ಹೆಂಡತಿಗೂ ನಯಾಪೈಸೆ ಕೊಡದೆ ಹೋದ ಭೈರಪ್ಪ; ‘ವಿಲ್’ ಬಗ್ಗೆ ಭಾರೀ ಟೀಕೆ!

Date:

Advertisements
ತಮ್ಮೆಲ್ಲ ಸ್ಥಿರ ಮತ್ತು ಚರಾಸ್ತಿಗಳನ್ನು ಸಾಹಿತ್ಯ ಭಂಡಾರದ ಅರುಣ ಅವರಿಗೆ ಕೊಟ್ಟಿರುವ ಭೈರಪ್ಪ, ಕೊನೆಗಾಲದವರೆಗೆ ಹೆಂಡತಿ ತನ್ನ ಮನೆಯಲ್ಲಿ ಉಳಿಯಬಹುದು, ನಂತರ ಆ ಮನೆಯೂ ಭೈರಪ್ಪ ಪ್ರತಿಷ್ಠಾನಕ್ಕೆ ಸೇರುತ್ತದೆ ಎಂದು ವಿಲ್‌ನಲ್ಲಿ ಬರೆದಿದ್ದಾರೆ.

ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರು ತಮ್ಮ ಹೆಂಡತಿ ಮಕ್ಕಳಿಗೆ ಯಾವುದೇ ಸ್ಥಿರ ಮತ್ತು ಚರಾಸ್ತಿಯನ್ನು ಕೊಡದಿರುವಂತೆ ವಿಲ್ (ಉಯಿಲು) ಬರೆದಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಕೌಟುಂಬಿಕ ಕಲಹಗಳು ಏನೇ ಇದ್ದರೂ, ಜೀವನವಿಡೀ ಜೊತೆಯಲ್ಲಿ ಸಂಸಾರ ಮಾಡಿದ ಹೆಂಡತಿಯನ್ನು ಕಡೆಗಣಿಸಬಾರದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಭೈರಪ್ಪನವರ ಕೃತಿಗಳನ್ನು ಪ್ರಕಟಿಸುತ್ತಿದ್ದ ಸಾಹಿತ್ಯ ಭಂಡಾರ ಪ್ರಕಾಶನದ ಎಂ.ಜಿ. ಅರುಣ ಅವರಿಗೆ ಆಸ್ತಿಯನ್ನು ಬರೆದಿಟ್ಟಿದ್ದಾರೆ. ಜೊತೆಗೆ ಹೊಸದಾಗಿ ಸ್ಥಾಪನೆಯಾಗಿರುವ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಚಟುವಟಿಕೆಗಳಿಗೆ ಮಾತ್ರ ಈ ಆಸ್ತಿಯನ್ನು ಬಳಸಿಕೊಳ್ಳಬೇಕೆಂದು ಸೂಚಿಸಿದ್ದಾರೆ. ತಮ್ಮ ಪುಸ್ತಕದ ರಾಯಲ್ಟಿ, ಹಸ್ತಪ್ರತಿ ಇತ್ಯಾದಿಗಳೆಲ್ಲವೂ ಅರುಣ ಅವರಿಗೆಯೇ ಕೊಟ್ಟಿದ್ದು, ಎಲ್ಲವನ್ನೂ ಪ್ರತಿಷ್ಠಾನದ ಕಾರ್ಯಗಳಿಗೆ ಮೀಸಲಿಡುವಂತೆ ಹೇಳಿದ್ದಾರೆ.

ಅರುಣ ಅವರಿಗೆ 50 ಲಕ್ಷ ರೂ. ಕೊಡುಗೆ (ಗಿಫ್ಟ್) ರೂಪದಲ್ಲಿ ಕೊಟ್ಟಿದ್ದಾರೆ. ಆದರೆ ಆಸ್ತಿಯನ್ನು ಪ್ರತಿಷ್ಠಾನದ ಚಟುವಟಿಕೆಗಳಿಗೆ ಮಾತ್ರ ಮೀಸಲಿಡುವಂತೆ ಸ್ಪಷ್ಟಪಡಿಸಿದ್ದಾರೆ.

