಖೆಯನ್ನು ಹಂಚಿಕೊಳ್ಳಬಹುದು. ಆದರೆ ಅವರು ಭಯ, ಆಕಾಂಕ್ಷೆ ಅಥವಾ ಬಹಿಷ್ಕಾರಗಳಿಂದ ಸ್ವಯಂ-ಪ್ರತ್ಯೇಕಗೊಂಡ ನೆಲೆಗಳಲ್ಲಿ ವಿಭಜಿತರಾಗಿದ್ದಾರೆ
ಭಾರತದ ಹಲವು ನಗರಗಳಲ್ಲಿ ಭಾಷೆ ಮತ್ತು ಗುರುತಿನ ಆಧಾರದ ಮೇಲೆ ಒಡಕುಗಳು, ಧ್ವಂಸಕಾರಕ ಕೃತ್ಯಗಳು ನಡೆಯುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಂತಹ ಪ್ರದೇಶಗಳಲ್ಲಿ ನಿರ್ಗತಿಕರು ಮತ್ತು ವಲಸೆ ಕಾರ್ಮಿಕರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಧ್ವಂಸ ಮಾಡಿ, ಬಡವರ ಜೀವನವನ್ನು ಬಲಿತೆಗೆದುಕೊಳ್ಳಲಾಗುತ್ತಿದೆ. ಬಡವರ ಜೊತೆಗೆ ಮತ್ತೊಂದೆಡೆ, ‘ಮಧ್ಯಮ ವರ್ಗ’ವು ಮಳೆ, ಕಿಕ್ಕಿರಿದ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯವನ್ನು ಎದುರಿಸುತ್ತಿದೆ. ಇದೆಲ್ಲವೂ ನಗರ ಜೀವನದ ದುರ್ಬಲತೆಯ ಪ್ರತಿಬಿಂಬವಾಗಿ ನಮ್ಮೆದುರಿದೆ.
ಪ್ರತಿವರ್ಷ, ಲೆಕ್ಕವಿಲ್ಲದಷ್ಟು ಜನರು ಗ್ರಾಮೀಣ ಜೀವನದಲ್ಲಿ ಬದುಕು ಕಟ್ಟಿಕೊಳ್ಳಲಾಗದೆ, ಉದ್ಯೋಗವನ್ನು ಹರಸುತ್ತಾ ತಮ್ಮ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳನ್ನು ತೊರೆದು ನಗರದತ್ತ ಹೋಗುತ್ತಿದ್ದಾರೆ. ಆದರೆ, ಹಳ್ಳಿಯಿಂದ ಪಟ್ಟಣಕ್ಕೆ ಬರುವ ವಲಸೆಯ ವೆಚ್ಚವೆಷ್ಟು?
ವಲಸೆ ಬರುವವರಿಗೆ ಆರ್ಥಿಕ ಭಾರ ಕೇವಲ ಆರಂಭ ಮಾತ್ರ. ಆದಾಗ್ಯೂ, ದೈಹಿಕ ದಣಿವು, ನಗರ ಜೀವನದ ವೆಚ್ಚ, ಅಸುರಕ್ಷಿತ ಉದ್ಯೋಗಗಳ ಆತಂಕ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಸಾಕಷ್ಟು ಸಂಕಷ್ಟು, ನೋವನ್ನು ಅನುಭವಿಸುತ್ತಿದ್ದಾರೆ.
ಆದರೂ, ಕುಸಿಯುತ್ತಿರುವ ಮೂಲಸೌಕರ್ಯಗಳ ನಡುವೆ, ನಗರವು ಕನಸುಗಳನ್ನು ಮಾರಾಟ ಮಾಡುತ್ತಲೇ ಇದೆ. ಅಧಿಕಾರ ಮತ್ತು ಲಾಭದ ಯಂತ್ರಗಳನ್ನು ಚಾಲನೆಯಲ್ಲಿಟ್ಟಿದೆ. ಈಗಾಗಲೇ ನಗರಗಳಿಗೆ ಬಂದು ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿರುವವರನ್ನೂ ನಗರಗಳು ಕೈಬಿಡುತ್ತಿದ್ದರೂ, ಹೊಸದಾಗಿ ಬರುವವರಿಗೆ ಆಕರ್ಷಕ ಕೇಂದ್ರವಾಗಿ ಉಳಿದಿವೆ.
