ಧರ್ಮಸ್ಥಳದ ನೇತ್ರಾವತಿಯಲ್ಲಿ ಪತ್ತೆಯಾಗುತ್ತಿದ್ದ ಅನಾಥ ಹೆಣಗಳಿಗೆ ಸೌಜನ್ಯ ಪ್ರಕರಣ ಹೇಗೆ ಬ್ರೇಕ್ ಹಾಕಿತ್ತೋ, ಆಳ್ವಾಸ್ ಸಾವುಗಳಿಗೆ ಕಾವ್ಯ ಪೂಜಾರಿ ಆತ್ಮಹತ್ಯೆ ಪ್ರಕರಣ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿತ್ತು. ಕಾವ್ಯ ಪೂಜಾರಿ ಸಾವು, ಜನನುಡಿ ಇತ್ಯಾದಿ ಪ್ರತಿರೋಧದ ಬಳಿಕ ಬಣ್ಣ ಬಯಲಾಗಿದ್ದರಿಂದ, ಈಗೀಗ ದೀಪಾವಳಿ, ಓಣಂ ನಡೆಸುತ್ತಿದ್ದಂತೆ ಔಪಚಾರಿಕವಾಗಿ ನಡೆಸುತ್ತಿದ್ದ ಇಫ್ತಾರ್ ಕಾರ್ಯಕ್ರಮಕ್ಕೆ ಈ ಬಾರಿ ಇನ್ನಿಲ್ಲದ ಪ್ರಚಾರ ನೀಡಲಾಗಿದೆ.
2014ರಲ್ಲಿ ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಪೂರೈಸಿ ಸುವರ್ಣಮಹೋತ್ಸವ ಆಚರಿಸಿದ್ದಕ್ಕೂ ಈ ದೇಶದಲ್ಲಿ ಮುಸ್ಲೀಮರ ವಿರುದ್ಧ ದ್ವೇಷ ಹೆಚ್ಚಾಗಿದ್ದಕ್ಕೂ ಸಂಬಂಧ ಇದೆಯೋ ಇಲ್ಲವೋ ಎಂಬುದಕ್ಕೆ ಯಾವ ಅಧ್ಯಯನವೂ ಬೇಕಾಗಿಲ್ಲ. ಇಂತಹ ವಿಶ್ವ ಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾಗಿದ್ದವರು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ ಎಂ ಮೋಹನ ಆಳ್ವರು. ವಿಶ್ವ ಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆಯವರು.
‘ಡಾ ಎಂ ಮೋಹನ್ ಆಳ್ವರಿಗೆ ವಿಶ್ವ ಹಿಂದೂ ಪರಿಷತ್ ಅಂದರೆ ಏನೆಂದೇ ಗೊತ್ತಿರಲಿಲ್ಲ, ಯಾರೋ ಅವರನ್ನು ಅಧ್ಯಕ್ಷರನ್ನಾಗುವಂತೆ ಕೇಳಿಕೊಂಡಿರ್ತಾರೆ, ಇವರು ತಲೆ ಅಲ್ಲಾಡಿಸಿರ್ತಾರೆ’ ಎಂದು ಅಂದುಕೊಳ್ಳುವಂತೇ ಇಲ್ಲ. ಯಾಕೆಂದರೆ 2010 ರಿಂದಲೂ ಮಂಗಳೂರು ಮತ್ತು ಉಡುಪಿಯಲ್ಲಿ ನಡೆದ ಬಹುತೇಕ ಬೃಹತ್ ಹಿಂದೂ ಸಮಾಜೋತ್ಸವಗಳ ಉಸ್ತುವಾರಿ ಮತ್ತು ಅಧ್ಯಕ್ಷತೆ ಡಾ ಮೋಹನ ಆಳ್ವರದ್ದೇ ಆಗಿತ್ತು. ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷತೆಯನ್ನು 2014ರಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದ ಮೋಹನ ಆಳ್ವರು ರಾಜ್ಯಾದ್ಯಂತ ಸಮಾವೇಶಗಳನ್ನು ಸಂಘಟಿಸಿದರು. ಆ ಮೂಲಕ ಬರಪೂರ ಕೋಮುಗಲಭೆ, ಸಾವು ನೋವುಗಳ ಕೊಡುಗೆಯನ್ನು ನಗುನಗುತ್ತಲೇ ನೀಡಿದರು. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕರಾವಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಮತ್ತು ಕೋಮುಗಲಭೆಗಳ ಬಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ಚಿಂತಕರವರೆಗೂ ಚರ್ಚೆ ನಡೆದಿದೆ. ಇಷ್ಟಾದರೂ ಅವರು ವಿರಮಿಸಲಿಲ್ಲ. 2015 ಮಾರ್ಚ್ 9ರ ಉಡುಪಿ ಬೃಹತ್ ಹಿಂದೂ ಸಮಾಜೋತ್ಸವ ಅಧ್ಯಕ್ಷತೆಯನ್ನು ಮೋಹನ್ ಆಳ್ವರು ವಹಿಸಿದ್ದರು. ಇಂತಹ ಸಮಾಜೋತ್ಸವಗಳು ಉಡುಪಿಯಲ್ಲಿ ಮಂಗಳೂರಿನ ದನದ ವ್ಯಾಪಾರಿ ಹುಸೈನಬ್ಬ ಕೊಲೆಯವರೆಗೆ ತಲುಪಿಸುವಲ್ಲಿ ಯಶಸ್ವಿಯಾದವು.

ಡಾ ಮೋಹನ್ ಆಳ್ವರ ಆಳ್ವಾಸ್ ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆದ ವಿದ್ಯಾರ್ಥಿನಿಯರ ಸಾವುಗಳೆಷ್ಟು? ಹೆಣ್ಮಕ್ಕಳ ಸರಣಿ ಸಾವುಗಳಿಗೂ ಈ ಕಾಲೇಜಿನ ಕಿರುಕುಳಗಳಿಗೂ ಸಂಬಂಧವೇ ಇಲ್ಲವೇ? ಕಾವ್ಯ ಪೂಜಾರಿ ಆತ್ಮಹತ್ಯೆ ಅಂತ ಒಮ್ಮೆ ಗೂಗಲ್ ಮಾಡಿದರೂ ಆಳ್ವಾಸ್ ಕಾಲೇಜಿನ ಕರ್ಮಕಾಂಡ ಏನು ಎಂಬುದು ತಿಳಿಯುತ್ತದೆ. ನುಡಿಸಿರಿ, ಆಳ್ವಾಸ್ ವಿರಾಸತ್ ಮಾಡುವ ಮೂಲಕ ಶಿಕ್ಷಣ ವ್ಯಾಪಾರದ ಈ ಹಿಂಸೆಗಳನ್ನು ಮರೆಮಾಚಿ ಆಳ್ವಾಸ್ ಎಂಬುದು ‘ಕನ್ನಡದ ಸಾಂಸ್ಕೃತಿಕ ರಾಯಭಾರಿ’ ಎಂದು ವರ್ಚಸ್ಸು ಬೆಳೆಸಿಕೊಳ್ಳಲು ಯತ್ನಿಸಿ ವಿಫಲರಾದರು. ಧರ್ಮಸ್ಥಳದ ನೇತ್ರಾವತಿಯಲ್ಲಿ ಪತ್ತೆಯಾಗುತ್ತಿದ್ದ ಅನಾಥ ಹೆಣಗಳಿಗೆ ಸೌಜನ್ಯ ಪ್ರಕರಣ ಹೇಗೆ ಬ್ರೇಕ್ ಹಾಕಿತ್ತೋ, ಆಳ್ವಾಸ್ ಸಾವುಗಳಿಗೆ ಕಾವ್ಯ ಪೂಜಾರಿ ಆತ್ಮಹತ್ಯೆ ಪ್ರಕರಣ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿತ್ತು. ಕಾವ್ಯ ಪೂಜಾರಿ ಸಾವು, ಜನನುಡಿ ಇತ್ಯಾದಿ ಪ್ರತಿರೋಧದ ಬಳಿಕ ಬಣ್ಣ ಬಯಲಾದ್ದರಿಂದ, ಈಗೀಗ ದೀಪಾವಳಿ, ಓಣಂ ನಡೆಸುತ್ತಿದ್ದಂತೆ ಔಪಚಾರಿಕವಾಗಿ ನಡೆಸುತ್ತಿದ್ದ ಇಫ್ತಾರ್ ಕಾರ್ಯಕ್ರಮಕ್ಕೆ ಈ ಬಾರಿ ಇನ್ನಿಲ್ಲದ ಪ್ರಚಾರ ನೀಡಲಾಗಿದೆ. ಇದೊಂದು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಆಕರ್ಷಿಸುವ ‘ವ್ಯಾಪಾರಿ ಗಿಮಿಕ್’ ಅಷ್ಟೇ ಹೊರತು ಇನ್ನೇನೂ ಅಲ್ಲ. ಇಷ್ಟಕ್ಕೂ, ನೂರು ಇಲಿ ತಿಂದ ಬಳಿಕ ಬೆಕ್ಕೊಂದು ಸೌಹಾರ್ದತೆಯ ತಪಸ್ಸಿಗೆ ಕುಳಿತಿದೆಯೆಂದರೆ, ಇಲಿಗಳು ಸ್ವಲ್ಪ ಅನುಮಾನ ಪಡುವುದು ಉತ್ತಮ.