Advertisements

ಉಯಿಲು ಮತ್ತು ತಿದ್ದುಪಡಿ ಉಯಿಲುಗಳನ್ನು ಬರೆದಿರುವ ಭೈರಪ್ಪ ಆಗಾಗ್ಗೆ ತಮ್ಮ ನಿಲುವುಗಳನ್ನು ಬದಲಿಸಿರುವುದು ಕಂಡು ಬರುತ್ತದೆ. ತಿದ್ದುಪಡಿ ಉಯಿಲಿನಲ್ಲಿ ಪುತ್ರನಿಗೆ 50 ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಬರೆದ ವಿಲ್‌ನಲ್ಲಿ ಈ ಕೊಡುಗೆಯನ್ನು ರದ್ದುಪಡಿಸಿರುವುದರಿಂದ ಭೈರಪ್ಪನವರ 2ನೇ ಪುತ್ರ ಎಸ್.ಬಿ. ಉದಯಶಂಕರ ಅವರಿಗಾಗಲಿ, ಪತ್ನಿ ಎಸ್.ಬಿ. ಸರಸ್ವತಿ ಅವರಿಗಾಗಿ ಭೈರಪ್ಪನವರ ಯಾವುದೇ ಆಸ್ತಿ ಸಿಗದಂತಾಗಿದೆ.

ಇದನ್ನೂ ಓದಿರಿ: ಸಮೀಕ್ಷೆ | ಬಿಜೆಪಿ ನಾಯಕರ ಅಂತರಂಗದ ಮನುವಾದ ಬಯಲು: ಸಿದ್ದರಾಮಯ್ಯ

ಮೊದಲ ಮಗ ಆರ್ಥಿಕವಾಗಿ ಉತ್ತಮವಾಗಿರುವುದರಿಂದ ಆತನಿಗೆ ಯಾವುದೇ ಪಾಲು ನೀಡಿಲ್ಲ ಎಂದು ಮೊದಲ ವಿಲ್‌ನಲ್ಲೇ ಸ್ಪಷ್ಟಪಡಿಸಿದ್ದ ಭೈರಪ್ಪ, “ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸವನ್ನು ‘ಎಸ್.ಎಲ್.ಭೈರಪ್ಪ ಪ್ರತಿಷ್ಠಾನ’ದ ಕಚೇರಿ ಹಾಗೂ ಸ್ಮಾರಕವನ್ನಾಗಿ ಮಾಡಬೇಕು. ಪತ್ನಿ ಸರಸ್ವತಿಯವರ ಜೀವಿತಾವಧಿವರೆಗೆ ಈ ಮನೆಯಲ್ಲಿಯೇ ಇರಲು ಅವಕಾಶ ನೀಡಬೇಕು. ಆದರೆ ಮನೆಯನ್ನು ಮಾರಾಟ ಅಥವಾ ಪರಭಾರೆ ಮಾಡುವಂತಿಲ್ಲ. ಅವರ ಕಾಲಾನಂತರ ಈ ಮನೆಯನ್ನು ‘ಎಸ್.ಎಲ್.ಭೈರಪ್ಪ ಪ್ರತಿಷ್ಠಾನ’ಕ್ಕೆ ಹಸ್ತಾಂತರಿಸಬೇಕು” ಎಂದು ನಿರ್ದೇಶಿಸಿದ್ದಾರೆ.