ಭಾರತದಲ್ಲಿ ಮಹಾನಗರಗಳ ಮೋಹ
ಹಲವಾರು ದಶಕಗಳಿಂದ, ಭಾರತದ ಭವಿಷ್ಯವು ನಗರಗಳಲ್ಲಿದೆ ಎಂದು ಹೇಳಿ ನಂಬಿಸಲಾಗಿದೆ. ಅದೇ ಕಾರಣಕ್ಕೆ ನಗರಗಳ ಮೇಲಿನ ಮೋಹವೂ ಹೆಚ್ಚಾಗಿದೆ. ನಗರಗಳಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಭ್ರಮೆ ಆವರಿಸಿಕೊಂಡಿದೆ. ಇದೆಲ್ಲವೂ, ವಸಾಹತು ಮತ್ತು ಬಂಡವಾಳವಾದ ಹಾಗೂ ಆಳುವವರು ಸೃಷ್ಟಿಸಿದ ಉತ್ಪನ್ನ!
ಹಳೆಯ ದೂರದರ್ಶನ ಸುದ್ದಿಗಳಲ್ಲಿ; ದಿಲ್ಲಿ, ಮುಂಬೈ, ಕೋಲ್ಕತ್ತಾ ಹಾಗೂ ಮದ್ರಾಸ್ (ಚೆನ್ನೈ) – ಈ ನಾಲ್ಕು ಮಹಾನಗರಗಳ ಹವಾಮಾನವನ್ನು ವರದಿಮಾಡುತ್ತಿದ್ದವು. ಆ ವರದಿಗಳು ದೇಶದ ಉಳಿದ ಭಾಗಗಳು ಅಸ್ವಿತ್ವದಲ್ಲೇ ಇಲ್ಲ ಎಂಬ ರೀತಿಯಲ್ಲಿ ಸುದ್ದಿಗಳನ್ನು ಸಿದ್ದಪಡಿಸಲಾಗಿದೆಯೇನೋ ಎನ್ನುವಂತಿರುತ್ತಿದ್ದವು.
ವಿಪರ್ಯಾಸವೆಂದರೆ, ಇಡೀ ರಾಷ್ಟ್ರಕ್ಕೆ ಆಹಾರವನ್ನು ಬೆಳೆಯುವ ರೈತರು ನೆಲೆಸಿರುವ ಗ್ರಾಮೀಣ ಭಾರತದ ಹವಾಮಾನ ಪರಿಸ್ಥಿತಿಗಳು ರಾಷ್ಟ್ರೀಯ ಆದ್ಯತೆ ಆಗಿರಲಿಲ್ಲ. ಬದಲಾಗಿ, ಯಂತ್ರಗಳೊಂದಿಗೆ ಓಡುವ ನಗರಗಳು ಹವಾಮಾನದ ಆದ್ಯತೆಗಳಾಗಿದ್ದವು. ಈ ಸಂಕುಚಿತ ದೃಷ್ಟಿಕೋನದ ಮೂಲಕ, ಅಭಿವೃದ್ಧಿಯೆಂದರೆ ನಗರಗಳು ಮತ್ತು ನಗರಗಳೆಂದರೆ ಅಭಿವೃದ್ಧಿ-ಯಶಸ್ಸಿನ ಅವಕಾಶಗಳು ಎಂಬ ಭಾವನೆ ದೇಶದೆಲ್ಲೆಡೆ ಬೆಳೆಯಿತು. ಇದು ನಗರಗಳ ವಲನೆಗಳನ್ನು ಪ್ರೇರೇಪಿಸಿತು. ಜೊತೆಗೆ, ಗ್ರಾಮೀಣ ಭಾಗದಲ್ಲಿ ಕೃಷಿ ಆದಾಯ ಮತ್ತು ಉದ್ಯೋಗ ಕೊರತೆಯು ಸಾಥ್ ನೀಡಿತು.