ಡಾ ಮೋಹನ್ ಆಳ್ವರು ಕರಾವಳಿಯನ್ನು ಕುಲಗೆಡಿಸಲು ಮಾಡಿರುವ ಅವಾಂತರಗಳು ಒಂದೆರಡಲ್ಲ. ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ-ಅತ್ಯಾಚಾರ ನಡೆದಾಗ ಇಡೀ ಜಿಲ್ಲೆ ಒಂದಾಗಿ ಪ್ರತಿಭಟಿಸಿತ್ತು. ಮುಂಡಾಸುಧಾರಿ, ಧಾರ್ಮಿಕ ಮಾಫಿಯಾ ಈ ಕೊಲೆ-ಅತ್ಯಾಚಾರದ ಹಿಂದೆ ಇದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿತ್ತು. ಆದರೆ ಡಾ ಮೋಹನ್ ಆಳ್ವರು ಮಾತ್ರ ಸೌಜನ್ಯ ಹೋರಾಟಗಾರರ ವಿರುದ್ಧ ನಿಂತು, ಧರ್ಮ ಸಂರಕ್ಷಣಾ ಸಮಾವೇಶದ ಉಸ್ತುವಾರಿಯನ್ನು ನೋಡಿಕೊಂಡರು. ಅಕ್ಟೋಬರ್ 15, 2023ರಂದು ಧರ್ಮಸ್ಥಳದ ಪರವಾಗಿ ಉಗ್ರ ಭಾಷಣ ಮಾಡಿದರು. ಅದಲ್ಲದೇ ಧರ್ಮಸ್ಥಳದಲ್ಲಿ ಸೌಜನ್ಯ ಹೋರಾಟಗಾರರ ಅವಹೇಳನಕ್ಕೆಂದೇ ನಡೆದ ಸಭೆಯ ಸಂಪೂರ್ಣ ಉಸ್ತುವಾರಿಯನ್ನೂ ಮೋಹನ್ ಆಳ್ವರೇ ವಹಿಸಿದ್ದರು.
ಡಾ ಮೋಹನ್ ಆಳ್ವ ಈಗ ಬದಲಾಗಿದ್ದಾರೆಯೇ? ವಿಶ್ವ ಹಿಂದೂ ಪರಿಷತ್‌ನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆಯೇ? ಸೌಜನ್ಯ ಹೋರಾಟಗಾರರ ಪರ ಮೋಹನ್ ಆಳ್ವರಿದ್ದಾರೆಯೇ? ಮಂಗಳೂರು, ಉಡುಪಿಯಲ್ಲಿ ನಡೆದ ಹತ್ತಾರು ದನದ ವ್ಯಾಪಾರಿಗಳ ಸಾವು, ಕೋಮುಗಲಭೆಗಳಲ್ಲಿ ಆಗಿರುವ ಸಾವು ನೋವುಗಳು, ಎಲ್ಲಕ್ಕಿಂತ ಮುಖ್ಯವಾಗಿ ಕರಾವಳಿಗರು ಕಳೆದುಕೊಂಡ ಸಂಬಂಧಗಳಿಗೆ ಡಾ ಎಂ ಮೋಹನ್ ಆಳ್ವ ನೇತೃತ್ವದಲ್ಲಿ ನಡೆದ ಹಿಂದೂ ಸಮಾಜೋತ್ಸವಗಳೇ ಕಾರಣ. ಇವೆಲ್ಲದರ ಬಗ್ಗೆ ಡಾ ಮೋಹನ್ ಆಳ್ವರ ನಿಲುವು ಏನು?