2020 ಆಗಸ್ಟ್ 14ರಂದು ಮೊದಲ ವಿಲ್, 2022 ಮಾ.15ರಂದು ಹಳೆಯ ವಿಲ್‌ ರದ್ದುಪಡಿಸಿ ಬೇರೊಂದು ವಿಲ್‌ ಮಾಡಿಸಿದ್ದರು. ಆ ವಿಲ್‌ನಲ್ಲಿ ತಮ್ಮ ಮೈಸೂರಿನ ವಾಸದ ಮನೆಯನ್ನು ಕಿರಿಯ ಮಗ ಎಸ್.ಬಿ. ಉದಯಶಂಕರನಿಗೆ ಬರೆದಿದ್ದರು. ತಮ್ಮ ಪತ್ನಿಗೆ ಆ ವಾಸದ ಮನೆಯ ಅನುಭವಿಸುವ ಹಕ್ಕನ್ನು ಮಾತ್ರ ನೀಡಿದ್ದರು. ಈ ಮನೆಯ ಪರಭಾರೆ ಅಥವಾ ಮಾರಾಟದ ಹಕ್ಕನ್ನು ಪತ್ನಿಗೆ ನೀಡಿರಲಿಲ್ಲ. ಅದಾದ ಮೂರು ವರ್ಷಗಳ ನಂತರ, 2025 ಜನವರಿ 30ರಂದು ಈ ಉಯಿಲಿಗೆ ತಿದ್ದುಪಡಿ ಮಾಡಿ, “ತಮ್ಮ ಪತ್ನಿ ಮೈಸೂರು ಮನೆಯಲ್ಲಿ ವಾಸಿಸಬಹುದು. ಆದರೆ ಮಾರಾಟ ಅಥವಾ ಪರಭಾರೆಯ ಹಕ್ಕನ್ನು ನೀಡಿಲ್ಲ. ಹಾಗೆಯೇ, ತಮ್ಮ ಎರಡನೇ ಮಗ ಉದಯಶಂಕರನಿಗೆ ನೀಡಿದ್ದ ಮನೆಯ ಮಾಲೀಕತ್ವವೂ ಇಲ್ಲ” ಎಂದಿದ್ದಾರೆ.

ಒಟ್ಟಾರೆಯಾಗಿ ಹೆಂಡತಿ ಮತ್ತು ಮಕ್ಕಳಿಗೆ ಏನನ್ನೂ ಕೊಡದೆ ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಬರೆಹಗಾರ ನಾಗೇಗೌಡ ಕೀಲಾರ ಅವರು, “ಮಕ್ಕಳಿಗೆ ಆಸ್ತಿ ಕೊಡುವುದಿಲ್ಲ ಎನ್ನುವುದೇನೋ ಸರಿ. ಆದರೆ ದಶಕಗಳ ಕಾಲ ಜೊತೆಯಾಗಿ ಬದುಕಿದ ಹೆಂಡತಿಗೂ ಒಂದು ನಯಾ ಪೈಸೆ ಆಸ್ತಿ ಕೊಡಲ್ಲ ಅನ್ನೋದು ಯಾವ ನ್ಯಾಯ? ಈ ಮನುಷ್ಯನಿಗೆ ಎರಡು ಮಕ್ಕಳು ಹೆತ್ತು ಕೊಟ್ಟಿದ್ದು, ಈ ಮನುಷ್ಯನ ಜೊತೆಗೆ ಈ ಎರಡು ಮಕ್ಕಳನ್ನು ಸಾಕಿರೋದು, ಈ ಮನುಷ್ಯನಿಗೆ ದಶಕಗಳ ಕಾಲ ಅಡುಗೆ ಬೇಯಿಸಿ ಹಾಕಿರೋದು.. ಪಟ್ಟಿ ದೊಡ್ಡದು. ಬಹುಶಃ ಈ ಮನುಷ್ಯ- ಹೆಂಡತಿಗೆ ಜೀವನ ಪೂರ್ತಿ ಮೂರು ಹೊತ್ತು ಊಟ ಹಾಕಿದ್ದೀನಲ್ಲ, ಇಷ್ಟು ಸಾಕು- ಅಂತ ಭಾವಿಸಿದ್ದಾರೆ. ಇದು ವ್ಯಾಮೋಹ ಮೀರಿರುವುದಲ್ಲ, ಇದು ಕ್ರೌರ್ಯ” ಎಂದು ಟೀಕಿಸಿದ್ದಾರೆ.