ಬೆಂಗಳೂರಿನ ಸಂಚಾರ ದಟ್ಟಣೆಯ ನಿವಾರಣೆಗೆ ಒಂದು ಫ್ಲೈಓವರ್ ಸಾಕೆಂದು ಹೇಳಲಾಯಿತು. ಹೈದರಾಬಾದ್‌ನಲ್ಲಿ ಕಣ್ಮರೆಯಾಗುತ್ತಿರುವ ಕೆರೆಗಳು ವೀರಾಭಿಮಾನವಾದ ಅಭಿವೃದ್ಧಿಯಲ್ಲಿ ಸಣ್ಣ ಸಮಸ್ಯೆಯಷ್ಟೇ ಎಂಬುದಾಗಿ ನಂಬಿಸಲಾಯಿತು. ಮುಂಬೈ ಕರಾವಳಿಯು ರಸ್ತೆಯಿಂದ ರಕ್ಷಣೆಯಾಗಲಿದೆ ಎಂಬ ಕತೆ ಕಟ್ಟಲಾಯಿತು. ಆದರೆ ನಿಜವಾಗಿ ಏನಾಯಿತು; ಭಾರತದ ನಗರ ಅಭಿವೃದ್ಧಿ ಮಾದರಿಯು ತನ್ನ ತರ್ಕ, ಭೂಮಿ ಹಾಗೂ ಕಾನೂನುಬದ್ಧತೆಯನ್ನು ಕಳೆದುಕೊಂಡಿದೆ. ನಗರಗಳು ಮತ್ತು ನಗರ ಜೀವವ ಅಸ್ತವ್ಯಸ್ತಗೊಂಡಿವೆ. ಆದರೂ, ನಗರದ ಮೋಹ ಮುಂದುವರಿದಿದೆ. ಏಕೆಂದರೆ, ನಗರ ಮೋಹವು ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡುವುದಕ್ಕಿಂತ ಪ್ಲಾನರ್‌ಗಳು, ಬಿಲ್ಡರ್‌ಗಳು ಹಾಗೂ ಹೂಡಿಕೆದಾರರಿಗೆ ಲಾಭ ಮಾಡಿಕೊಡುತ್ತಿದೆ.
ನಗರ ಎಂಬ ಸಮಗ್ರ ಅಭಿವೃದ್ಧಿಯ ಪುರಾಣ
ನಗರ ಜೀವನವನ್ನು ಅವಕಾಶಗಳ ಕಾವಲಿಯೆಂದು ಶ್ಲಾಘಿಸಲಾಗುತ್ತದೆ. ಆದರೆ, ಇದು ಅರ್ಧ ಸತ್ಯ. ವಾಸ್ತವವಾಗಿ, ನಗರಗಳು ಜಾತಿ, ಧರ್ಮ ಹಾಗೂ ವರ್ಗದಿಂದ ಗೀಚಲಾದ, ಕಾಣದ ಗಡಿಗಳನ್ನು ಹಾಕಿಕೊಂಡಿರುವ ಅದೃಶ್ಯ ಹಳ್ಳಿಗಳ ಸಂಗ್ರಹಗಳು.
ನಮ್ಮ ನಗರಗಳ ವಿನ್ಯಾಸವು ಸಮುದಾಯಗಳು, ಪ್ರತ್ಯೇಕಗೊಂಡ ಕೊಳೆಗೇರಿಗಳು ಹಾಗೂ ಶ್ರೀಮಂತರ ಎತ್ತರದ ಕಟ್ಟಡಗಳು ಸಾಮಾಜಿಕ ಶ್ರೇಣಿಗಳನ್ನು ಕಾಂಕ್ರೀಟ್‌ನಲ್ಲಿ ನಿರ್ಮಾಣಗೊಂಡಿವೆ. ಸಣ್ಣ ಪಟ್ಟಣಗಳಿಂದ ಅಥವಾ ಹಳ್ಳಿಗಳಿಂದ ಬಂದ ವಲಸಿಗರು ಒಂದೇ ನಗರದ ಆಕಾಶರೇಖೆಯನ್ನು ಹಂಚಿಕೊಳ್ಳಬಹುದು. ಆದರೆ ಅವರು ಭಯ, ಆಕಾಂಕ್ಷೆ ಅಥವಾ ಬಹಿಷ್ಕಾರಗಳಿಂದ ಸ್ವಯಂ-ಪ್ರತ್ಯೇಕಗೊಂಡ ಎನ್‌ಕ್ಲೇವ್‌ಗಳಲ್ಲಿ ವಾಸಿಸುತ್ತಾರೆ. ಹೀಗಾಗಿ, ನಗರಗಳು ಸಮಗ್ರ ಅಭಿವೃದ್ಧಿಯ ಸಾಧಕಗಳು ಎಂಬ ಭಾವನೆಯು ವಾಸ್ತವಕ್ಕಿಂತ ಹೆಚ್ಚಾಗಿ ಕಂತೆ-ಪುರಾಣವಾಗಿದೆ.
ಭಾರತದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು – ಬೆಳವಣಿಗೆ, ವಲಸಿಗರ ಒಳಹರಿವು ಹಾಗೂ ಕ್ಷೀಣಿಸುತ್ತಿರುವ ಸ್ವಾಭಾವಿಕ ಸಂಪನ್ಮೂಲಗಳಿಂದ ಕುಸಿಯುತ್ತಿದೆ. ಜನದಟ್ಟಣೆ, ನಿರ್ಮಾಣ ಹಾಗೂ ವಾಹನಗಳ ಭಾರೀ ಬಳಕೆಯಿಂದ ಮುಳುಗಿಹೋಗಿದೆ. ಮೂಲಸೌಕರ್ಯವು ಮುಗಿಯುತ್ತಿರುವಾಗ, ವಿಸ್ತರಣೆಗೆ ಸ್ಥಳವೇ ಇಲ್ಲದಿರುವಾಗ ನಗರಕ್ಕೆ ಹೆಚ್ಚಿನ ಕಾಂಕ್ರೀಟ್ ಅಗತ್ಯವಿಲ್ಲ., ತುರ್ತು ದಟ್ಟಣೆ ನಿವಾರಣೆ ಅಗತ್ಯವಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಫ್ಲೈಓವರ್ ಸಾಕು ಎಂಬ ವಾದವು ಈಗ ಮೂಲೆಗುಂಪಾಗಿದೆ.
ಇದು ಹೈದರಾಬಾದ್, ಗುರುಗ್ರಾಮ್ ಹಾಗೂ ಇತರ ಅನೇಕ ಭಾರತೀಯ ಮಹಾನಗರಗಳಿಗೂ ಅನ್ವಯಿಸುತ್ತದೆ. ಸಣ್ಣ ತುಂಡು ಭೂಮಿಗಳಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿದರೂ, ಸ್ವಾಭಾವಿಕ ಸಂಪನ್ಮೂಲಗಳಿಗೆ ಪ್ರವೇಶ, ಮೂಲಸೌಕರ್ಯ, ಆರೋಗ್ಯಕರ ಹಾಗೂ ಸಮಗ್ರ ಜೀವನ ಸ್ಥಳಗಳಲ್ಲಿ ಒತ್ತಡ ಎಲ್ಲ ನಗರಗಳಲ್ಲಿಯೂ ಆವರಿಸಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಮೋದಿ, ಅಲ್ಲಿ ಟ್ರಂಪ್: ಪ್ರಶ್ನೆಗಳು-ಪ್ರತಿಭಟನೆಗಳು ಮತ್ತು ಪಲಾಯನಪ್ರವೀಣರು!
ನಗರಗಳ ಬೆಳವಣಿಗೆ ಮತ್ತು ದಟ್ಟಣೆಗೆ ಪರಿಹಾರವಾಗಿ ಉಪನಗರ ಎಂಬ ಆಟವೂ ಈಗ ಹಳತಾಗಿದೆ. ನವಿ ಮುಂಬೈ, ನೋಯ್ಡಾ ಹಾಗೂ ಗಚ್ಚಿಬೌಲಿಯಂತಹ ಉಪನಗರಗಳನ್ನು ಜನರ ವಾಸ ಮತ್ತು ರಕ್ಷಣಾ ವಲಯಗಳನ್ನಾಗಿ ಇರಿಸಲು ಉದ್ದೇಶಿಸಲಾಗಿತ್ತು. ಆದರೆ, ಕಳಪೆ ಯೋಜನೆ ಮತ್ತು ಅಪೂರ್ಣ ಮೂಲಸೌಕರ್ಯಗಳಿಂದಾಗಿ ಇವು ಯಾವುದೇ ರೀತಿಯ ಉತ್ತಮ ಪರಿಹಾರವನ್ನು ನೀಡಿಲ್ಲ.