ಈ ಬಾರಿ ಅಂದರೆ 2025ರಲ್ಲಿ ಆಳ್ವಾಸ್‌ನಲ್ಲಿ ನಡೆಯುತ್ತಿರುವ 22ನೇ ಇಫ್ತಾರ್ ಕೂಟ. ಅಂದರೆ, ಮಂಗಳೂರು, ಉಡುಪಿಯ ಹಿಂದೂ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿದ್ದ ವರ್ಷದಲ್ಲೂ ಡಾ ಮೋಹನ ಆಳ್ವರು ಇಫ್ತಾರ್ ಕೂಟ ಮಾಡಿದ್ದಾರೆ. ಹಿಂದೂ ಸಮಾಜೋತ್ಸವದಲ್ಲಿ ಆಳ್ವರು ಭಾಷಣ ಮಾಡಿದ ಬಳಿಕ ಕೋಮುಗಲಭೆ ಆದ ವರ್ಷದಲ್ಲೂ ಆಳ್ವಾಸ್ ಇಫ್ತಾರ್ ಕೂಟ ನಡೆದಿದೆ. ವಿಶ್ವ ಹಿಂದೂ ಪರಿಷತ್ ಸುವರ್ಣ ಸಮಿತಿಯ ಅಧ್ಯಕ್ಷರಾದ ವರ್ಷದಲ್ಲೂ ಇಫ್ತಾರ್ ಕೂಟ ನಡೆಸಿದ್ದಾರೆ. ಹಾಗಾಗಿ ಆಳ್ವರು ಇಫ್ತಾರ್ ಕೂಟ ಮಾಡಿದ ತಕ್ಷಣ ಅವರು ಜಾತ್ಯತೀತರಾಗುವುದಿಲ್ಲ. ಅದ್ದರಿಂದ ಇಫ್ತಾರ್‌ನಲ್ಲಿ ಉಪವಾಸ ಬಿಡುವುದಕ್ಕೂ ಮೊದಲು ‘ತಾವು ಈ ಹಿಂದೆ ಭಾಷಣ ಮಾಡಿದ ಹಿಂದೂ ಸಮಾಜೋತ್ಸವ, ಆ ಬಳಿಕ ನಡೆದ ಸಾವು ನೋವುಗಳು, ಕೋಮುಗಲಭೆಗಳು, ವಿಎಚ್‌ಪಿ ಸುವರ್ಣ ಸಂಭ್ರಮದ ಬಳಿಕದ ಕೋಮುದ್ವೇಷಗಳು, ಸೌಜನ್ಯ ಪ್ರಕರಣದ ಬಗ್ಗೆ ತಮ್ಮ ಈಗಿನ ನಿಲುವು ಏನು?’ ಎಂದು ಪ್ರಶ್ನಿಸಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರೆ ಮಾತ್ರ ಅದು ಹಲಾಲ್ ಇಫ್ತಾರ್ ಆಗಬಹುದೇನೋ!
ಇಷ್ಟಾದರೂ ಏನೂ ಪ್ರಶ್ನಿಸದೇ ಆಳ್ವಾಸ್ ಇಫ್ತಾರ್‌ಗೆ ಹೋಗೇ ಹೋಗ್ತೀವಿ ಎನ್ನುವವರು ಕರಾವಳಿಯ ಕೋಮುವಾದ, ಅಮಾಯಕ ಮುಸ್ಲಿಮರ ಸಾವು ನೋವು, ಸೌಹಾರ್ದತೆ, ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸುವ ಎಲ್ಲಾ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