ಮುಂದೆ ಓದಿರಿ: ಭೈರಪ್ಪ ಮತ್ತು ಕುತರ್ಕದ ಉರುಳು

ಬರೆಹಗಾರ ವಿ.ಎಲ್.ನರಸಿಂಹಮೂರ್ತಿ ಅವರು ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದು, “ಸ್ವಕೇಂದ್ರಿತತೆ ವೈದಿಕ ಧರ್ಮದ ಆತ್ಮ. ಅದರಲ್ಲೂ ಸಂಪ್ರದಾಯವಾದಿ ಬ್ರಾಹ್ಮಣ ಗಂಡಸರಷ್ಟು ಸ್ವಕೇಂದ್ರಿತ ಮನಸ್ಥಿತಿ ಇರುವವರು ಇಡಿ ಜಗತ್ತಿನಲ್ಲಿ ಹುಡುಕಿದರೂ ಎಲ್ಲೂ ಸಿಗುವುದಿಲ್ಲ. ಇವರು ತಮ್ಮ ಅನುಕೂಲಕ್ಕಾಗಿಯೇ ‘ಮನುಸ್ಮೃತಿ’ಯನ್ನು ಸೃಷ್ಟಿ ಮಾಡಿಕೊಂಡು ಅದನ್ನು ನಂಬಿ ಬದುಕುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಬ್ರಾಹ್ಮಣ ಹೆಂಗಸರೂ ಸೇರಿದಂತೆ ಇಡೀ ಹಿಂದೂ ಧರ್ಮ ಇರುವುದೇ ತಮ್ಮ ಸೇವೆಗೆ ಎಂದು ನಂಬಿಸಿಬಿಟ್ಟಿದ್ದಾರೆ. ಹಾಗಾಗಿಯೇ ಅವರಿಗೆ ಬದುಕಿದ್ದಾಗಲೂ ಸತ್ತಿದ್ದಾಗಲೂ ತಮ್ಮ ಬಗ್ಗೆಯೇ ಚಿಂತೆ. ತಾವು ಇತರರಿಗೆ ಏನು ಕೊಡುತ್ತೇವೆ ಎನ್ನುವುದಕ್ಕಿಂತ ಬೇರೆಯವರಿಂದ ತಮಗೆ ಏನು ಸಿಗುತ್ತದೆ ಎನ್ನುವುದಷ್ಟೇ ವೈದಿಕರಿಗೆ ಮುಖ್ಯ. ಅವರ ಲೋಕದೃಷ್ಟಿ ನಿಂತಿರುವುದೇ ಈ self centric attitudeನ ಮೇಲೆ” ಎಂದು ಕುಟುಕಿದ್ದಾರೆ.