ಅಭಿವೃದ್ಧಿಗಳು ನಿಖರವಾಗಿ ಯಾರಿಗಾಗಿ?
ಭಾರತವು ಇನ್ನೂ ಹಳ್ಳಿಗಳ ದೇಶ; ಭಾರತದ 65%ಕ್ಕಿಂತ ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿಯೇ ವಾಸಿಸುತ್ತಿದ್ದಾರೆ. ಆದರೂ, ಅಭಿವೃದ್ಧಿಯನ್ನು ಕೇವಲ ಮೆಟ್ರೋಗಳು, ಮಾಲ್‌ಗಳು ಹಾಗೂ ಗಗನಚುಂಬಿಗಳ ಪರಿಭಾಷೆಯಲ್ಲಿ ಊಹಿಸಲಾಗುತ್ತಿದೆ. ಏಕೆಂದರೆ ಗ್ರಾಮೀಣ ಅಭಿವೃದ್ಧಿಯು ಹೂಡಿಕೆದಾರರಿಗೆ ತ್ವರಿತ ಲಾಭವನ್ನು ತರುವುದಿಲ್ಲ. ಹೀಗಾಗಿ, ಬಂಡವಾಳಿಗರಿಗೂ, ಆಳುವವರಿಗೂ ಗ್ರಾಮೀಣ ಭಾಗಗಳು ಬೇಕಾಗಿಲ್ಲ. ಆದ್ದರಿಂದ, ಗ್ರಾಮೀಣ ಭಾಗದಲ್ಲಿ ಉದ್ಯೋಗಗಳೂ ಸೃಷ್ಟಿಯಾಗುವುದಿಲ್ಲ. ಇತ್ತೀಚಿನ, ವಿಶ್ವ ಬ್ಯಾಂಕ್–ಭಾರತ ಸರ್ಕಾರದ ವರದಿ (2025) ಹೇಳುವಂತೆ, ಭಾರತದಲ್ಲಿ ಸಾಂಪ್ರದಾಯಿಕ ಉದ್ಯೋಗಗಳು ಮಹಾನಗರಗಳಲ್ಲಿ ಕೇಂದ್ರೀಕೃತವಾಗಿವೆ.
ಆದರೆ, ಈ ವರದಿ ನೀಡಿರುವ ಎಚ್ಚರಿಕೆಯು ಇನ್ನೂ ಹೆಚ್ಚು ಕಾಳಜಿಯನ್ನು ಉಂಟುಮಾಡುತ್ತದೆ; ಮಹಾನಗರಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಹೆಚ್ಚು ದುರ್ಬಲವಾಗುತ್ತಿವೆ. ಅವಿವೇಕದ ನಿರ್ಮಾಣ ಮತ್ತು ಯೋಜನಾರಹಿತ ಬೆಳವಣಿಗೆಯು ಸ್ವಾಭಾವಿಕ ಪರಿಸರ ವ್ಯವಸ್ಥೆಗಳನ್ನು ತೀವ್ರವಾಗಿ ಹಾಳುಮಾಡಿದೆ. ಇದರಿಂದಾಗಿ ನಗರಗಳು ಶಾಖದ್ವೀಪಗಳಾಗುತ್ತಿವೆ. ಇವುಗಳ ರಾತ್ರಿಯ ತಾಪಮಾನವು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗಿಂತ 3-4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುತ್ತದೆ.
ಕಳಪೆ ಮೂಲಸೌಕರ್ಯದಿಂದಾಗಿ ನಗರಗಳು ಸಾಧಾರಣ ಮಳೆಗೂ ಆಕಸ್ಮಿಕ ಪ್ರವಾಹಕ್ಕೆ ತುತ್ತಾಗುತ್ತಿವೆ. ಇದರಿಂದಾಗಿ, ಈಗಾಗಲೇ ವಾರ್ಷಿಕ 4 ಶತಕೋಟಿ ಡಾಲರ್‌ನಷ್ಟು ನಷ್ಟವಾಗುತ್ತಿದೆ. ಇದು 2070ರ ವೇಳೆಗೆ 30 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ, ಕಾರ್ಖಾನೆಗಳು ಮತ್ತು ವಾಹನಗಳ ತಡೆರಹಿತ ಹೆಚ್ಚಳದಿಂದಾಗಿ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿದೆ. ಸಾರ್ವಜನಿಕ ಸಾರಿಗೆಯು ಜನದಟ್ಟಣೆಯಿಂದ ಕೂಡಿದೆ.
ಗ್ರಾಮೀಣ ಭಾರತದ ದುರಂತ ಕಥನ
ಗ್ರಾಮೀಣ ಭಾರತದ ಮೇಲಿನ ದಶಕಗಳ ನಿರ್ಲಕ್ಷ್ಯವು ಅನೇಕ ಹಳ್ಳಿಗಳನ್ನು ಬಿಕ್ಕಟ್ಟಿಗೆ ತಳ್ಳಿದೆ. ಕ್ಷೀಣಿಸುತ್ತಿರುವ ಕೃಷಿಭೂಮಿಗಳು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕೊರತೆಯು ಈ ಹಿಂದೆ ಶ್ರೀಮಂತವಾಗಿದ್ದ ಸಮುದಾಯಗಳನ್ನು ದುರ್ಬಲ ವಲಯಗಳಾಗಿ ಪರಿವರ್ತಿಸಿದೆ. ರಿವರ್ಸ್ ಬೋರಿಂಗ್ ರೀತಿಯ ನಡೆಗಳಿಂದ ಅಂತರ್ಜಲ ಕ್ಷೀಣಿಸುತ್ತಿದೆ. ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿವೆ.
ಆಳುವವರು ಗ್ರಾಮೀಣ ಭಾರತಕ್ಕೆ ಮರಳಬೇಕು. ಪರಿಸರ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಪುನರ್ನಿರ್ಮಾಣದ ಮೇಲೆ ಕೇಂದ್ರೀಕರಿಸಬೇಕು. ಅಂದರೆ, ಕೃಷಿಯನ್ನು ಸುಸ್ಥಿರವಾಗಿ ಆಧುನಿಕಗೊಳಿಸಬೇಕು, ಭೂ ಬಳಕೆ ಯೋಜನೆಯನ್ನು ಜಾರಿಗೊಳಿಸಬೇಕು, ಬೋರ್‌ವೆಲ್ ತೋಡುವುದನ್ನು ನಿಲ್ಲಿಸಬೇಕು ಹಾಗೂ ಸ್ಥಿರವಾದ ನೀರು ಮತ್ತು ತ್ಯಾಜ್ಯ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬೇಕು.
ನಮಗೆ ಹೊಸ ರಾಷ್ಟ್ರೀಯ ಚಿಂತನೆಯ ಅಗತ್ಯವಿದೆ. ಇದಕ್ಕೆ ನಗರದ ಮೇಲಿನ ಅತಿಯಾದ ಕೇಂದ್ರೀಕರಣವನ್ನು ನಿಲ್ಲಿಸಬೇಕು. ನಿಜವಾದ ವಿಕೇಂದ್ರೀಕರಣದ ಕಡೆಗೆ ಮೂಲಭೂತ ನೀತಿಯನ್ನು ಬದಲಾಯಿಸಬೇಕು. ಗೇಟೆಡ್ ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರಿಗೆ ಮಾತ್ರ ರಾಷ್ಟ್ರವನ್ನು ವಿನ್ಯಾಸಗೊಳಿಸುವುದನ್ನು ನಿಲ್ಲಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಕಾಂಕ್ರೀಟೀಕರಣವನ್ನು ನಗರ ಅಭಿವೃದ್ಧಿಯೆಂದು ಭಾವಿಸುವ ಭ್ರಮೆಯಿಂದ ಹೊರಬರಬೇಕು.
ಮಾಹಿತಿ ಮೂಲ: ದಿ ಕ್ವಿಂಟ್