ಮುಂದುವರಿದು, “ಬದುಕಿದ್ದಾಗ ಹೇಗೆ ಬದುಕಿದ್ದೇವೆ ಎನ್ನುವುದಕ್ಕಿಂತ ಸತ್ತ ಮೇಲೆ ಜಗತ್ತು ತಮ್ಮನ್ನ ಹೀಗೆ ನೋಡಲಿ ಎನ್ನುವ ಚಿಂತೆ ಬ್ರಾಹ್ಮಣರಿಗೆ ಜಾಸ್ತಿ. ಅದಕ್ಕೆ ಈ ವಿಲ್ ಬರೆಸುವುದು, ತಮ್ಮ ಅಂತ್ಯಸಂಸ್ಕಾರ ಇಂತವರು ಮಾಡಬೇಕು, ಹೀಗಿಗೆ ಈ ವಿಧಿವಿಧಾನಗಳ ಪ್ರಕಾರ ನಡೆಯಬೇಕು ಎಂದು ಬಯಸುವುದು. ಭೈರಪ್ಪನವರು ಇನ್ನೂ ಮುಂದುವರೆದು ತಮ್ಮ ಮನೆಯನ್ನೇ ಸ್ಮಾರಕ ಮಾಡಬೇಕೆಂದು ಬಯಸಿದ್ದಾರಂತೆ. ತಾನು ಬರೆದು ಸಂಪಾದನೆ ಮಾಡಿದ್ದನ್ನು ಹೀಗೆ ಹೀಗೆ ಖರ್ಚು ಮಾಡಬೇಕು ಅಂತ ಬರೆದಿಟ್ಟು‌ ಹೋಗಿರುವುದು. ತಮ್ಮ ಹೆಂಡತಿ ಮಕ್ಕಳಿಗೆ ದುಡ್ಡು ಸಿಗದಂತೆ ಮಾಡಿರುವುದನ್ನೆ ದೊಡ್ಡದು ಅಂತ ಬಿಂಬಿಸುವುದು ಅಸಹ್ಯದ ಕೆಲಸ. ಸತ್ತ ಮೇಲೂ ತಾನು ಅಂದುಕೊಂಡಂತೆ ನಡೆಯಬೇಕು ಅಂದುಕೊಳ್ಳುವುದು ಸ್ವಾರ್ಥದ ಪರಮಾವಧಿ. ಈ ಸ್ವಕೇಂದ್ರಿತ ಮನೋಧರ್ಮ ವೈದಿಕ ಧರ್ಮ ನಂಬಿದ ಭೈರಪ್ಪನವರಲ್ಲಿ ಮಾತ್ರ ಇಲ್ಲ. ಪ್ರಗತಿಪರರಾಗಿದ್ದ ಯು. ಆರ್. ಅನಂತಮೂರ್ತಿಯವರಲ್ಲೂ ಇತ್ತು. ಹಾಗಾಗಿಯೇ ಅವರೂ ಕೂಡ ತಮ್ಮ ಅಂತ್ಯ ಸಂಸ್ಕಾರ ಇಂತಹ ವಿಧಿ ವಿಧಾನಗಳ ಪ್ರಕಾರ ನಡೆಯಬೇಕು ಅಂತ ಬಯಸಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕ ಪ್ರವಾಹ: ಭಾರೀ ಅನಾಹುತ-ಅವ್ಯವಸ್ಥೆ; ರೈತರ ನೆರವಿಗೆ ನಿಲ್ಲುವುದೇ ಸರ್ಕಾರ?

ಭಾರೀ ಮಳೆಯಿಂದ ಭೀಮಾ ಮತ್ತು ಕೃಷ್ಣಾ ನದಿ ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ...

ಶಾಲೆಗಾಗಿ ಕೊಠಡಿ, ಮಕ್ಕಳಿಗಾಗಿ ಆಟೋ ರಿಕ್ಷಾ; ಹಳ್ಳಿಯ ಹಳೆ ವಿದ್ಯಾರ್ಥಿಯಿಂದ ಸರ್ಕಾರಿ ಶಾಲೆಗೆ ಹೊಸ ಜೀವ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕಚಂಗಾವಿ ಗ್ರಾಮದ ಸುಮಾರು ಅರವತ್ತು ವರ್ಷಗಳ...

ಜಾತಿ ಸಮೀಕ್ಷೆ; ಬಿಜೆಪಿಯೊಳಗೆ ಭಿನ್ನಮತ

ಜಾತಿ ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯೊಳಗೆ ಭಿನ್ನಮತ ವ್ಯಕ್ತವಾಗಿದೆ. ಸಮೀಕ್ಷೆಗೆ ಬಂದಾಗ ಮಾಹಿತಿ...

ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿ: ಹೆಚ್ ಡಿ ಕುಮಾರಸ್ವಾಮಿ ಆಗ್ರಹ

ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು...

Download Eedina App Android / iOS

X